ಸಿಎಂ ಕುಮಾರಸ್ವಾಮಿಯವರ ಆಲಮಟ್ಟಿ ಪ್ರವಾಸ ರದ್ದು

ಹುಬ್ಬಳ್ಳಿ: ಹವಾಮಾನ ವೈಪರೀತ್ಯ ಹಿನ್ನೆಲೆ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಿಎಂ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಬಾಗಿನ ಅರ್ಪಿಸಲು ಆಲಮಟ್ಟಿಗೆ ತೆರಳುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಾಪಸ್ ಆಗಿದ್ದಾರೆ.

ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ಪೈಲಟ್‌ ಅನುಮತಿ ನೀಡದಿದ್ದರಿಂದ ಆಲಮಟ್ಟಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಹೆಚ್ಚಿದ ಮಳೆ ಮತ್ತು ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಆಲಮಟ್ಟಿ ಡ್ಯಾಂಗೆ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್‌ ತಿಳಿಸಿದ್ದಾರೆ. ಬಾಗಿನ ಕಾರ್ಯಕ್ರಮ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಸುವ ಸಾದ್ಯತೆ ಇದ್ದು, ಮುಂದಿನ ತಿಂಗಳು ಬಾಗಿನ ಅರ್ಪಣೆ ಕಾರ್ಯಕ್ರಮ ನೆರವೇರಿಸುವುದಾಗಿ ಸಿಎಂ ಹೇಳಿದ್ದಾಗಿ ತಿಳಿಸಿದ್ದಾರೆ.

ವಿಜಯಪುರ ಜಿಲ್ಲಾ ಪ್ರವಾಸ ರದ್ದು

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿಜಯಪುರ ಜಿಲ್ಲಾ ಪ್ರವಾಸ ಸೇರಿ ನಗರದಲ್ಲಿ ನಡೆಯಬೇಕಿದ್ದ ಹಲವು ಕಾರ್ಯಕ್ರಮಗಳು ರದ್ದಾಗಿವೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮನೆಗೆ ಭೇಟಿ ನೀಡಿದ ನಂತರ ಸಿಎಂ ಬೆಂಗಳೂರಿಗೆ ತೆರಳಲಿದ್ದಾರೆ. ಸಂಜೆ ನಗರದ ಆರ್‌ಎನ್‌ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಆದರೆ ಸಭೆ ರದ್ದಾಗುತ್ತಿದ್ದಂತೆ ಬೇಸರಗೊಂಡ ಪಕ್ಷದ ಕಾರ್ಯಕರ್ತರು ಮುಖಂಡರು ವಾಪಸ್‌ ತೆರಳಿದ್ದಾರೆ.