ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಧಾರವಾಡ ಜಿಲ್ಲೆಯ ಮದ್ಯ ಪ್ರಿಯರು ಇತ್ತೀಚಿನ ದಿನಗಳಲ್ಲಿ ಬಿಯರ್ ಬಿಟ್ಟು ಹಾಟ್ ಡ್ರಿಂಕ್ಸ್ನತ್ತ ಮುಖ ಮಾಡಿದ್ದಾರೆ. ಇದಕ್ಕೆ ದರ ಹೆಚ್ಚಳ, ಅವರವರ ಅಭಿರುಚಿ ಮತ್ತು ಹವಾಮಾನ ಕಾರಣ ಇರಬಹುದು ಎನ್ನುತ್ತಾರೆ ಮದ್ಯದಂಗಡಿ ಮಾಲೀಕರು.
ಧಾರವಾಡ ಜಿಲ್ಲೆಯಲ್ಲಿ ಕಳೆದ ವರ್ಷ 2023ರ ಏಪ್ರಿಲ್ನಿಂದ 2024ರ ಜುಲೈವರೆಗೆ 16 ತಿಂಗಳಲ್ಲಿ ಜಿಲ್ಲೆಯ ಒಟ್ಟು 8 ವಲಯಗಳಲ್ಲಿ ಐಎಂಎಲ್ (ಭಾರತೀಯ ತಯಾರಿಕಾ ಮದ್ಯ) 22.37 ಲಕ್ಷ ಬಾಕ್ಸ್ ಮತ್ತು 14.98 ಲಕ್ಷ ಬಿಯರ್ ಸೇರಿ 37.36 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ.
16 ತಿಂಗಳಲ್ಲಿ ಬಿಯರ್, ಮದ್ಯ, ಅಬಕಾರಿ ಸುಂಕ, ಸನ್ನದು ಶುಲ್ಕ, ದಂಡ ಮತ್ತು ಮುಟ್ಟುಗೋಲು, ಡಿಸ್ಟಿಲರಿ ಶುಲ್ಕ ಸೇರಿ ಜಿಲ್ಲೆಯಲ್ಲಿ ಒಟ್ಟು 2,529.28 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಮಾರಾಟ ವಿವರ: 2023ರ ಏಪ್ರಿಲ್ನಿಂದ 2024ರ ಮಾರ್ಚ್ವರೆಗೆ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ ನಗರ, ಹುಬ್ಬಳ್ಳಿ ಗ್ರಾಮೀಣ, ಕಲಘಟಗಿ, ಕುಂದಗೋಳ, ಅಣ್ಣಿಗೇರಿ, ಅಳ್ನಾವರ, ನವಲಗುಂದ ಒಟ್ಟು 8 ವಲಯಗಳಲ್ಲಿ ಐಎಂಎಲ್ (ಭಾರತೀಯ ತಯಾರಿಕಾ ಮದ್ಯ) 16.70 ಲಕ್ಷ ಬಾಕ್ಸ್ ಮದ್ಯ ಸೇಲ್ ಆಗಿದೆ.
ಧಾರವಾಡದಲ್ಲಿ 5.22 ಲಕ್ಷ ಬಾಕ್ಸ್, ಹುಬ್ಬಳ್ಳಿ ರೇಂಜ್-1ರಲ್ಲಿ 1.84 ಲಕ್ಷ, ಹುಬ್ಬಳ್ಳಿ ರೇಂಜ್-2ರಲ್ಲಿ 2.35 ಲಕ್ಷ, ಹುಬ್ಬಳ್ಳಿ ರೇಂಜ್-3ರಲ್ಲಿ 1.37 ಲಕ್ಷ, ಹುಬ್ಬಳ್ಳಿ ರೇಂಜ್-4ರಲ್ಲಿ 2.52 ಲಕ್ಷ, ಕಲಘಟಗಿಯಲ್ಲಿ 1.15 ಲಕ್ಷ, ಕುಂದಗೋಳದಲ್ಲಿ 97 ಸಾವಿರ, ನವಲಗುಂದದಲ್ಲಿ 1.24 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ. ಇನ್ನು 2024ರ ಏಪ್ರಿಲ್ನಿಂದ ಜುಲೈವರೆಗೆ ಒಟ್ಟು 5.67 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ.
ಅದೇ ರೀತಿ ಬಿಯರ್ 2023ರ ಮಾರ್ಚ್-ಏಪ್ರಿಲ್ನಿಂದ 2024ರ ಮಾರ್ಚ್ವರೆಗೆ 10.80 ಲಕ್ಷ ಬಾಕ್ಸ್ ಸೇಲ್ ಆಗಿವೆ. ಧಾರವಾಡದಲ್ಲಿ 3.12 ಲಕ್ಷ ಬಾಕ್ಸ್, ಹುಬ್ಬಳ್ಳಿ-1ರಲ್ಲಿ 1.46 ಲಕ್ಷ, ಹುಬ್ಬಳ್ಳಿ -2ರಲ್ಲಿ 2.38 ಲಕ್ಷ, ಹುಬ್ಬಳ್ಳಿ-3ರಲ್ಲಿ 83 ಸಾವಿರ, ಹುಬ್ಬಳ್ಳಿ-4ರಲ್ಲಿ 1.79 ಲಕ್ಷ, ಕಲಘಟಗಿಯಲ್ಲಿ 40 ಸಾವಿರ, ಕುಂದಗೋಳದಲ್ಲಿ 27 ಸಾವಿರ, ನವಲಗುಂದದಲ್ಲಿ 51 ಸಾವಿರ ಬಾಕ್ಸ್ ಮಾರಾಟವಾಗಿವೆ. ಇನ್ನು 2024ರ ಏಪ್ರಿಲ್ನಿಂದ ಜುಲೈವರಗೆ 4.18 ಲಕ್ಷ ಬಾಕ್ಸ್ ಮಾರಾಟವಾಗಿವೆ.
ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿಗೆ ಒಟ್ಟು 152 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 82 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 70 ಹುದ್ದೆಗಳು ಖಾಲಿ ಇವೆ. ಅದರಲ್ಲೂ ಮುಖ್ಯವಾಗಿ ಎಕ್ಸೈಸ್ ಕಾನ್ಸ್ಟೆಬಲ್ 42 ಹುದ್ದೆಗಳು ಖಾಲಿ ಇದ್ದು, ಹುದ್ದೆ ಭರ್ತಿ ಕುರಿತು ಸರ್ಕಾರಕ್ಕೆ ಮಾಹಿತಿ ಸಲ್ಲಿಸಿದ್ದೇವೆ.
| ರಮೇಶಕುಮಾರ ಎಚ್. ಅಬಕಾರಿ ಉಪ ಆಯುಕ್ತ ಧಾರವಾಡರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ಮದ್ಯದ ಮೇಲಿನ ಎಕ್ಸೈಸ್ ಡ್ಯೂಟಿಯನ್ನು ಹೆಚ್ಚಳ ಮಾಡುತ್ತಲೇ ಇದೆ. ಇದರಿಂದ ಬಿಯರ್ ದರ ಹೆಚ್ಚಳವಾಗುತ್ತಿದೆ. ಹೀಗಾಗಿ, ಬಿಯರ್ ಕುಡಿಯುವವರು ನಿಧಾನವಾಗಿ ಐಎಂಎಲ್ ಮದ್ಯ ಸೇವನೆಯತ್ತ ವಾಲುತ್ತಿದ್ದಾರೆ. ಇದರಿಂದ ಐಎಂಎಲ್ ಮದ್ಯ ಮಾರಾಟ ಹೆಚ್ಚಿಗೆ ಆಗಿದೆ. ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಒಂದು ಬಾಟಲಿಗೆ ಅಂದಾಜು 40 ರೂಪಾಯಿ ದುಬಾರಿ ಇದೆ.
| ಟಿ.ಎಂ. ಮೆಹರವಾಡೆ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಕೋಶಾಧಿಕಾರಿಕೋವಿಡ್ ಸಮಯದಲ್ಲಿ ರಾಜ್ಯ ಸರ್ಕಾರ ಒಂದು ಬಾರಿ ಶೇ. 18ರಷ್ಟು ಮತ್ತೊಮ್ಮೆ ಶೇ. 6ರಷ್ಟು ಎಕ್ಸೈಸ್ ಡ್ಯೂಟಿ ಹೆಚ್ಚಳ ಮಾಡಿತ್ತು. ಇದರಿಂದ ಮದ್ಯದ ಬಾಟಲ್ಗಳ ದರ ಹೆಚ್ಚಿಗೆ ಆಯಿತು. ಬಳಿಕ ಅದನ್ನು ಕಡಿಮೆ ಮಾಡಲಿಲ್ಲ. ಪಕ್ಕದ ರಾಜ್ಯಗಳಲ್ಲಿ ಹೆಚ್ಚಿಗೆ ಮಾಡಿದ್ದ ಎಕ್ಸೈಸ್ ಡ್ಯೂಟಿಯನ್ನು ಅಲ್ಲಿನ ಸರ್ಕಾರ ಕಡಿಮೆ ಮಾಡಿದವು. ನಮ್ಮ ರಾಜದ್ಯದಲ್ಲಿ ಕೂಡ ಎಕ್ಸೈಸ್ ಡ್ಯೂಟಿ ಕಡಿಮೆ ಮಾಡುವಂತೆ ಈ ಹಿಂದೆಯೇ ಮುಖ್ಯಮಂತ್ರಿ ಮತ್ತು ಅಬಕಾರಿ ಆಯಕ್ತರಿಗೆ ಮನವಿ ಸಲ್ಲಿಸಿದ್ದೇವೆ.
| ಸುನೀಲ ವಾಳ್ವೇಕರ ಲಿಕ್ಕರ್ ಡೀಲರ್ಸ್ ಅಸೋಸಿಯೇಷನ್ ಹುಬ್ಬಳ್ಳಿ ಅಧ್ಯಕ್ಷಅಬಕಾರಿ ಅಧಿಕಾರಿಗಳ ದಾಳಿ
2023ರ ಜುಲೈನಿಂದ 2024 ಜುಲೈವರೆಗೆ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧೆಡೆ 13 ತಿಂಗಳಲ್ಲಿ 3,118 ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಮದ್ಯ ಸಾಗಾಟ ಮತ್ತು ಮಾರಾಟ ಕುರಿತು 1,954 ಪ್ರಕರಣ ದಾಖಲಿಸಿ, 1,830 ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. 48 ವಾಹನಗಳನ್ನು ವಶಕ್ಕೆ ಪಡೆದಿದ್ದು, 94,636 ಲೀಟರ್ ಮದ್ಯ ಮತ್ತು ಬಿಯರ್ ಸೀಜ್ ಮಾಡಿದ್ದಾರೆ.