ಬಂದ್​ಗಿಲ್ಲ ಬೆಂಬಲ ಪ್ರತ್ಯೇಕತೆ ಕೂಗು ದುರ್ಬಲ

ಉತ್ತರ ಕರ್ನಾಟಕಕ್ಕೆ ಸಮ್ಮಿಶ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂಬ ಅಂಶ ದಿನದಿನಕ್ಕೂ ವ್ಯಾಪಿಸುತ್ತಿದ್ದು, ಹೋರಾಟದ ರೂಪ ಪಡೆದುಕೊಳ್ಳುತ್ತಿದೆ. ಪ್ರತ್ಯೇಕ ರಾಜ್ಯವೇ ಇದಕ್ಕೆ ಪರಿಹಾರ ಎಂಬ ಘೊಷಣೆಯೊಂದಿಗೆ ಆ.2ರಂದು ಕರೆ ನೀಡಲಾಗಿರುವ ಬಂದ್​ಗೆ ಅಂದುಕೊಂಡಷ್ಟು ಸ್ಪಂದನೆ ಸಿಗುತ್ತಿಲ್ಲ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಭಾಗದಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ತಾರತಮ್ಯ ವಿರುದ್ಧದ ಕೂಗು ಮಾತ್ರ ಬಲಗೊಳ್ಳುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಖಂಡತೆಯ ಮಂತ್ರ ಪಠಿಸುತ್ತಿದ್ದರೆ, ಈ ಭಾವನೆಗೆ ಧಕ್ಕೆ ತಂದ ಆರೋಪ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ‘ಉತ್ತರ’ದ ಪ್ರಮುಖ ಸಂಘಟನೆಗಳೂ ಹಿಂದಡಿ ಇಡಲು ನಿರ್ಧರಿಸಿವೆ. ಈ ನಡುವೆ, ಸಿಎಂ ಕುಮಾರಸ್ವಾಮಿ ಅವರೂ ಅಖಂಡ ಕರ್ನಾಟಕದ ಮಾತುಗಳನ್ನಾಡಿದ್ದಾರೆ. ಈ ಎಲ್ಲ ಕಾರಣದಿಂದಾಗಿ, ಪ್ರತ್ಯೇಕತೆ ಪ್ರಸ್ತಾಪ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಆಗುತ್ತಿದೆ.

ದೇವೇಗೌಡರಿಂದ ರಾಜ್ಯ ಒಡೆಯುವ ಹುನ್ನಾರ

ಬೆಂಗಳೂರು: ರಾಜ್ಯವನ್ನು ಒಡೆಯುವ ಮೂಲಕ ಜೆಡಿಎಸ್ ಬಲಪಡಿಸಿಕೊಳ್ಳಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹುನ್ನಾರ ನಡೆಸಿದ್ದಾರೆ. ಆದರೆ ಇದನ್ನು ರಾಜ್ಯದ ಜನರು ಒಪು್ಪವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಅಖಂಡ ಕರ್ನಾಟಕ ನಿರ್ವಿುಸಲು ಹಿರಿಯರೆಲ್ಲ ರಕ್ತ ಸುರಿಸಿ ಶ್ರಮಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ಇತ್ತೀಚೆಗಿನ ಹೇಳಿಕೆಗಳು ರಾಜ್ಯವನ್ನು ಒಡೆಯಲು ಷಡ್ಯಂತ್ರ ನಡೆಸಿದಂತಿದೆ. ಉತ್ತರ ಕರ್ನಾಟಕದ ಜನರನ್ನು ಸವತಿ ಮಕ್ಕಳಂತೆ ಕಾಣುತ್ತಿದ್ದಾರೆ. ನನಗೇನು ಓಟು ಹಾಕಿದ್ದೀರ ಎಂಬಂತಹ ಸಂವಿಧಾನ ವಿರೋಧಿ ಹೇಳಿಕೆಯನ್ನು ಹಿಂದಿನ ಯಾವುದೇ ಮುಖ್ಯಮಂತ್ರಿ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ವೀರಶೈವ-ಲಿಂಗಾಯತರನ್ನು ಬೇರ್ಪಡಿಸುವ ಕಾರ್ಯಕ್ಕೆ ಈ ಹಿಂದೆ ಕಾಂಗ್ರೆಸ್ ಕೈ ಹಾಕಿತ್ತು. ಜೆಡಿಎಸ್ ಸಹ ಅದೇ ಹಾದಿಯಲ್ಲಿ ಸಾಗಲಿದ್ದು ಜನರು ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ. ದೇವೇಗೌಡರು ಏಕೆ ಮೌನವಾಗಿದ್ದಾರೆ? ಅವರ ಜತೆ ರ್ಚಚಿಸಿಯೇ ಕುಮಾರಸ್ವಾಮಿ ಈ ಮಾತು ಹೇಳುತ್ತಿದ್ದಾರೆಯೇ? ಇಷ್ಟೆಲ್ಲ ನಡೆಯುತ್ತಿದ್ದರೂ ಕಾಂಗ್ರೆಸ್ ನಾಯಕರು ಮೌನ ವಹಿಸಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಹುಳುಕು ಮುಚ್ಚಿಕೊಳ್ಳಲು ಮಾಧ್ಯಮಗಳನ್ನು ಸಿಎಂ ದೂರುತ್ತಿದ್ದಾರೆ. ಬೆಳಗಾವಿಯ ಸುವರ್ಣಸೌಧದ ಎದುರು ಸೇರಲಿರುವ ಮಠಾಧೀಶರು ಹಾಗೂ ಪ್ರತಿಭಟನಾಕಾರರನ್ನು ಭೇಟಿಯಾಗಿ ಏಕೀಕೃತ ಕರ್ನಾಟಕಕ್ಕೆ ಬದ್ಧವಾಗಲು ಪ್ರಾರ್ಥಿಸುತ್ತೇನೆ. ಯಾವುದೇ ಕಾರಣಕ್ಕೂ ರಾಜ್ಯ ಇಬ್ಭಾಗವಾಗಲು ಬಿಡುವುದಿಲ್ಲ. ಪ್ರತ್ಯೇಕ ರಾಜ್ಯಕ್ಕೆ ಬಿಜೆಪಿ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ಬಿಎಸ್​ವೈ ಹೇಳಿದ್ದಾರೆ.

ಸಭಾಪತಿ ಸ್ಥಾನದಲ್ಲಿ ಕುಳಿತು ಬೇಜವಾಬ್ದಾರಿ ಹೇಳಿಕೆ ಸಲ್ಲ

ಹುಬ್ಬಳ್ಳಿ: ಸಭಾಪತಿಯಂತಹ ಉನ್ನತ ಹುದ್ದೆಯಲ್ಲಿ ಕುಳಿತು ಕೆಳಮಟ್ಟದ ಅಸಂಸ್ಕೃತ, ಅನಾಗರಿಕತನದ, ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದು ನಿಮ್ಮ ಸ್ಥಾನಮಾನಕ್ಕೆ ಸಲ್ಲದ ವಿಚಾರ. ನಾವು ನಿರುದ್ಯೋಗಿ ಎಂದು ಹೇಳುವ ನೀವು ಹುಬ್ಬಳ್ಳಿ-ಧಾರವಾಡಕ್ಕೆ 35 ವರ್ಷಗಳ ಅಧಿಕಾರವಧಿಯಲ್ಲಿ ಏನು ಮಾಡಿದ್ದೀರಿ ಎಂದು ಬಾಳೇಹೊಸೂರ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಬಸವರಾಜ ಹೊರಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಸಮಗ್ರ ಕರ್ನಾಟಕದ ಸಿಎಂ

ಬೆಂಗಳೂರು: ಉತ್ತರ ಕರ್ನಾಟಕದ ಪ್ರತ್ಯೇಕ ಕೂಗಿಗೆ ಮಾಧ್ಯಮಗಳೇ ಕಾರಣ. ಪ್ರತ್ಯೇಕತೆ ವಿಷಯದಲ್ಲಿ ಬೆಂಕಿ ಹಚ್ಚುತ್ತಿರುವವರು ರಾಜಕಾರಣಿಗಳಲ್ಲ, ನೀವು (ದೃಶ್ಯ ಮಾಧ್ಯಮ) ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.

ಪ್ರತ್ಯೇಕ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಅನಗತ್ಯ. ಪ್ರತಿಯೊಂದು ವಿಷಯದಲ್ಲಿ ತಪ್ಪೇ ಹುಡುಕುತ್ತಾ ಹೋದರೆ, ರಾಜ್ಯ ಉದ್ಧಾರವಾಗಬೇಕೋ ಅಥವಾ ಹಾಳಾಗಬೇಕೋ ನೀವೇ ಹೇಳಿ ಎಂದು ಪ್ರಶ್ನಿಸಿದರು. ಚನ್ನಪಟ್ಟಣದಲ್ಲಿ ಶ್ರೀರಾಮುಲು ಹೇಳಿಕೆಗೆ ಉತ್ತರ ನೀಡಿದ್ದೆ. ಪ್ರತ್ಯೇಕ ರಾಜ್ಯ ಆದರೆ ಎಲ್ಲಿಂದ ಅನುದಾನ ತರುತ್ತೀರಿ ಎಂದು ಕೇಳಿದ್ದೆ. ಅಖಂಡ ಕರ್ನಾಟಕ ಇರಬೇಕೆಂದು ನೂರು ಬಾರಿ ಹೇಳಿದ್ದೇನೆ. ಒಂದು ವೇಳೆ, ರಾಜ್ಯ ವಿಭಜನೆ ಆದರೆ ನೀವೇ ಹೊಣೆ ಎಂದು ಬೇಸರ ಹೊರಹಾಕಿದರು.

ನಾನು ಎಂದಿಗೂ ರೈತರನ್ನು ಹೊಣೆ ಮಾಡಿಲ್ಲ. ಕೊಪ್ಪಳದಲ್ಲಿ ಸಂಪೂರ್ಣ ಸಾಲಮನ್ನಾಕ್ಕಾಗಿ ಪ್ರತಿಭಟನೆ ಮಾಡಿದ್ದರ ಬಗ್ಗೆ ಹೇಳಿದ್ದೇನೆ. ಅದನ್ನೇ ಯಾಕೆ ಪದೇ ಪದೇ ಬಿತ್ತರಿಸುತ್ತೀರಿ? ನಿಮ್ಮ ನಡವಳಿಕೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದ ಸಿಎಂ, 3-4 ಜಿಲ್ಲೆಗೆ ಕೊಟ್ಟದ್ದು 558 ಕೋಟಿ ರೂ. ಮಾತ್ರ. ಇದನ್ನೇ ಮಹಾಪರಾಧ ಎಂದು ಬಿಂಬಿಸುತ್ತಿದ್ದೀರಿ. 2.18 ಲಕ್ಷ ಕೋಟಿ ರೂ. ಬಜೆಟ್​ನಲ್ಲಿ ಅಷ್ಟೂ ಕೊಡಬಾರದೆ ಎಂದು ಹರಿಹಾಯ್ದರು.

ಅಧಿಕಾರಿಗಳ ಸಭೆಯಲ್ಲೂ ಅಸಮಾಧಾನ: ಮಾಧ್ಯಮಗಳಲ್ಲಿ ಮೈತ್ರಿ ಕುರಿತು ಏನೇನೋ ವರದಿಗಳು ಬರುತ್ತಿವೆ. ಇದನ್ನು ನೋಡಿ ಅಧಿಕಾರಿಗಳು ದಾರಿ ತಪ್ಪಬಾರದು. ಪಾಪ! ಅವರಿಗೆ ಬೇರೆ ಸುದ್ದಿಗಳು ಸಿಕ್ತಿಲ್ವೇನೋ ಎಂದು ಅಧಿಕಾರಿಗಳ ಸಭೆಯಲ್ಲಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ವಿರೋಧಿ ಎಂದು ಸುದ್ದಿ ಮಾಡುತ್ತಿದ್ದಾರೆ. ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ. ಎಲ್ಲ ಜಿಲ್ಲೆಗಳನ್ನು ಪ್ರತಿನಿಧಿಸುವ ಸಚಿವ ಸಂಪುಟವಿದೆ. ಹಣದ ಕೊರತೆ ಸರಕಾರಕ್ಕಿಲ್ಲ. ಆದರೂ ಹಣದ ಕೊರತೆ ಇದೆ ಎಂಬ ವರದಿ ಬರುತ್ತಿವೆ. ಮಾಧ್ಯಮಗಳಿಗೆ ಯಾರು ಮಾಹಿತಿ ಕೊಡುತ್ತಾರೋ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್​ನಲ್ಲಿ ಉತ್ತರ ತತ್ತರ

ಬೆಂಗಳೂರು: ಉತ್ತರ ಕರ್ನಾಟಕದ ಬಗ್ಗೆ ಮುಖ್ಯಮಂತ್ರಿ ಆಡಿದ ರೋಷಾವೇಷದ ಮಾತು ಈಗ ಕಾಂಗ್ರೆಸ್ ನಾಯಕರನ್ನು ಚಿಂತೆಗೀಡು ಮಾಡಿದೆ. ಪ್ರತ್ಯೇಕ ರಾಜ್ಯದ ಕೂಗು ಮುಂದಿನ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕ ಉತ್ತರ ಕರ್ನಾಟಕ ಭಾಗದ ಕೈ ನಾಯಕರಲ್ಲಿ ಮನೆ ಮಾಡಿದ್ದು, ಈ ಬಗ್ಗೆ ರಾಜ್ಯ ನಾಯಕರಲ್ಲಿ ಕಳವಳ ತೋಡಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ 96 ವಿಧಾನಸಭೆ ಕ್ಷೇತ್ರಗಳಿದ್ದು, 2013ರಲ್ಲಿ ಕಾಂಗ್ರೆಸ್ 57ರಲ್ಲಿ ಗೆದ್ದಿತ್ತು. 2018ರಲ್ಲಿ 40ಕ್ಕೆ ಇಳಿದಿತ್ತು. 12 ಲೋಕಸಭೆ ಕ್ಷೇತ್ರಗಳಿದ್ದು, 2014ರಲ್ಲಿ 3 ಸ್ಥಾನ ಮಾತ್ರ ಕಾಂಗ್ರೆಸ್​ಗೆ ಲಭಿಸಿತ್ತು. ಈಗ ಆ ಸ್ಥಾನ ಗಳಿಸುವುದೂ ಕಷ್ಟವಾಗುತ್ತದೆ ಎಂದು ಹಿರಿಯ ನಾಯಕರು, ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆಂದು ಗೊತ್ತಾಗಿದೆ.

ಕ್ರಮಕ್ಕೆ ಒತ್ತಾಯ

ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿರುವ ಶ್ರೀರಾಮುಲು ಮತ್ತು ಉಮೇಶ್ ಕತ್ತಿ ವಿರುದ್ಧ ಬಿಜೆಪಿ ಕ್ರಮಕೈಗೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದರೆ, ಆ ಭಾಗದ ಅಭಿವೃದ್ಧಿ ಕುರಿತು ಎಂದು ಬಹಿರಂಗ ಚರ್ಚೆಯಾಗಲಿ. ಮಠಾಧೀಶರು ಕೂಡ ಚರ್ಚೆಗೆ ಬರಲಿ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ಬಿಜೆಪಿಯ ಹಿಡನ್ ಅಜೆಂಡಾ: ಪ್ರತ್ಯೇಕ ರಾಜ್ಯದ ಬೇಡಿಕೆ ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ. ಹೈಕ ಭಾಗದ ಹಿಂದುಳಿದ ಅಂಕಿ-ಸಂಖ್ಯೆಗಳನ್ನು ಮುಂದಿಟ್ಟು ಮುಂಬೈ ಕರ್ನಾಟಕದ ನಾಯಕರು ಅನುಕೂಲ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಜನ ಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ ರಾಯಚೂರಿನಲ್ಲಿ ಆರೋಪಿಸಿದ್ದಾರೆ. ಉಕ ಪ್ರತ್ಯೇಕತೆಗೆ ಆಗ್ರಹಿಸಿ ಆ.2ರಂದು ಕರೆ ನೀಡಿರುವ ಬಂದ್​ಗೆ ಕರ್ನಾಟಕ ಸಂಘಟನೆಗಳ ಒಕ್ಕೂಟ ಬೆಂಬಲ ನೀಡುವುದಿಲ್ಲ ಎಂದು ಅಧ್ಯಕ್ಷ ನಾಗೇಶ್ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಿಎಂ ಪ್ರೀತಿಯಿಂದ ಮಾತನಾಡೋದು ಕಲಿಯಲಿ

ಬೆಂಗಳೂರು: ಉತ್ತರ ಕರ್ನಾಟಕದ ಬಗ್ಗೆ ಮುಖ್ಯಮಂತ್ರಿಯಾಗಿ ಪ್ರೀತಿಯಿಂದ ಮಾತನಾಡುವುದನ್ನು ಕಲಿಯುತ್ತಾರೆ ಅಂತ ಭಾವಿಸುತ್ತೇನೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡಿ, ಸಿಎಂ ಕುಮಾರಸ್ವಾಮಿಗೆ ಕುಟುಕಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾ ವಿಚಾರವಾಗಿ ಮಾತನಾಡುವಾಗ ಉತ್ತರ ಕರ್ನಾಟಕದ ಬಗ್ಗೆ ಕುಮಾರಸ್ವಾಮಿ ಆ ರೀತಿ ಹೇಳಿಕೆ ನೀಡಬಾರದಿತ್ತು. ಅವರ ಹೇಳಿಕೆಯನ್ನು ನಾನು ಕೇಳಿಲ್ಲ. ಒಂದು ವೇಳೆ, ಮಾತನಾಡಿದ್ದರೆ ಹೇಳಿಕೆ ವಾಪಸ್ ಪಡೆಯಬೇಕು. ತಕ್ಷಣವೇ ಸಭೆ ಕರೆದು ಉತ್ತರ ಕರ್ನಾಟಕದ ಬಗ್ಗೆ ರ್ಚಚಿಸಿ ಸಮಸ್ಯೆಗೆ ಪರಿಹಾರ ಕೊಡಬೇಕು ಎಂದರು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರಾಜಕೀಯ ಅಸಮಾನತೆಯೂ ಇದೆ. ಸಿಎಂ, ಡಿಸಿಎಂ, ಸ್ಪೀಕರ್, ರಾಜಕೀಯ ನಾಯಕರೆಲ್ಲರೂ ಇಲ್ಲಿಯವರೇ. ಹೀಗಾಗಿ ಸಹಜವಾಗೇ ಅಸಮಾಧಾನ ಬರುತ್ತದೆ ಎಂದ ರಾಯರೆಡ್ಡಿ, ಉತ್ತರ ಕರ್ನಾಟಕ ಬಂದ್ ರಾಜಕೀಯ ಪ್ರೇರಿತ ಪಿತೂರಿ. ಹೀಗಾಗಿ ಮಠಾಧೀಶರು ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬಾರದು. ಯಾರು ಯಾರದ್ದೊ ಮಾತು ಕೇಳಿಕೊಂಡು ಜನರು ಬಂದ್ ಮಾಡುವುದು ಸರಿಯಲ್ಲ ಎಂದು ತಿಳಿಸಿದರು. ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ವೇಳೆ ಉ.ಕ,ಕ್ಕೆ ಪ್ರಾತಿನಿಧ್ಯ ನೀಡಬೇಕು, ನೀರಾವರಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಸಿಎಂಗೆ ಪತ್ರ ಬರೆದಿದ್ದಾಗಿ ತಿಳಿಸಿದರು.

ಸಿದ್ದರಾಮಯ್ಯ ಈಗ ಉತ್ತರ ಕರ್ನಾಟಕದ ಶಾಸಕರಾಗಿದ್ದಾರೆ. ಆದ್ದರಿಂದ ಅವರು ಮುಖ್ಯಮಂತ್ರಿಯಾಗಲಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

| ಬಸವರಾಜ ರಾಯರೆಡ್ಡಿ,

 

ಶ್ರೀರಾಮುಲು ವಿರುದ್ಧ ಅವಹೇಳನ

ಹೊಸಪೇಟೆ(ಬಳ್ಳಾರಿ): ಶ್ರೀರಾಮುಲು ವಿರುದ್ಧ ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸೋನಿಯಾ ಗಾಂಧಿ ಹೆಸರು ಕಾಮೆಂಟ್ಸ್ ನಲ್ಲಿ ಪ್ರಸ್ತಾಪವಿದೆ. ‘ಕನ್ನಡಾನೇ ಸರಿಯಾಗಿ ಮಾತಾಡೋಕೆ ಬಾರದ ಆಂಧ್ರದಿಂದ ಬಂದ ಈ ನಾಯಿಗೆ ಕರ್ನಾಟಕ ಎರಡು ಭಾಗವಾಗಬೇಕಂತೆ. ಎಂತಹ ಸುವರ್ಣ ಕಾಲ ಬಂತು ನೋಡಿ ಕನ್ನಡಿಗರಿಗೆ. ಕನ್ನಡವೊಂದೇ, ಕರ್ನಾಟಕವೊಂದೇ’ ಎನ್ನುವ ಪೋಸ್ಟ್​ಗೆ, ‘ಶ್ರೀರಾಮುಲು ಆಂಧ್ರದಿಂದ ಬಂದವರಾದರೆ, ಇಟಲಿಯಿಂದ ಬಂದ ಸೋನಿಯಾ ಗಾಂಧಿ ಆಂಧ್ರ ವಿಭಜನೆ ಮಾಡಿದ್ದಾಳಲ್ಲ. ಆವಾಗ ನಿನ್ನ ಬಾಯಿಗೆ ಲಕ್ವಾ ಹೊಡೆದಿತ್ತೇನು’ ಎಂಬ ಕಾಮೆಂಟ್ ಹಾಕಲಾಗಿದೆ.