ಗುರು ಬದುಕಿನ ಮಾರ್ಗದರ್ಶಕ

ಬಾಗಲಕೋಟೆ: ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಹುಚ್ಚೇಶ್ವರ ಪ್ರೌಢಶಾಲೆ 1999-2002ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ಈಚೆಗೆ ಜರುಗಿತು.

ಕಮತಗಿ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಸ್ತುತ ವಿವಿಧ ಊರುಗಳಲ್ಲಿ, ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡಿರುವ 80ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರಿ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

ತಮಗೆ ಪ್ರೌಢ ಹಂತದ ಶಿಕ್ಷಣ ಬೋಧನೆ ಮಾಡಿದ ಶಿಕ್ಷಕರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು.

ಸಾನ್ನಿಧ್ಯ ವಹಿಸಿದ್ದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಬಾಲ್ಯದಲ್ಲಿ ಶಿಕ್ಷಣ ಕಲಿಸಿದ ಗುರುಗಳಿಗೆ ವಂದಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಣೆ ಮಾಡಿರುವುದು ಶ್ಲಾಘನೀಯ. ತಂದೆ, ತಾಯಿ, ಗುರುಗಳನ್ನು ಗೌರವದಿಂದ ಕಂಡು ಬದುಕನ್ನು ಸಾರ್ಥಕವಾಗಿಸಿಕೊಳ್ಳಬೇಕು ಎಂದು ಹೇಳಿದರು.

ಗುರುವಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕ ಎಂ.ಎನ್. ಬೊಂಬ್ಲೇಕರ, ಎಸ್.ಎಂ. ಕಂಬಾಳಿಮಠ ಮಾತನಾಡಿದರು. ಪರಶುರಾಮ ಬಂದಿಕೇರಿ, ಸುಜಾತ ಬೈಲಕೂರ ನಿರೂಪಿಸಿದರು. ಮಂಜುನಾಥ ವಣಕಿ ಸ್ವಾಗತಿಸಿದರು. ಸಿದ್ದು ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ಆರಿ ವಂದಿಸಿದರು. ನಂತರ ಹಳೇ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿತು.