ಆಲಿಕಲ್ಲು ಮಳೆಗೆ ಹಲವೆಡೆ ಅಪಾರ ಹಾನಿ

ಮದ್ದೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಭತ್ತ, ಕಬ್ಬು, ಹಿಪ್ಪು ನೇರಳೆ ಹಾಗೂ ಬಾಳೆ ಫಸಲು ನೆಲ ಕಚ್ಚಿದೆ.

ತಾಲೂಕಿನ ಚನ್ನಸಂದ್ರ ಎಲ್ಲೆಯಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಫಸಲು ಆಲಿಕಲ್ಲು ಮಳೆಗೆ ನಾಶವಾಗಿದೆ. ಚನ್ನಸಂದ್ರ ಹಾಗೂ ವೈದ್ಯನಾಥಪುರ ಗ್ರಾಮಗಳ ರೈತರಾದ ಸಿ.ಕೆ.ಪ್ರಸನ್ನ, ಈರೇಗೌಡ, ನಾಗರಾಜು, ಯೋಗೇಶ್, ವೆಂಕಟೇಶ್, ಆನಂದ್, ಚಂದ್ರಶೇಖರ್, ರಾಜು, ಮಹದೇವು, ಚನ್ನಯ್ಯ, ಪ್ರತಾಪ್, ಸಿ.ಸಿ.ರಾಮಲಿಂಗಯ್ಯ, ಕಾಂತ, ನಟರಾಜು, ಸುರೇಶ್ ಸೇರಿ ಸುಮಾರು 25 ರೈತರ ಭತ್ತ, ಹಿಪ್ಪು ನೇರಳೆ, ಕಬ್ಬಿನ ಬೆಳೆ ನಾಶವಾಗಿದೆ.

ಬಾಳೆ ನೋಟ ನಾಶ: ಚನ್ನಸಂದ್ರ ಗ್ರಾಮದ ಸೋಮಲಿಂಗಪ್ಪ ಮತ್ತು ರಾಮಲಿಂಗಣ್ಣ ಎಂಬುವರಿಗೆ ಸೇರಿದ ಬಾಳೆ ಗಿಡಗಳು ನೆಲ ಕಚ್ಚಿವೆ. ಹುಲಿಗೆರೆಪುರ, ಉಪ್ಪಿನಕೆರೆ, ನಗರಕೆರೆ, ಚನ್ನೇಗೌಡನದೊಡ್ಡಿ, ಬೋರಾಪುರ, ಮಾಲಗಾರನಹಳ್ಳಿ ಸೇರಿ ತಾಲೂಕಿನ ವಿವಿಧ ಕಡೆ ಭತ್ತ, ಮಾವಿನ ಫಸಲು, ವೀಳ್ಯೆದೆಲೆ ಹಾಗೂ ಬಾಳೆ ಫಸಲು ನಾಶವಾಗಿದೆ.

ಮರ ಬಿದ್ದು ಸಂಚಾರಕ್ಕೆ ತೊಂದರೆ: ಪಟ್ಟಣದ ಲೀಲಾವತಿ ಬಡಾವಣೆಯಲ್ಲಿ ಭಾರಿ ಗಾತ್ರದ ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು. ಮಂಗಳವಾರ ಬೆಳಗ್ಗೆ 10 ಗಂಟೆಯಾದರೂ ಮರವನ್ನು ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂತು.

‘ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆ ಬೆಳೆದಿದ್ದವು. ಆದರೀಗ ಫಸಲು ಕೈ ಸೇರುವಷ್ಟರಲ್ಲಿ ಆಲಿಕಲ್ಲು ಮಳೆಯಿಂದ ನಷ್ಟವಾಗಿದೆ. ಹೀಗಾಗಿ ಕ್ಷೇತ್ರದ ಜನಪ್ರತಿನಿಧಿಗಳು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮೂಲಕ ನಾಶವಾಗಿರುವ ಬೆಳೆಗಳ ಸರ್ವೇ ಮಾಡಿಸಿ ಪರಿಹಾರ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ನೊಂದ ರೈತರು ಆಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *