ಆಟೋದಲ್ಲಿ ಕಳೆದುಕೊಂಡಿದ್ದ ಲಕ್ಷ ಹಣವನ್ನು ಮರಳಿ ಮಾಲೀಕನಿಗೆ ತಲುಪಿಸಿದ ಚಾಲಕ!

ಹುಬ್ಬಳ್ಳಿ: ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಕಾಲದಲ್ಲಿ ಅನಿರೀಕ್ಷಿತವಾಗಿ ಸಿಕ್ಕ ಕಂಡವರ ಹಣವನ್ನು ಮತ್ತೆ ಅವರ ಜೇಬಿಗೆ ಸೇರಿಸುವುದೆಂದರೆ ಅದು ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯೇ ಸರಿ.

ಹೌದು, ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಆಟೋ ಚಾಲಕ ಅಬ್ದುಲಸಾಬ್ ಕಳಸ ಹೃದಯ ವೈಶಾಲತೆಯನ್ನು ಮೆರೆದಿದ್ದಾರೆ. ಸುಮಾರು ಒಂದೂವರೆ ಲಕ್ಷ ರೂ. ಹಣದ ಬ್ಯಾಗ್​ನ್ನು ಕಳೆದುಕೊಂಡಿದ್ದವರಿಗೆ ಮರಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹಾವೇರಿ ಮೂಲದ ಸಂಜಯ ಗೋಕರ್ಣಕರ್ ಎಂಬವರು ಶನಿವಾರ ಹುಬ್ಬಳ್ಳಿಗೆ ಬಂದಿದ್ದರು. ಆಟೋದಲ್ಲಿ ಪ್ರಯಾಣಿಸಿ ಕೊನೆಗೆ ಹಣವಿದ್ದ ಬ್ಯಾಗ್ ಅನ್ನು ನಗರದ ಪಗಡಿ ಗಲ್ಲಿಯಲ್ಲಿ ಬಿಟ್ಟಿಳಿದಿದ್ದರು. ಬಳಿಕ ಎಷ್ಟೋ ಹೊತ್ತಿನ ಮೇಲೆ ಬ್ಯಾಗ್ ನೆನಪಾಗಿ ಚಡಪಡಿಸಿದ್ದರು.

ಬ್ಯಾಗ್ ಕಳೆದುಹೋದ ಬಗ್ಗೆ ದೂರು ನೀಡಲು ಘಂಟೀಕೇರಿ ಪೊಲೀಸ್ ಠಾಣೆಗೆ ತಲುಪುವ ಮೊದಲೇ ಪೊಲೀಸರಿಗೆ ಚಾಲಕ ಸಾಬ್​ ಬ್ಯಾಗ್ ತಲುಪಿಸಿದ್ದ. ಆಟೋ ಚಾಲಕನ ಪ್ರಾಮಾಣಿಕತೆ ಕೊಂಡಾಡಿದ ಪೊಲೀಸರು ಹಣವನ್ನು ಮಾಲೀಕನಿಗೆ ತಲುಪಿಸಿ, 5000 ರೂ. ನಗದು ಬಹುಮಾನ ನೀಡಿ ಸನ್ಮಾನಿಸಿದರು. (ದಿಗ್ವಿಜಯ ನ್ಯೂಸ್​)