ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಧಾರವಾಡ ಜಿಲ್ಲೆಯಲ್ಲಿ 2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ 9.75 ಲಕ್ಷ ಬಾಕ್ಸ್ (1 ಬಾಕ್ಸ್‌ನಲ್ಲಿ 8.5 ಲೀ.) ಬಿಯರ್ ಭರ್ಜರಿ ಮಾರಾಟವಾಗಿವೆ. ಅದೇ ರೀತಿ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) 16.87 ಲಕ್ಷ ಬಾಕ್ಸ್ ಮಾರಾಟವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಬಿಯರ್ ಮಾರಾಟದಲ್ಲಿ ಶೇ.47ರಷ್ಟು ಹೆಚ್ಚಾಗಿದ್ದರೆ, ಐಎಂಎಲ್ ಲಿಕ್ಕರ್ ಶೇ. 5ರಷ್ಟು ಅಧಿಕವಾಗಿದೆ. 2021-22ರಲ್ಲಿ 6.59 ಲಕ್ಷ ಬಾಕ್ಸ್ ಬಿಯರ್ ಮಾರಾಟ, 22-23ರಲ್ಲಿ (ಏ. 22ರಿಂದ ಮಾ.23ರವರೆಗೆ) 9.75 ಲಕ್ಷ ಬಾಕ್ಸ್ ಮಾರಾಟವಾಗಿವೆ. ಕಳೆದ ವರ್ಷಕ್ಕಿಂತ 3.15 ಲಕ್ಷ ಬಾಕ್ಸ್ ಮಾರಾಟ ಹೆಚ್ಚಾಗಿದೆ. ಇನ್ನು ಐಎಂಎಲ್ 2021-22ರಲ್ಲಿ 16.08 ಲಕ್ಷ ಬಾಕ್ಸ್ ಲಿಕ್ಕರ್ ಮಾರಾಟವಾಗಿವೆ. 2022-23ರಲ್ಲಿ 16.87 ಲಕ್ಷ ಬಾಕ್ಸ್ ಲಿಕ್ಕರ್ ಮಾರಾಟವಾಗಿದೆ. ಇದು ಕಳೆದ ವರ್ಷಕ್ಕಿಂತ 78 ಸಾವಿರ ಬಾಕ್ಸ್ ಹೆಚ್ಚು ಮಾರಾಟವಾಗಿದೆ.
ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ಮದ್ಯ ಮಾರಾಟ ಕಡಿಮೆಯಾಗಿತ್ತು. ಈಗ ಪ್ರವಾಸಿಗರು ಬಂದು, ಹೋಗುವುದು, ಬೇಸಿಗೆ ಕಾರಣ ಬಿಯರ್ ಮಾರಾಟ ಹೆಚ್ಚಳವಾಗಿದೆ ಎಂಬುದು ಅಬಕಾರಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಜಿಲ್ಲೆಯಲ್ಲಿವೆ 293 ಮದ್ಯದಂಗಡಿ: ಎಲ್ಲ ತಾಲೂಕು ಸೇರಿ ಜಿಲ್ಲೆಯಲ್ಲಿ ಪರವಾನಗಿ ಪಡೆದ 293 ಮದ್ಯದಂಗಡಿಗಳಿವೆ. ಐದು ತಾಲೂಕುಗಳ ವಿವಿಧ ಗ್ರಾಮಗಳಲ್ಲಿ 30 ಎಂಎಸ್‌ಐಎಲ್ ಮಳಿಗೆಗಳಿವೆ. ಅಕ್ರಮ ಮದ್ಯ ಮಾರಾಟ ತಡೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಆಗಾಗ ದಾಳಿ ನಡೆಸುತ್ತಾರೆ. 2021- 22ರಲ್ಲಿ 2021ರ ಜುಲೈನಿಂದ 22ರ ಜೂ.ವರೆಗೆ ಒಟ್ಟು 1,872 ದಾಳಿ ನಡೆಸಿ, 821 ಪ್ರಕರಣ ದಾಖಲಿಸಿದ್ದಾರೆ. 480 ಆರೋಪಿಗಳನ್ನು ದಸ್ತಗಿರಿ ಮಾಡಿ, 24 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
2022ರ ಜುಲೈನಿಂದ 23ರ ಏಪ್ರಿಲ್ ವರೆಗೆ ಒಟ್ಟು 2,478 ಬಾರಿ ದಾಳಿ ನಡೆಸಿ, 1,435 ಪ್ರಕರಣ ದಾಖಲಿಸಿದ್ದಾರೆ. 2,872 ಆರೋಪಿಗಳನ್ನು ದಸ್ತಗಿರಿ ಮಾಡಿ, 56 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 19 ಸಾವಿರ ಲೀಟರ್ ಮದ್ಯ, 9 ಸಾವಿರ ಲೀಟರ್ ಬಿಯರ್, 372 ಲೀಟರ್ ಗೋವಾ ಮದ್ಯ ವಶಪಡಿಸಿಕೊಂಡಿದ್ದಾರೆ.
ಚುನಾವಣೆ ವೇಳೆ 1,160 ಪ್ರಕರಣ: ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ 2023ರ ಮಾ. 29ರಿಂದ ಮೇ 15ರವರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಒಟ್ಟು 1,160 ಪ್ರಕರಣ ದಾಖಲಿಸಿದ್ದಾರೆ. ವಿವಿಧ ತರಹದ ಮದ್ಯ ಜಪ್ತಿ ಮಾಡಿದ್ದಾರೆ. ಬೈಕ್-ರಿಕ್ಷಾ 39, ನಾಲ್ಕು ಚಕ್ರದ ವಾಹನ 8, ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇವೆಲ್ಲವುಗಳ ಮೌಲ್ಯ 2.81 ಕೋಟಿ ರೂಪಾಯಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ ಮತ್ತು ಮದ್ಯ ದಾಸ್ತಾನು ಹೊಂದಿದ್ದರೆ ಅಂಥವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುತ್ತೇವೆ. ಮನೆ ಅಥವಾ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ 2.3 ಲೀಟರ್‌ಗಿಂತ ಹೆಚ್ಚು ಮದ್ಯ ಇದ್ದರೆ ಅಂಥವರ ವಿರುದ್ಧವೂ ಕೇಸು ದಾಖಲಿಸುತ್ತೇವೆ.
ಕೆ. ಪ್ರಶಾಂತಕುಮಾರ
ಅಬಕಾರಿ ಉಪ ಆಯುಕ್ತರು ಧಾರವಾಡ