ಹುಬ್ಬಳ್ಳಿ: ಕರೊನಾ ಲಾಕ್‌ಡೌನ್ ಸಮಯದಲ್ಲಿ ನಡೆದಿದ್ದ ಆತ್ಮಹತ್ಯೆ ಪ್ರಕರಣವೀಗ ಮಹತ್ವ ತಿರುವು ಪಡೆದುಕೊಂಡಿದ್ದು, ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ಕೊಲೆ ಮಾಡಿರುವುದು ಬಹಿರಂಗವಾಗಿದೆ.
ಶ್ರೀನಿವಾಸಪುರ ಗಂಗಾಜಲ ತಾಂಡಾದ ನಿವಾಸಿ ಚಂದ್ರಪ್ಪ ಲಮಾಣಿ (45) ಎಂಬಾತನ ಶವ ಕರೊನಾ ಲಾಕ್‌ಡೌನ್ ಸಮಯದಲ್ಲಿ ರಾಣೆಬೆನ್ನೂರು ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿತ್ತು. ಮೊದಲಿಗೆ ಈ ಪ್ರಕರಣವನ್ನು ಆತ್ಮಹತ್ಯೆಯೆಂದೇ ನಂಬಲಾಗಿತ್ತು. ಆದರೆ, ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದ ಪೊಲೀಸರಿಗೆ ಆತ್ಮಹತ್ಯೆಯಲ್ಲ, ಕೊಲೆ ಎಂಬ ಸಣ್ಣ ಸುಳಿವೊಂದು ಸಿಕ್ಕಿತ್ತು. ಇದರ ಆಧಾರದ ಮೇಲೆ ತನಿಖೆ ನಡೆಸಿದ ಹುಬ್ಬಳ್ಳಿ ರೈಲ್ವೇ ಪೊಲೀಸರು ಇದೀಗ ಕೊಲೆ ರಹಸ್ಯ ಬಯಲು ಮಾಡಿದ್ದಾರೆ.
ಇದನ್ನೂ ಓದಿ: ಈ ಸೋರೆಕಾಯಿಯ ಬೆಲೆ 1 ಕೋಟಿ ರೂಪಾಯಿ… ನಿಮ್ಮತ್ರ ಇದ್ರೆ ನೀವೇ ಕುಬೇರರು..!?
ರೈಲ್ವೆ ನಿಲ್ದಾಣದ ಪಕ್ಕದ ಹೊಲದಲ್ಲಿ ಕುತ್ತಿಗೆ ಹಿಸುಕಿ ಚಂದ್ರಪ್ಪ ಲಮಾಣಿಯನ್ನು ಪತ್ನಿ ಶೋಭಾ ಹಾಗೂ ಪ್ರಿಯಕರ ದಿಳ್ಳೆಪ್ಪ ಅಂತರವಳ್ಳಿ ಕೊಲೆ ಮಾಡಿದ್ದರು ಎಂಬುದು ಬಹಿರಂಗವಾಗಿದೆ. ಕೊಲೆ ಸಾಕ್ಷಿನಾಶ ಮಾಡುವ ಉದ್ದೇಶದಿಂದ ರೈಲ್ವೆ ಹಳಿಯ ಮೇಲೆ ಶವ ಎಸೆದಿದ್ದರು.
ಲಾಕ್ಡೌನ್ಗೂ ಮುನ್ನ ಚಂದ್ರಪ್ಪ ಪರ ಊರಿಗೆ ಕೆಲಸಕ್ಕೆ ಹೋಗುತ್ತಿದ್ದ. ಕರೊನಾ ಹೆಚ್ಚಾದಾಗ ಮನೆಯಲ್ಲಿಯೇ ಸಮಯ ಕಳೆಯ ತೊಡಗಿದ್ದ. ಇದರಿಂದ ಎಲ್ಲಿ ತಮ್ಮ ಅನೈತಿಕ ಸಂಬಂಧ ಬಯಲಾಗುತ್ತದೆ ಎಂದು ಹೆದರಿ ಇಬ್ಬರು ಸೇರಿ ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್)