ಡ್ರೋನ್ ಪೈಲಟ್ಸ್​ಗೆ ದೊಡ್ಡ ಡಿಮಾಂಡ್

ಫೋಟೋಗ್ರಫಿ ಮತ್ತು ವಿಡಿಯೋ ಶೂಟಿಂಗ್ ಸದಾ ಬೇಡಿಕೆಯಲ್ಲಿರುವ ಉದ್ಯಮ. ಈ ಕಾರಣಕ್ಕೆ ಉನ್ನತ ತಂತ್ರಜ್ಞಾನ ಹಾಗೂ ಹೊಸ ಸಂಶೋಧನೆಗಳೆಲ್ಲ ಬೇಗನೆ ಬಳಕೆಯಾಗುವುದು ಇದೇ ಉದ್ಯಮದಲ್ಲಿ. ಸಹಜವಾಗಿಯೇ ಈ ಕ್ಷೇತ್ರ ಉದಯೋನ್ಮುಖ ಕಲಾವಿದರಿಗೆ ಭರಪೂರ ಸಂಬಳ ಒದಗಿಸುವ ಉದ್ಯೋಗವಾಗುತ್ತಿದೆ. ಇದರ ಮುಂದುವರಿದ ಭಾಗವೇ ‘ಡ್ರೋನ್’ ಫೋಟೋಗ್ರಫಿ. ಡ್ರೋನ್​ಗಳನ್ನು ಆಪರೇಟ್ ಮಾಡುವ ಪೈಲಟ್​ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. 

ಈಗೀಗ ಮದುವೆ ಸಮಾರಂಭಗಳ ಪರಿಕಲ್ಪನೆಯೇ ಬದಲಾಗಿದೆ. ಮದುವೆಗೆ ಮುನ್ನ ಹಾಗೂ ನಂತರ ಮಾಡುವ ಶಾಸ್ತ್ರಗಳ ಜತೆ ಪ್ರೀವೆಡ್ಡಿಂಗ್ ಹಾಗೂ ಪೋಸ್ಟ್​ವೆಡ್ಡಿಂಗ್ ಕಾನ್ಸೆಪ್ಟ್​ಗಳ ಭರಾಟೆ ಹೆಚ್ಚಾಗಿದೆ. ವಿವಾಹಕ್ಕೆ ಮುನ್ನ ಹಾಗೂ ನಂತರ ಮದುಮಕ್ಕಳು ವಿವಿಧ ಆಂಗಲ್​ಗಳಲ್ಲಿ ಅದ್ಭುತ ಎನ್ನಿಸುವಂಥ ಫೋಟೋ ತೆಗೆಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡುವ ಟ್ರೆಂಡ್ ಈಗಾಗಲೇ ಜನಪ್ರಿಯವಾಗಿದೆ. ಅದಕ್ಕಾಗಿಯೇ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಗೆ ಸಾಕಷ್ಟು ಬೇಡಿಕೆ ಕುದುರಿದೆ. ಜತೆಗೆ ಅದರಲ್ಲಿ ಹೊಸ ಹೊಸ ತಂತ್ರಜ್ಞಾನ ಸಾಧ್ಯತೆಗಳೂ ಹುಟ್ಟಿಕೊಂಡಿವೆ. ಆ ಪೈಕಿ ಡ್ರೋನ್ ಫೋಟೋಗ್ರಫಿ ಕೂಡ ಒಂದು.

ಅಂದ ಮಾತ್ರಕ್ಕೆ ಡ್ರೋನ್ ಫೋಟೋಗ್ರಫಿ ಮದುವೆ ಸಂದರ್ಭಕ್ಕೆ ಮಾತ್ರ ಸೀಮಿತ ಎಂದುಕೊಳ್ಳಬೇಡಿ. ಸಿನಿಮಾ, ಕಿರುಚಿತ್ರ, ಸಾಮಾಜಿಕ ರ್ಯಾಲಿ, ರಾಜಕೀಯ ಕಾರ್ಯಕ್ರಮ ಮುಂತಾದವುಗಳಲ್ಲಿಯೂ ಡ್ರೋನ್ ಫೋಟೋಗ್ರಫಿಗೆ ಭಾರಿ ಬೇಡಿಕೆ ಕುದುರಿದೆ. ಹಿಂದೆಲ್ಲಾ ‘ಟಾಪ್ ಆಂಗಲ್’ ಫೋಟೋ ಅಥವಾ ವಿಡಿಯೋ ತೆಗೆಯಲು ಫೋಟೋಗ್ರಾಫರ್ ಕಸರತ್ತು ಮಾಡಬೇಕಿತ್ತು. ಈಗಲೂ ಕೆಲವು ಕಡೆ ಅದೇ ಸ್ಥಿತಿ ಇದೆ. ಸಿನಿಮಾ, ಕಿರುಚಿತ್ರ ಮುಂತಾದವುಗಳ ಚಿತ್ರೀಕರಣದಲ್ಲಿ ಕ್ರೇನ್ ಬಳಸಬೇಕು. ಇದು ಸವಾಲಿನ ಕೆಲಸ. ಅದಲ್ಲದೆ ಆ ಪರಿಕರಗಳ ಸಾಗಾಣಿಕೆ-ನಿರ್ವಹಣೆ ತುಂಬಾ ಕಷ್ಟ. ಹೆಚ್ಚು ವೆಚ್ಚದಾಯಕವೂ ಹೌದು. ಇಷ್ಟೆಲ್ಲ ಕಷ್ಟಪಟ್ಟರೂ ಅದರಿಂದ ಮಾಡಿದ ಫೋಟೊಗ್ರಫಿ ಅಥವಾ ವಿಡಿಯೋಗ್ರಫಿ ತೃಪ್ತಿ ನೀಡುವುದಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಈ ಕೆಲಸವನ್ನು ಸುಲಭಗೊಳಿಸಲೆಂದೇ ಬಂದಿದೆ ‘ಡ್ರೋನ್ ಫೋಟೋಗ್ರಫಿ’. ಹಾಗಾಗಿಯೇ ಡ್ರೋನ್ ಪೈಲಟ್​ಗಳಿಗೆ ಈಗ ಬೇಡಿಕೆ ಹೆಚ್ಚು. ಕ್ರೇನ್​ನಂತೆ ಇದಕ್ಕೆ ಬೃಹತ್ ಉಪಕರಣಗಳ ಅವಶ್ಯಕತೆ ಇಲ್ಲ. ಸಾಗಾಣಿಕೆಯ ಕಿರಿಕಿರಿಯೂ ಇಲ್ಲ. ಜತೆಗೆ, ಉತ್ತಮ ಪ್ರೆಸೆಂಟೇಷನ್ ನೀಡುವ ಮಟ್ಟದಲ್ಲಿ ತಂತ್ರಜ್ಞಾನ ಬಳಸಿ ಶೂಟಿಂಗ್ ಮಾಡುವ ಕಾರಣ ಡ್ರೋನ್ ಈಗ ನಂ.1 ಸ್ಥಾನದಲ್ಲಿದ್ದು, ಇದನ್ನು ಚಲಾಯಿಸುವ ಪೈಲಟ್​ಗಳಿಗೆ ವಿಶೇಷ ಬೇಡಿಕೆ ಇದೆ.

ಒಂದು ವೆಡ್ಡಿಂಗ್ ಶೂಟಿಂಗ್​ನಿಂದ ಒಂದು ದಿನಕ್ಕೆ 5- 10 ಸಾವಿರ ರೂ. ಸಂಪಾದಿಸಬಹುದು. ಸ್ವಂತ ಡ್ರೋನ್ ಹೊಂದಿ, ಫೋಟೋಗ್ರಾಫರ್ ಜತೆ ಟೈ ಅಪ್ ಕೂಡ ಆಗಬಹುದು. ಒಂದು ವೆಡ್ಡಿಂಗ್​ನ ಫೋಟೊಗ್ರಫಿಗೆ ಮತ್ತು ಡ್ರೋನ್​ನಿಂದ ವಿಡಿಯೋ ಶೂಟ್ ಮಾಡಲು ಒಂದು ಲಕ್ಷ ರೂ.ಗಿಂತ ಹೆಚ್ಚು ಮೊತ್ತ ಪಡೆಯಲಾಗುತ್ತದೆ. ಕೇವಲ ಡ್ರೋನ್ ಸೇವೆ ತೆಗೆದುಕೊಂಡರೆ ದಿನಕ್ಕೆ 15 ಸಾವಿರ ರೂ. ಪಡೆಯಲಾಗುತ್ತದೆ. ವೆಡ್ಡಿಂಗ್ ಶೂಟಿಂಗ್​ಗೆ ದಿನಕ್ಕೆ 10-15 ಸಾವಿರ ರೂ. ಪಡೆಯಲಾಗುತ್ತದೆ. ಇಷ್ಟೇ ಅಲ್ಲದೇ, ಬೃಹತ್ ಸ್ಥಳಗಳ ಸಮೀಕ್ಷೆ, ವಿಪತ್ತು ನಿರ್ವಹಣೆ ಕಾರ್ಯಾಚರಣೆ, ತೋಟ- ಗದ್ದೆಗಳಿಗೆ ಔಷಧ ಸಿಂಪರಣೆ ಇತ್ಯಾದಿಗಳಲ್ಲೂ ಡ್ರೋನ್ ಬಳಸಲಾಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಕಾಲೇಜುಗಳು ಡ್ರೋನ್​ಫೋಟೋಗ್ರಫಿಗೆಂದೇ ಕೆಲವು ಕೋರ್ಸ್​ಗಳನ್ನು ಶುರು ಮಾಡಿವೆ. ಜತೆಗೆ, ಕಾರ್ಪೆರೇಟ್ ಇವೆಂಟ್ಸ್, ಕಾಲೇಜ್ ಎಲೆಕ್ಷನ್, ಕಲ್ಚರಲ್ ಇವೆಂಟ್​ಗಳಲ್ಲಿ ಡ್ರೋನ್ ಅವಶ್ಯಕತೆ ಕಂಡುಬರುತ್ತದೆ.

ಪರೇಟಿಂಗ್ ಹೇಗೆ?

ಡ್ರೋನ್ ಜತೆಗೆ ಗ್ರೌಂಡ್ ಕಂಟ್ರೋಲ್ ಸ್ಟೇಷನ್ ಇರುತ್ತದೆ. ಕ್ಯಾಮರಾದಿಂದ ಲೈವ್ ವಿಡಿಯೋ ಸಿಗುತ್ತಿರುತ್ತದೆ. ಲೈವ್ ವಿಡಿಯೋ ಟ್ರಾನ್ಸ್​ಮಿಷನ್ ಇರುತ್ತದೆ. ಆ ವಿಡಿಯೋ ನೋಡಿಕೊಂಡು ಡ್ರೋನ್ ಅನ್ನು ರಿಮೋಟ್ ಮೂಲಕ ಆಪರೇಟ್ ಮಾಡಬೇಕಾಗುತ್ತದೆ. ಡ್ರೋನ್​ನಲ್ಲಿ ರೆಕಾರ್ಡ್ ಕೂಡ ಆಗುತ್ತಿರುತ್ತದೆ. ಏಕಕಾಲಕ್ಕೆ ಮಾನಿಟರ್​ನಲ್ಲಿ ಡಿಸ್​ಪ್ಲೇ ಆಗುತ್ತಿರುತ್ತದೆ. ಅದನ್ನು ನೋಡಿಕೊಂಡು ಅಗತ್ಯ ಬದಲಾವಣೆಗಳನ್ನು ಮಾಡುವ ಕೌಶಲ ತಿಳಿದಿರಬೇಕಾಗುತ್ತದೆ.

ಏನೆಲ್ಲ ಕೋರ್ಸ್​ಗಳಿವೆ?
  1. ಡ್ರೋನ್ ಪೈಲಟಿಂಗ್
  2. ಡ್ರೋನ್ ಫೋಟೋಗ್ರಫಿ
  3. ಏರಿಯಲ್ ಫೋಟೋ ಗ್ರಫಿ
  4. ಡ್ರೋನ್ ಪೈಲಟ್ ಗ್ರೌಂಡ್ ಸ್ಕೂಲ್ಪೈ
  5. ಲಟ್ ಟ್ರೇನಿಂಗ್
ಸವಾಲುಗಳೇನು?

ಭೂಮಿಯ ಮೇಲೆ ಓಡಾಡುವ ವಾಹನದಲ್ಲಿ ಏನಾದರೂ ದೋಷ ಕಂಡುಬಂದರೆ ಅದು ಹಾಗೆಯೇ ನಿಂತುಬಿಡುತ್ತದೆ. ಆದರೆ ಡ್ರೋನ್ ಹಾಗಲ್ಲ. ಅದರಲ್ಲಿ ಏನಾದರೂ ದೋಷ ಉಂಟಾದರೆ ಅದು ಕ್ರ್ಯಾಷ್ ಆಗುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ ಸರಿಯಾಗಿ ಆಪರೇಟ್ ಮಾಡದಿದ್ದರೂ ಡ್ರೋನ್ ಕ್ರ್ಯಾಷ್ ಆಗುತ್ತದೆ. ಅದರಿಂದ ತೀವ್ರ ಹಾನಿಯಾಗುವುದು ಖಚಿತ. ಕಮ್ಯೂನಿಕೇಷನ್ ಸಿಸ್ಟಮ್ಲ್ಲಿ ಏನಾದರೂ ಫಾಲ್ಟ್ ಆದರೂ ಹೀಗಾಗುವ ಸಂಭವ ಇರುತ್ತದೆ. ಆದ್ದರಿಂದ ಪೈಲಟ್ ಕೆಲಸ ಸವಾಲಿನದು. ಹೊರಾಂಗಣ ಶೂಟಿಂಗ್ ಮಾಡುವಾಗ ದೊಡ್ಡ ಬಿಲ್ಡಿಂಗ್ ಅಥವಾ ಮರಗಳು ಅಡ್ಡಿ ಬರುವಂತಿದ್ದರೆ ಡ್ರೋನ್ ತನ್ನ ಗ್ರೌಂಡ್ ಕಂಟ್ರೋಲ್​ನಿಂದ ಸಂವಹನ ಕಳೆದುಕೊಂಡುಬಿಡುತ್ತದೆ. ಗ್ರೌಂಡ್ ಕಂಟ್ರೋಲ್​ನ ಬ್ಯಾಟರಿಗೆ ಕೂಡ ಒಂದು ಲಿಮಿಟೇಷನ್ ಇದೆ. ಅದರ ಲೈಫ್ ಕೇವಲ 20-30 ನಿಮಿಷಗಳು. ನಂತರ ಬ್ಯಾಟರಿ ಚೇಂಜ್ ಮಾಡಿ ಡ್ರೋನ್ ಹಾರಿಸಬೇಕು. ಇವೆಲ್ಲ ಈ ಉದ್ಯೋಗದಲ್ಲಿರುವ ಸವಾಲುಗಳು. ಸಾಮಾನ್ಯ ಕೋರ್ಸ್​ಗೆ ಆರಂಭಿಕ ಶುಲ್ಕ 30 ಸಾವಿರ ರೂಪಾಯಿ ಆಗಿರುತ್ತದೆ.

ಏರಿಯಲ್ ಫೋಟೋಗ್ರಫಿ

ಡಿಪ್ಲೊಮಾ ಕೋರ್ಸ್ ಇನ್ ಏರಿಯಲ್ ಫೊಟೋಗ್ರಫಿ ಒಂದು ಪ್ಯಾಕೇಜ್. ಇದರಲ್ಲಿ ವಿಡಿಯೋಗ್ರಫಿ, ಎಡಿಟಿಂಗ್, ರೆಕಾರ್ಡಿಂಗ್ ಹೇಳಿಕೊಡಲಾಗುತ್ತದೆ. ಡ್ರೋನ್​ನಲ್ಲಿ ಇರುವ ಕ್ಯಾಮರಾ ಬಳಸಿ ಫೋಟೋ ತೆಗೆಯುವುದು, ಮಾನಿಟರ್ ಮಾಡುವುದನ್ನೂ ತಿಳಿಸಲಾಗುತ್ತದೆ. ವಿಡಿಯೋ ಎಡಿಟಿಂಗ್ ಕೂಡ ಈ ಕೋರ್ಸ್​ನಲ್ಲಿದೆ.

ಮೂಲಹೂಡಿಕೆ

ಕಂಪ್ಲೀಟ್ ಫೋಟೋಗ್ರಫಿ, ವಿಡಿಯೋಗ್ರಫಿ ಮಾಡಲು ಉತ್ತಮ ಡ್ರೋನ್ ಕ್ಯಾಮರಾಗೆ  2-3 ಲಕ್ಷ ರೂಪಾಯಿ ಆಗುತ್ತದೆ. ಸಿನಿಮಾ ಶೂಟಿಂಗ್ ಮಾಡುವ ಕ್ಯಾಮರಾ ಅಂದಾಜು ಆರು ಲಕ್ಷ ರೂಪಾಯಿಯದ್ದಾಗಿರುತ್ತದೆ.

ಎಲ್ಲ ಪ್ರೊಫೆಷನ್​ಗೂ ಮೂಲತಃ ಒಂದು ಕೌಶಲ್ಯ ಬೇಕೇ ಬೇಕು. ಡ್ರೋನ್ ವಿಡಿಯೋಗ್ರಫಿ, ಫೋಟೋಗ್ರಫಿಯೂ ಅಷ್ಟೆ. ಇದು ಮೂಲತಃ ಕೌಶಲಾಧಾರಿತ ವೃತ್ತಿ. ಹೊಸ ಶತಮಾನದ ಭರವಸೆಯ ವೃತ್ತಿ ಇದು. ಒಂದು ಸನ್ನಿವೇಶವನ್ನು ವಿಭಿನ್ನವಾಗಿ ನೋಡುವ, ಶೂಟ್ ಮಾಡುವ, ಫೋಟೋ ತೆಗೆಯುವ ಕೌಶಲವುಳ್ಳವರು ತಮ್ಮ ಹವ್ಯಾಸ ಅಭಿವೃದ್ಧಿಪಡಿಸಿಕೊಳ್ಳುವುದರ ಜತೆಗೆ ಇದನ್ನು ಒಂದು ವೃತ್ತಿಯನ್ನಾಗಿ ಮಾಡಿಕೊಂಡರೆ, ಭವಿಷ್ಯ ಉತ್ತಮವಾಗುವುದರಲ್ಲಿ ಸಂದೇಹವೇ ಇಲ್ಲ.

| ಮಾರ್ಕ್, ಡ್ರೋನ್ ಟೆಕ್ನಾಲಜಿ ಪರಿಣತರು

ಪರವಾನಗಿ ಅಗತ್ಯ

ಡ್ರೋನ್ ಆಪರೇಷನ್​ಗೆ ಪೈಲಟ್ ಪರವಾನಗಿ ತೆಗೆದುಕೊಳ್ಳಬೇಕು. ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅಥವಾ ಸ್ಥಳೀಯ ಪೊಲೀಸ್ ಠಾಣೆಯಿಂದ ಟೇಕಾಫ್​ಗೆ ಪರವಾನಗಿ ಪಡೆದುಕೊಳ್ಳಬೇಕು. ವಿಮಾನ ನಿಲ್ದಾಣಗಳ ಆಸು ಪಾಸು ಡ್ರೋನ್ ಆಪರೇಟ್ ಮಾಡುವ ಹಾಗಿಲ್ಲ. ಒಬ್ಬ ಯಶಸ್ವಿ ಡ್ರೋನ್ ಆಪರೇಟರ್ ಸ್ವಯಂ ಉದ್ಯೋಗ ಆರಂಭಿಸಬಹುದು. ಬೇರೆಯವರ ಕಂಪನಿ ಗಳಲ್ಲಿಯೂ ಕೆಲಸ ಮಾಡ ಬಹುದು.

| ಶಿವಲೀಲಾ ಎಸ್​. ಪೂಜಾರಿ