More

  ನಿರ್ವಹಣೆ ಇಲ್ಲದ ಗಾಂಧಿ ಉದ್ಯಾನ, ಕುಡಿಯಲು, ಬಳಸಲು ಯಾವುದಕ್ಕೂ ನೀರಿಲ್ಲ

  ಹುಬ್ಬಳ್ಳಿ: ಇಲ್ಲಿಯ ಇಂದಿರಾ ಗಾಜಿನ ಮನೆ ಹಾಗೂ ಮಹಾತ್ಮ ಗಾಂಧಿ ಉದ್ಯಾನವನ ನಿರ್ವಹಣೆ ಇಲ್ಲದೇ ಹಲವು ದಿನಗಳಿಂದ ಸೊರಗಿ ಹೋಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು, ಗಬ್ಬು ವಾಸನೆ ಹರಡಿದೆ.

  ಸ್ಮಾರ್ಟ್ ಸಿಟಿ ಯೋಜನೆ ಅಡಿ ಇಂದಿರಾ ಗಾಜಿನಮನೆ ಆವರಣವನ್ನು ಅಭಿವೃದ್ಧಿಗೆ ಆಯ್ಕೆ ಮಾಡಿಕೊಂಡ ನಂತರ ಸುಧಾರಣೆ ಕಾಣಬಹುದು ಎಂದುಕೊಂಡಿದ್ದ ಸಾರ್ವಜನಿಕರಿಗೆ ಭ್ರಮನಿರಸನ ಉಂಟು ಮಾಡಿದೆ.

  ಇಲ್ಲಿ ಕನಿಷ್ಠ ಪಕ್ಷ ಕುಡಿಯುವ ನೀರು ಹಾಗೂ ಬಳಸುವ ನೀರು ಇಲ್ಲದೇ ಜನರು ಹೈರಾಣಾಗುತ್ತಿದ್ದಾರೆ. ಇಲ್ಲಿಯ ಶೌಚಗೃಹಗಳು ನೀರಿಲ್ಲದೇ ವಾಸನೆ ಹೊಡೆಯುತ್ತಿವೆ. ಶೌಚಗೃಹಗಳ ಸುತ್ತಮುತ್ತ ಕೊಳಚೆ ನೀರು ನಿಂತು ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿವೆ.

  ಸರಿಯಾಗಿ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡದ ಕಾರಣ ಇಡೀ ಆವರಣ ಮಳೆಗಾಲದಲ್ಲಿ ಉಪಯೋಗಕ್ಕೆ ಬಾರದಂತಾಗುತ್ತದೆ.

  ಇಂದಿರಾ ಗಾಜಿನಮನೆ ಹಾಗೂ ಮಹಾತ್ಮ ಗಾಂಧಿ ಉದ್ಯಾನ ವೀಕ್ಷಣೆ ಹಾಗೂ ಪಿಕ್ನಿಕ್ ಗೆ ನಿತ್ಯ ನೂರಾರು ಜನರು ಬರುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹುಬ್ಬಳ್ಳಿಯಲ್ಲಿ ಮಾತ್ರ ಇಂತಹ ಗಾಜಿನಮನೆ ಇದೆ. ಇದು ವಾಣಿಜ್ಯ ನಗರಿಯ ವಿಶೇಷತೆಗಳಲ್ಲಿ ಒಂದು ಹಾಗೂ ಅವಳಿನಗರಕ್ಕೆ ಮುಕುಟಪ್ರಾಯದಂತಿದೆ.

  ಇಂತಹ ಐತಿಹಾಸಿಕ ಸ್ಮಾರಕವನ್ನು ಸರಿಯಾಗಿ ಉಳಿಸಿಕೊಂಡು ಹೋಗುವ ಪ್ರಯತ್ನಗಳು ನಡೆಯುತ್ತಿಲ್ಲ. ಕೋಟ್ಯಂತರ ರೂಪಾಯಿ ಸುರಿದು ಅಭಿವೃದ್ಧಿ ಕಾರ್ಯ ಕೈಗೊಂಡರೂ ಮೂಲ ಸೌಲಭ್ಯಗಳೇ ಇಲ್ಲದೇ ಜನರು ಪರಿತಪಿಸುವಂತಾಗಿದೆ.

  ಶೌಚಕ್ಕೂ ತೊಂದರೆ:
  ಹುಬ್ಬಳ್ಳಿಯ ಬಹುತೇಕ ಕಡೆಗಳಲ್ಲಿ ಜನರು ತೊಂದರೆ ಅನುಭವಿಸುವಂತೆ ಇಂದಿರಾ ಗಾಜಿನ ಮನೆ ಆವರಣದಲ್ಲೂ ಜನರು ಶೌಚಕ್ಕೆ ಪರದಾಡಬೇಕು. ಮಕ್ಕಳು, ವೃದ್ಧರು, ಮಹಿಳೆಯರು ಹೀಗೆ ಎಲ್ಲ ವಯೋಮಾನದವರು ಇಲ್ಲಿಗೆ ಬರುತ್ತಾರೆ. ಕೆಲವು ಗಂಟೆಗಳ ವರೆಗೆ ಇದ್ದು ಆಟೋಟದಲ್ಲಿ ತೊಡಗುತ್ತಾರೆ. ಆದರೆ, ಇಲ್ಲಿ ಶೌಚಗೃಹಕ್ಕೆ ಹೋಗುವ ಪ್ರಸಂಗ ಬಂದರೆ “ಬೇಡಪ್ಪ ಶೌಚದ ಸಹವಾಸ’ ಎನ್ನುವಂತಾಗುತ್ತದೆ.

  See also  ಅಂಜಲಿ ಕುಟುಂಬಕ್ಕೆ ಜೋಳಿಗೆ ಹಣ ನೀಡಿದ ಹುಕ್ಕೇರಿ ಶ್ರೀ

  ಇಲ್ಲಿನ ಶೌಚಗೃಹದಲ್ಲಿ ನೀರೇ ಇರುವುದಿಲ್ಲ. ಕಳೆದ ಹಲವು ದಿನಗಳಿಂದ ಇಲ್ಲೊಂದು ನೋಟಿಸ್ ಅಂಟಿಸಿ ಬಿಟ್ಟಿದ್ದಾರೆ. ಅದನ್ನು ಓದಿಕೊಂಡು ಸುಮ್ಮನೇ ಹೋಗುವುದು ಅನಿವಾರ್ಯವಾಗಿದೆ.

  “ಅನಾನುಕೂಲತೆಗಾಗಿ ಕ್ಷಮಿಸಿ, ಬೋರ್ವೆಲ್ ಸಮಸ್ಯೆಗಳು ಮತ್ತು ನೀರಿನ ಬಿಕ್ಕಟ್ಟಿನಿಂದಾಗಿ ಶೌಚಾಲಯಗಳು ಕಾರ್ಯನಿರ್ವಹಿಸದೆ ಉಳಿಯುತ್ತವೆ. ಕೆಲವು ದಿನಗಳವರೆಗೆ ದಯವಿಟ್ಟು ಸಹಕರಿಸಿ’ ಹೀಗೆಂದು ಬರೆದು ಅಂಟಿಸಿ ಎಷ್ಟೋ ದಿನಗಳಾದವು. ಆದರೆ, ಬೋರ್ವೆಲ್ ಸರಿಪಡಿಸಿ ಉದ್ಯಾನಕ್ಕೆ ಬಂದ ಸಾರ್ವಜನಿಕರಿಗೆ ನೀರು ಕೊಡುವ ಪ್ರಯತ್ನ ಆಗುತ್ತಲೇ ಇಲ್ಲ.

  ಇಲ್ಲಿರುವ ಮಕ್ಕಳ ಅಮ್ಯೂಜಮೆಂಟ್ ಗಳು ಸಹ ಅಷ್ಟಕ್ಕಷ್ಟೇ ಎಂಬಂತಿವೆ. ಮಹಾತ್ಮ ಗಾಂಧಿ ಉದ್ಯಾನಕ್ಕೆ ಬರುವವರಿಂದ ಪ್ರವೇಶ ಶುಲ್ಕ ಆಕರಣೆ ಮಾಡಲಾಗುತ್ತದೆ. ಆದರೆ, ಅದಕ್ಕೆ ತಕ್ಕಂತೆ ಸೌಲಭ್ಯಗಳೇ ಇಲ್ಲ ಎಂಬುದು ಇಲ್ಲಿಗೆ ಬಂದವರ ಅಳಲು.

  ನಿರ್ವಹಣೆಯದ್ದೇ ಸಮಸ್ಯೆ:
  ಹುಬ್ಬಳ್ಳಿ &ಧಾರವಾಡದಲ್ಲಿ ಅಭಿವೃದ್ಧಿ ಕಾರ್ಯಗಳಿಗೇನು ಕಡಿಮೆ ಇಲ್ಲ. ಆದರೆ, ಅಭಿವೃದ್ಧಿ ಪಡಿಸಿದ ಯಾವುದೇ ಇಮಾರತನ್ನು ಸರಿಯಾಗಿ ಉಳಿಸಿಕೊಂಡು ಹೋಗುವ ಅಥವಾ ಅದನ್ನು ಸರಿಯಾಗಿ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಯಾರೂ ಹೊತ್ತುಕೊಳ್ಳುವುದಿಲ್ಲ.

  ಇದಕ್ಕೆ ಹಲವು ಉದಾಹರಣೆಗಳು ಅವಳಿನಗರದಲ್ಲಿ ಸಿಗುತ್ತವೆ. ಈಗಾಗಲೇ ಹಲವು ಬಾರಿ ಇಂದಿರಾ ಗಾಜಿನ ಮನೆ ಆವರಣ ಅಭಿವೃದ್ಧಿ ಪಡಿಸಲಾಗಿದೆ. ಮಹಾನಗರ ಪಾಲಿಕೆಯ ಈಜುಗೊಳದ್ದೂ ಇದೇ ಕಥೆಯಾಗಿದೆ. ಉಣಕಲ್ಲ ಉದ್ಯಾನ, ತೋಳನಕೆರೆ ಉದ್ಯಾನ ಹೀಗೆ ಎಲ್ಲೆ ಹೋದರೂ ಸರಿಯಾದ ನಿರ್ವಹಣೆಯ ಕೊರತೆ ಕಂಡು ಬರುತ್ತದೆ.

  ಇದೇ ರೀತಿ ಇಂದಿರಾ ಗಾಜಿನ ಮನೆ ಆವರಣವೂ ನಿರ್ವಹಣೆ ಇಲ್ಲದೆ ಪಾಳು ಬಿದ್ದ ಮನೆಯಂತಾಗಿದೆ.
  ಮಹಾನಗರ ಪಾಲಿಕೆ ನಿರ್ವಹಣೆಯಲ್ಲಿದ್ದ ಇಂದಿರಾ ಗಾಜಿನ ಮನೆ ಆವರಣ ಈಗ ಸ್ಮಾರ್ಟ್ ಸಿಟಿ ಅಡಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಇದೀಗ ನಮ್ಮ ನಿರ್ವಹಣೆಯಲ್ಲಿ ಇಲ್ಲ ಎಂದು ಮಹಾನಗರ ಪಾಲಿಕೆ ವಲಯ ಸಹಾಯಕ ಆಯುಕ್ತ ಕೆ.ಎಸ್. ಕಟಗಿ ತಿಳಿಸಿದ್ದಾರೆ.

  See also  ಶವ ತರಲೆಂದು ಹೊರಟವರೇ ಶವವಾದರು...

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts