ಹುಬ್ಬಳ್ಳಿ: ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿರುವ ‘ಮರಳಿ ಮನಸಾಗಿದೆ’ ಚಲನಚಿತ್ರದ ‘ಎದುರಿಗೆ ಬಂದರೆ ಹೃದಯಕೆ ತೊಂದರೆ’ ಮತ್ತು ‘ಸುಳಿ ಮಿಂಚು’ ಹಾಡುಗಳು ಈಗಾಗಲೇ ಜನರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಚಿತ್ರದ ನಿರ್ವಪಕ ಮುದೇಗೌಡ್ರು ನವೀನಕುಮಾರ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಚಿತ್ರದ ಕುರಿತು ಅವರು ಮಾತನಾಡಿದರು. ಚಿತ್ರದಲ್ಲಿ ಐದು ಮೆಲೋಡಿ ಹಾಡುಗಳಿವೆ. ಇದು ನೈಜ ಕತೆವುಳ್ಳ ಚಿತ್ರವಾಗಿದ್ದು, ಸದ್ಯದ ಯುವ ಜನತೆಯ ಭಾವನೆ, ಜೀವನ ಕ್ರಮಗಳ ಕುರಿತ ಕಥೆ ಒಳಗೊಂಡಿದೆ. ಕೌಟುಂಬಿಕ ಚಿತ್ರವಾಗಿದ್ದು, ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ನೋಡುವ ಸಿನಿಮಾ ಆಗಿದೆ. ಭಟ್ಕಳ, ಮಣಿಪಾಲ, ಬೆಂಗಳೂರು, ದಾವಣಗೆರೆ, ಕುಮಟಾ, ಮಂಗಳೂರು, ಬೈಂದೂರು, ಉಡುಪಿ ಸೇರಿದಂತೆ ವಿವಿಧೆಡೆ ಚಿತ್ರದ ಚಿತ್ರೀಕರಣ ಮಾಡಲಾಗಿದೆ ಎಂದರು.
ಜುಲೈನಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿ ಇದ್ದು, ಚಿತ್ರದ ಕೆಲಸ ಮುಗಿದ ತಕ್ಷಣ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು. ಹೊಸಬರ ತಂಡ ಸೇರಿ ನಿರ್ವಿುಸಿದ ಚಿತ್ರವನ್ನು ಪ್ರೇಕ್ಷಕರು ನೋಡಿ ಚಿತ್ರತಂಡವನ್ನು ಹರಸಬೇಕು ಎಂದು ಮನವಿ ಮಾಡಿದರು.
ಚಿತ್ರದ ನಾಯಕ ನಟ ಅರ್ಜುನ್ ವೇದಾಂತ ಮಾತನಾಡಿ, ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಸಾಹಸ ದೃಶ್ಯಗಳು ಅತ್ಯದ್ಭುತವಾಗಿ ಮೂಡಿ ಬಂದಿವೆ. ನಾನು ಈಗಾಗಲೇ ಕನ್ನಡ, ತಮಿಳು, ತೆಲಗು ಭಾಷೆಯ ಒಟ್ಟು 10 ಚಿತ್ರಗಳಲ್ಲಿ ನಟಿಸಿದ್ದು, ಇದು 11ನೇ ಚಿತ್ರವಾಗಿದೆ. ಒಳ್ಳೆಯ ಚಿತ್ರಕಥೆ ಹೊಂದಿದ್ದು, ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ. ಮೇ 3ರಂದು ಉಡುಪಿಯಲ್ಲಿ 3ನೇ ಹಾಡು ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಚಿತ್ರ ನಿರ್ದೇಶಕ ನಾಗರಾಜ ಶಂಕರ್ ಮಾತನಾಡಿ, ಕನ್ನಡ ಚಲನಚಿತ್ರಗಳಿಗೆ ಉತ್ತರ ಕರ್ನಾಟಕದಲ್ಲಿ ಸದಾ ಬೆಂಬಲ ಸಿಗುತ್ತದೆ. ಹುಬ್ಬಳ್ಳಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಖ್ಯಾತಿ ಗಳಿಸಿದೆ. ಇಲ್ಲಿನ ಜನರು ಕಲಾಪ್ರೇಮಿಗಳಾಗಿದ್ದು, ಕನ್ನಡ ಚಿತ್ರರಂಗವನ್ನು ಪೋಷಿಸುತ್ತ ಬಂದಿದ್ದಾರೆ. ಅದೇ ರೀತಿ ‘ಮರಳಿ ಮನಸಾಗಿದೆ’ ಚಿತ್ರವನ್ನು ನೋಡಿ ಬೆಂಬಲಿಸಬೇಕು ಎಂದರು.
ಚಿತ್ರದಲ್ಲಿ ನಿರೀಕ್ಷಾ ಶೆಟ್ಟಿ, ಸ್ಮೃತಿ, ಟಿ.ಎಸ್. ನಾಗಾಭರಣ, ಮಾನಸಿ ಸುಧೀರ, ಸೀರುಂಡೆ ರಘು ಮುಂತಾದವರು ಅಭಿನಯಿಸಿದ್ದಾರೆ. ನಿರ್ಮಾಣ ಮೇಲ್ವಿಚಾರಕ ವಿಜಯಕುಮಾರ್ ಎಸ್. ಸುದ್ದಿಗೋಷ್ಠಿಯಲ್ಲಿ ಇದ್ದರು.
