ಹುಬ್ಬಳ್ಳಿ: ಭೈರಿದೇವರಕೊಪ್ಪದಲ್ಲಿರುವ ಗ್ಲೋಬಲ್ ಬಿಸಿನೆಸ್ ಸ್ಕೂಲ್ನಲ್ಲಿ ಮೇ 2 ಮತ್ತು 3ರಂದು ಜಿಬಿಎಸ್ ಉತ್ಸವ-2025 ಏರ್ಪಡಿಸಲಾಗಿದೆ ಎಂದು ನಿರ್ದೇಶಕ ಡಾ. ಸುಮನ್ ಕುಮಾರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 2ರಂದು ಬೆಳಗ್ಗೆ 10 ಗಂಟೆಗೆ ಡಾ. ಶ್ರೀನಿವಾಸ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ಕರ್ನಾಟಕದ ವಿವಿಧ ಭಾಗಗಳಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಎರಡು ದಿನಗಳ ರಾಜ್ಯಮಟ್ಟದ ನಿರ್ವಹಣಾ ಉತ್ಸವದ ಮೂಲಕ ಸ್ಪರ್ಧಾತ್ಮಕತೆ, ಬೌದ್ಧಿಕ ಚಟುವಟಿಕೆ ಮತ್ತು ಸಾಂಸ್ಕೃತಿಕ ಉತ್ಸವ ನಡೆಸಲಾಗುವುದು. ವಿದ್ಯಾರ್ಥಿಗಳ ನಿರ್ವಹಣಾ ತಾತ್ವಿಕತೆ, ಸೃಜನಶೀಲತೆ ಹಾಗೂ ನಾಯಕತ್ವ ಸಾಮರ್ಥ್ಯ ಅಭಿವ್ಯಕ್ತಪಡಿಸಲು ವಿನ್ಯಾಸಗೊಳಿಸಲಾಗಿದೆ. ಗ್ಲೋಬಲ್ ಬಿಸಿನೆಸ್ ಸ್ಕೂಲ್ನ ಶ್ರೇಷ್ಠತೆಯ ತತ್ವಕ್ಕೆ ಅನುಗುಣವಾಗಿ, ಈ ಉತ್ಸವ ವಿದ್ಯಾರ್ಥಿ ನೇತೃತ್ವದ ಕಾರ್ಯಗಳು, ಅನುಭವಾಧಾರಿತ ಅಧ್ಯಯನ ಮತ್ತು ಸಹಕಾರ ಪರಂಪರೆ ಮೇಲೆ ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಬಿಸಿನೆಸ್ ಕ್ವಿಜ್- ವ್ಯಾಪಾರ ಜ್ಞಾನ ಮತ್ತು ತಂತ್ರಜ್ಞಾನದ ಪರೀಕ್ಷೆ, ಕಾರ್ಪೆರೇಟ್ ಐಡಲ್- ನಾಯಕತ್ವ ಮತ್ತು ವೃತ್ತಿಪರ ಕೌಶಲ ಪ್ರದರ್ಶನ, ಸ್ಟಾರ್ಟಪ್ ಪ್ಲ್ಯಾನ್- ಉದ್ಯಮಶೀಲ ಆಲೋಚನೆಗಳ ಪ್ರಸ್ತುತಿ ಸ್ಪರ್ಧೆ, ಬೆಸ್ಟ್ ಔಟ್ ಆಫ್ ವೆಸ್ಟ್- ಮರುಬಳಕೆಯ ಮೂಲಕ ಸೃಜನಶೀಲತೆಗೆ ಪೋ›ತ್ಸಾಹ, ಐಸ್ ಬ್ರೇಕರ್ ಚಟುವಟಿಕೆ- ಸ್ನೇಹ ಬೆಳೆಸುವ ಚಟುವಟಿಕೆ, ಅಡ್ಮಾಡ್ ಶೋ- ಜಾಹೀರಾತು ಕೌಶಲದ ಸ್ಪರ್ಧಾತ್ಮಕ ಪ್ರದರ್ಶನ, ಶಾರ್ಟ್ ಫಿಲಂ ಸ್ಪರ್ಧೆ- ಕಿರುಚಿತ್ರಗಳ ಮೂಲಕ ಕಥೆ ಹೇಳುವ ವೇದಿಕೆ, ದಿ ಹಂಕ್ ಫಿಟ್ನೆಸ್ ಐಡಲ್- ಆರೋಗ್ಯ ಮತ್ತು ಆತ್ಮವಿಶ್ವಾಸದ ಸಂಭ್ರಮ, ಫೈನಾನ್ಸ್ ಗೇಮ್ ಹಣಕಾಸು ಜ್ಞಾನ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲದ ಪರೀಕ್ಷೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಸಂಗೀತ ಮತ್ತು ಕಲಾತ್ಮಕ ಪ್ರದರ್ಶನಗಳು ಇವೆ ಎಂದರು.
ಡಾ. ತೇಜಸ್ವಿನಿ ಪಾಟೀಲ ಮಾತನಾಡಿ, ವಿವಿಧ ಪದವಿ ಕಾಲೇಜುಗಳ 10 ಜನ ವಿದ್ಯಾರ್ಥಿಗಳ 35 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಡಾ. ವಿಜಯಕುಮಾರ ಎನ್., ಗೌರಿ ಎನ್., ಸನ್ಮತಿ ಎಸ್. ಜಾವೀದ್ ಬಿ. ಇದ್ದರು.
