ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಯುವಲ್ಲಿ ಕಲಘಟಗಿ ತಾಲೂಕು ಮೊದಲ ಸ್ಥಾನದಲ್ಲಿದೆ. ನವಲಗುಂದ ಮತ್ತು ಅಣ್ಣಿಗೇರಿ ತಾಲೂಕು ಕೊನೆಯ ಸ್ಥಾನದಲ್ಲಿವೆ. 2023-24ನೇ ಸಾಲಿನಲ್ಲಿ ಕಲಘಟಗಿ ತಾಲೂಕಿನಲ್ಲಿ 1,533 ರೈತರು ಸಿರಿಧಾನ್ಯ ಬೆಳೆದಿದ್ದು, 1.47 ಕೋಟಿ ರೂ. ಪ್ರೋತ್ಸಾಹಧನ ಪಡೆದಿದ್ದಾರೆ. ಹುಬ್ಬಳ್ಳಿ ತಾಲೂಕಿನಲ್ಲಿ 430 ರೈತರು ಸಿರಿಧಾನ್ಯ ಬೆಳೆದಿದ್ದು, 37ಲಕ್ಷ ರೂ., ಕುಂದಗೋಳ ತಾಲೂಕಿನಲ್ಲಿ 147 ರೈತರು ಸಿರಿಧಾನ್ಯ ಬೆಳೆದಿದ್ದು, 11 ಲಕ್ಷ ರೂ., ಧಾರವಾಡ 63 ರೈತರು ಸಿರಿಧಾನ್ಯ ಬೆಳೆದು 6.11 ಲಕ್ಷ ರೂ., ಅಣ್ಣಿಗೇರಿ ಹಾಗೂ ನವಲಗುಂದದಲ್ಲಿ 9 ರೈತರು ಸಿರಿಧಾನ್ಯ ಬೆಳೆದು 1.50 ಲಕ್ಷ ರೂ. ಪ್ರೋತ್ಸಾಹಧನ ಪಡೆದಿದ್ದಾರೆ.
ಸಿರಿಧಾನ್ಯ ಬೆಳೆ ಯಾವವು?: ಊದಲು, ನವಣೆ, ಹಾರಕ, ಕೊರಲೆ, ಸಾಮೆ ಹಾಗೂ ಬರಗು. (ರಾಗಿ, ಜೋಳ ಮತ್ತು ಸಜ್ಜೆ ಬೆಳೆಗಾರರನ್ನು ಹೊರತುಪಡಿಸಿ)
2019ರಲ್ಲಿ ಆರಂಭ: ರಾಜ್ಯ ಸರ್ಕಾರ 2019-20ನೇ ಸಾಲಿ ಆಯವ್ಯಯದಲ್ಲಿ ಹೊಸದಾಗಿ ಈ ಯೋಜನೆಯನ್ನು ಘೋಷಣೆ ಮಾಡಿ 10 ಕೋಟಿ ರೂ.ಗಳನ್ನು ಮೀಸಲಿಟ್ಟಿತು. ಅಲ್ಲಿಂದ ಈವರೆಗೆ ಸರ್ಕಾರ ಪ್ರತಿ ಜಿಲ್ಲೆಗಳಿಗೆ ನಿಗದಿತ ಮೊತ್ತವನ್ನು ಯೋಜನೆಗೆ ಮೀಸಲಿಡುತ್ತ ಬಂದಿದೆ.
ಯೋಜನೆ ಉದ್ದೇಶ: ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ನೀಡುವುದು. ಸಿರಿಧಾನ್ಯ ಬೆಳೆಯುವ ಪ್ರತಿ ರೈತರಿಗೆ ಹೆಕ್ಟೇರ್ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದು ಯೋಜನೆಯ ಉದ್ದೇಶ. ಸಿರಿಧಾನ್ಯ ಬೆಳೆಯುವ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆ ಹೆಚ್ಚಿಸುವುದು. ಸಿರಿಧಾನ್ಯಗಳು ಪೌಷ್ಟಿಕ ಆಹಾರವಾಗಿದ್ದು, ಜನರಿಗೆ ಆಹಾರ ಭದ್ರತೆ ಒದಗಿಸುತ್ತದೆ. ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿ ಸಿರಿಧಾನ್ಯ ಬೆಳೆಯಬಹುದು. ಈ ಬೆಳೆಗಳಿಗೆ ಅತಿ ಕಡಿಮೆ ಮಳೆ, ಕಡಿಮೆ ಫಲವತ್ತತೆವುಳ್ಳ ಜಮೀನಿನ ಸದ್ಬಳಕೆ ಮಾಡಿಕೊಳ್ಳಲು ಅನುಕೂಲ ಆಗುತ್ತದೆ. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಸಿರಿ ಧಾನ್ಯ ಬೆಳೆಯುವ ರೈತರ ಖಾತೆಗಳಿಗೆ ಅವರು ನೀಡಿರುವ ಬ್ಯಾಂಕ್ ಖಾತೆಗಳಿಗೆ ಎರಡು ಕಂತುಗಳಲ್ಲಿ ನೇರವಾಗಿ (ಡಿಬಿಟಿ ಮೂಲಕ) ಹಣ ಜಮೆ ಆಗುತ್ತದೆ.
ಉತ್ತಮ ಆರೋಗ್ಯ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಜನರು ಇತ್ತೀಚೆಗೆ ಸಿರಿಧಾನ್ಯ ಗಳನ್ನು ನಿತ್ಯ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ಹೀಗಾಗಿ, ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಉತ್ತಮ ದರ ಸಿಗುತ್ತಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಮುಂದಾಗಬೇಕು.
| ಮಂಜುನಾಥ ಅಂತರವಳ್ಳಿ, ಜಂಟಿ ಕೃಷಿ ನಿರ್ದೇಶಕ ಧಾರವಾಡರೈತರು ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯಲು ಮುಂದಾಗ ಬೇಕು. ಸಿರಿಧಾನ್ಯ ಬೆಳೆಯಲು ಖರ್ಚು ಕಡಿಮೆ. ಆದರೆ, ಲಾಭ ಹೆಚ್ಚಿಗೆ ಇದೆ. ಇತ್ತೀಚಿನ ದಿನಗಳಲ್ಲಿ ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅಲ್ಲದೆ, ಇವುಗಳ ಹೊಟ್ಟು ಮೇವು ಜಾನುವಾರುಗಳಿಗೆ ತುಂಬಾ ಉತ್ತಮ. ರೈತರು ಇಂಥ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು.
| ಮಂಜುಳಾ ಸೂರಗೊಂಡ, ಛಬ್ಬಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಕಳೆದ ವರ್ಷ ಹಿಂಗಾರಿ ಬೆಳೆಯಾಗಿ ಸೆಪ್ಟೆಂಬರ್ನಲ್ಲಿ 2 ಎಕರೆಯಲ್ಲಿ ಕೊರಲೆ ಬೆಳೆದಿದ್ದು 18 ಕ್ವಿಂಟಾಲ್ ಫಸಲು ಬಂದಿದೆ. 1 ಎಕರೆಯಲ್ಲಿ ನವಣಿ ಬೆಳೆದಿದ್ದು 11 ಕ್ವಿಂ. ಬೆಳೆ ಬಂದಿದೆ. 2 ಎಕರೆಯಲ್ಲಿ ಸಾಮೆ ಬೆಳೆದಿದ್ದು, 19 ಕ್ವಿಂ. ಫಸಲು ಬಂದಿದೆ. ಇವುಗಳು 3 ತಿಂಗಳ ಬೆಳೆಯಾಗಿವೆ. ಈ ವರ್ಷ ಡಿಸೆಂಬರ್ನಲ್ಲಿ ಸಿರಿಧಾನ್ಯ ಬೀಜ ಬಿತ್ತನೆ ಮಾಡುತ್ತೇನೆ.
| ಬಸಯ್ಯ ಮಂಟಯ್ಯನವರ, ಪ್ರಗತಿಪರ ರೈತ ಅಗಡಿ