ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ

ಮಾವಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಈಗ ಎಲ್ಲೆಲ್ಲೂ ಮಾವಿನದ್ದೇ ಸುಗ್ಗಿ. ಬಾಯಲ್ಲಿ ನೀರೂರಿಸುವಂತಹ ತರಹೇವಾರಿ ಮಾವಿನ ಹಣ್ಣುಗಳನ್ನು ಬೆಳೆದಿದ್ದಾರೆ ಧಾರವಾಡ ತಾಲೂಕುಕಲಕೇರಿ ಗ್ರಾಮದಲ್ಲಿ ರೈತ ಪ್ರಮೋದ ತುಕಾರಾಮ ಗಾಂವಕರ. ತಮ್ಮ ತೋಟದಲ್ಲಿ 80ಕ್ಕೂ ಹೆಚ್ಚು ತಳಿಯ ದೇಶಿ ಮತ್ತು ವಿದೇಶಿ ಮಾವು ಬೆಳೆದು ಮಾವಿನ ಲೋಕವನ್ನೇ ಸೃಷ್ಟಿದ್ದಾರೆ. ಧಾರವಾಡ ಆಪೂಸ್ (ಅಲ್ಪೋನ್ಸೋ) ಬೆಳೆಯುವಲ್ಲಿ ವಿಶೇಷ ಪ್ರೀತಿ ಹೊಂದಿರುವ ಪ್ರಮೋದ ಗಾಂವಕರ, ಧಾರವಾಡ ಪೇಡಾ ಖ್ಯಾತಿ ಗಳಿಸಿರುವಂತೆ ಈ ಹಣ್ಣಿನ ಖ್ಯಾತಿಯನ್ನು ವಿಶ್ವಾದ್ಯಂತ ಪಸರಿಸುವ ಗುರಿ ಹೊಂದಿದ್ದಾರೆ. ಕಳೆದ ಐದಾರು ವರ್ಷಗಳಿಂದ ಮುಂಬೈ, ಪುಣೆ, ದೆಹಲಿ, ಬೆಂಗಳೂರು ಮತ್ತಿತರ ದೊಡ್ಡ ನಗರಗಳಿಗೆ ಹಣ್ಣುಗಳನ್ನು ಕಳುಹಿಸುತ್ತಿದ್ದು, ಕಳೆದ ವರ್ಷ ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋ, ಚಿಕಾಗೋಗೂ ರಫ್ತು ಮಾಡಿದ್ದಾರೆ. ಈ ಬಾರಿ ಸಿಂಗಾಪುರ್ಗೆ ರವಾನೆ ಗುರಿ ಹೊಂದಿದ್ದು, ಈಗಾಗಲೇ ಹಣ್ಣುಗಳ ಸ್ಯಾಂಪಲ್ ಕಳುಹಿಸಲಾಗಿದೆ. ಅಲ್ಲಿಂದಲೂ ಆರ್ಡರ್ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಪ್ರಮೋದ ಅವರ ಪುತ್ರ ಪ್ರವೀಣ ಗಾಂವಕರ.
ಎಕರೆ ತೋಟ: ಪ್ರಮೋದ ಅವರ ತಂದೆ ತುಕಾರಾಮ, ಕಳೆದ 60 ವರ್ಷಗಳ ಹಿಂದೆ 300 ಮಾವಿನ ಸಸಿಗಳನ್ನು ಮಹಾರಾಷ್ಟ್ರದ ದೇವಗಿರಿ, ರತ್ನಾಗಿರಿಯಿಂದ ತಂದು ನಾಟಿ ಮಾಡಿದ್ದರು. ಬಳಿಕ ಪ್ರಮೋದ ಅವರು 40 ವರ್ಷಗಳಿಂದ 6,700 ವಿವಿಧ ಬಗೆಯ ಮಾವಿನ ಸಸಿಗಳನ್ನು ತಂದು ನಾಟಿ ಮಾಡಿದ್ದು, ಈವರೆಗೆ ತೋಟದಲ್ಲಿ 7,000 ಮಾವಿನ ಗಿಡಗಳಿವೆ.
30 ಟನ್ ಮಾವು ನಿರೀಕ್ಷೆ: ಹವಾಮಾನ ಸ್ವಲ್ಪ ಏರು-ಪೇರಾದ ಕಾರಣ ಈ ವರ್ಷ ಇಳುವರಿ 30 ಟನ್ ಬರುವ ನಿರೀಕ್ಷೆ ಇದೆ. ಮಳೆ, ಅತಿಯಾದ ಬಿಸಿಲು, ಕೀಟ ಬಾಧೆ ಕಾರಣ ಇಳುವರಿ ಕಡಿಮೆ ಇದೆ. ಇಲ್ಲದಿದ್ದರೆ 40 ಟನ್ಗಿಂತ ಹೆಚ್ಚಿಗೆ ಬರುತ್ತಿತ್ತು ಎನ್ನುತ್ತಾರೆ ಪ್ರಮೋದ ಗಾಂವಕರ.
ಅಡಿ ಹಾಕಿ ಹಣ್ಣು ಮಾಡುವ ವಿಧಾನ: ತೋಟದಲ್ಲಿರುವ ಪ್ಯಾಕಿಂಗ್ ಹೌಸ್ನಲ್ಲಿ ಟ್ರೇಗಳಲ್ಲಿ ಭತ್ತದ ಹುಲ್ಲಿನಲ್ಲಿ ಅಡಿ ಹಾಕಿ ಮಾವಿನ ಕಾಯಿಗಳನ್ನು ನೈಸರ್ಗಿಕವಾಗಿ ಹಣ್ಣು ಮಾಡುತ್ತಾರೆ. ಹೀಗಾಗಿ, ಮಾರುಕಟ್ಟೆಯಲ್ಲಿ ಇವರ ತೋಟದ ಹಣ್ಣುಗಳಿಗೆ ಬೇಡಿಕೆ ಹೆಚ್ಚು. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಗ್ರಾಹಕರಿಗೆ ಸಿಹಿ ಮತ್ತು ಮಾಗಿದ ಹಣ್ಣುಗಳನ್ನು ನೀಡಬೇಕೆಂಬ ಉದ್ದೇಶ ಇವರದು.
ಗಾತ್ರದ ಆಧಾರದಲ್ಲಿ ದರ: ಹಣ್ಣುಗಳ ಗಾತ್ರಗಳ ಆಧಾರದಲ್ಲಿ ದರ ನಿಗದಿ ಮಾಡಲಾಗುತ್ತದೆ. ಸಣ್ಣ, ಮಧ್ಯಮ, ದೊಡ್ಡ, ಅತಿ ದೊಡ್ಡ ಹೀಗೆ ವಿಂಗಡಿಸಲಾಗುತ್ತದೆ. 1 ಡಜನ್ ಹಣ್ಣಿನ ಬಾಕ್ಸ್ (12 ಹಣ್ಣು) 300ರಿಂದ 700 ರೂ. ವರೆಗೆ ಮಾರಾಟವಾಗುತ್ತಿದೆ. ಅಡಿ ಹಾಕಿದ ಹಣ್ಣುಗಳಾಗಿದ್ದರಿಂದ 20ರಿಂದ 25 ದಿನಗಳವರೆಗೆ ಇಟ್ಟು ತಿನ್ನಬಹುದು.
500 ಶ್ರೀಗಂಧ, 100 ರಕ್ತಚಂದನ : 2 ಎಕರೆಯಲ್ಲಿ ಶ್ರೀಗಂಧದ 500 ಮರ, ರಕ್ತಚಂದನ 100 ಗಿಡ, 2 ರುದ್ರಾಕ್ಷಿ ಗಿಡ, 12 ಹಲಸಿನ ಗಿಡ, 25 ತೆಂಗಿನ ಗಿಡ, 200 ಮೆಣಸು, 4 ಸಾವಿರ ಸಾಗವಾನಿ ಗಿಡ, ಏಲಕ್ಕಿ, ಕರ್ಪರ, ಲವಂಗ, ಇಂಗಿನ ಗಿಡ, 10 ತಳಿಯ ಬಾಳೆ ಗಿಡ, ಕೆಂಪು ಪೇರಲ, ಹೀಗೆ ಇನ್ನೂ ಅನೇಕ ಗಿಡಗಳನ್ನು ಪ್ರಮೋದ ಗಾಂವಕರ ಬೆಳೆದಿದ್ದಾರೆ. 25 ಪೆಟ್ಟಿಗೆಗಳಲ್ಲಿ ಜೇನು ಸಾಕಾಣಿಕೆ ಕೂಡ ಮಾಡುತಾರೆ.
ಮಿಯಾಜಾಕಿ ಮಾವಿಗೆ 10 ಸಾವಿರ ರೂ.
ಜಪಾನ್ ತಳಿ ಮಿಯಾಜಾಕಿ ಮಾವಿನ ಹಣ್ಣಿನ ಎರಡು ಗಿಡಗಳನ್ನು ಪ್ರಮೋದ ಗಾಂವಕರ ಬೆಳೆಸಿದ್ದಾರೆ. ಈ ಹಣ್ಣಿನ ಬೆಲೆ ವಿಶ್ವದಲ್ಲೇ ಅತಿ ದುಬಾರಿ. ಜಪಾನ್ನಲ್ಲಿ ಕೆಜಿಗೆ 2.70 ಲಕ್ಷ ರೂ. ಇದೆ. ಕಳೆದ ವರ್ಷ ತೋಟದಲ್ಲಿ ಹತ್ತು ಹಣ್ಣುಗಳು ಬೆಳೆದಿದ್ದವು. ಐದು ಹಣ್ಣುಗಳನ್ನು 10 ಸಾವಿರ ರೂ.ಗೆ ಒಂದರಂತೆ ಮಾರಾಟ ಮಾಡಿದ್ದರು. ಈ ವರ್ಷ 25 ಹಣ್ಣು ಬೆಳೆದಿವೆ. ಈಗಾಗಲೇ 15 ಹಣ್ಣುಗಳಿಗೆ ಬೇಡಿಕೆ ಬಂದಿದೆ. ಗಿಡದಲ್ಲಿಯೇ ಹಣ್ಣಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇನ್ನುಳಿದ ಹಣ್ಣಿಗಿಂತ ಶೇ.15 ಸಕ್ಕರೆ ಪ್ರಮಾಣ ಹೆಚ್ಚಿಗೆ ಇರುತ್ತದೆ. ಜ್ಞಾಪಕಶಕ್ತಿ ಮತ್ತು ರೋಗನಿರೋಧಕ ಶಕ್ತಿ ವೃದಿಟಛಿಸುವ ಗುಣ ಈ ಹಣ್ಣಿಗಿದೆ. ಕ್ಯಾನ್ಸರ್ ರೋಗ ತಡೆಗಟ್ಟುತ್ತದೆ. ಇದಕ್ಕೆ ಕೀಟ ಬಾಧೆ ಬರದಂತೆ ತಡೆಯಲು ಕಾಯಿ ಮೇಲೆ ಕವರ್ ಹಾಕಿ ರಕ್ಷಣೆ ಮಾಡಲಾಗುತ್ತದೆ.
ಮಾವು ಬೆಳೆಗಾರರ ಬಳಗ: ಧಾರವಾಡದಲ್ಲಿ ಮಾವು ಬೆಳೆಗಾರರ ಬಳಗ ರಚಿಸಲಾಗಿದ್ದು, ಇಲ್ಲಿ 300ಕ್ಕೂ ಅಧಿಕ ಮಾವು ಬೆಳೆಗಾರರಿದ್ದಾರೆ. ಬಳಗದ ಮೂಲಕ ಮಾವಿನ ಹಣ್ಣನ್ನು ಧಾರವಾಡದಲ್ಲಿರುವ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಮಾರಾಟ ಮಾಡುತ್ತಾರೆ.
ಬೇಕಿದೆ ಜಿಐ ಟ್ಯಾಗ್: ಧಾರವಾಡ ಆಪೂಸ್ಗೆ ಕೇಂದ್ರ ಸರ್ಕಾರ ಜಿಐ ಟ್ಯಾಗ್ ನೀಡಿದರೆ ಇಡೀ ಜಗತ್ತಿನಾದ್ಯಂತ ಬ್ರ್ಯಾಂಡಿಂಗ್ ಮಾಡಲು ಬೆಳೆಗಾರರಿಗೆ ಅನುಕೂಲವಾಗುತ್ತದೆ. ಅದೇ ರೀತಿ ಹುಬ್ಬಳ್ಳಿ-ಧಾರವಾಡದಲ್ಲಿ ರಾಜ್ಯ ಸರ್ಕಾರ ಮಾವು ಮಾರಾಟಕ್ಕೆ ಪ್ರಮುಖ ಸ್ಥಳಗಳಲ್ಲಿ ಅವಕಾಶ ಕಲ್ಪಿಸಬೇಕು. ಕೋಲ್ಡ್ ಸ್ಟೋರೇಜ್ ಘಟಕ, ಹಣ್ಣು ಮಾಗಿಸುವ ಘಟಕ, ಗ್ರೇಡಿಂಗ್ ಯುನಿಟ್ ಸ್ಥಾಪಿಸಬೇಕು. ಧಾರವಾಡದಲ್ಲಿ ಮಾವು ಮಂಡಳಿ ಸ್ಥಾಪಿಸಬೇಕು. ಧಾರವಾಡದಿಂದ ಕಿಸಾನ್ ರೈಲ್ವೆ ಸೌಲಭ್ಯ ಕಲ್ಪಿಸಬೇಕು. ಇದರಿಂದ ದೆಹಲಿಯ ಆಜಾದ್ಪುರ ಮಾರ್ಕೆಟ್, ಮತ್ತಿತರ ಉತ್ತರ ಭಾರತದ ಮಾರುಕಟ್ಟೆಗೆ ಮಾವು ಕಳುಹಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಬೆಳೆಗಾರರು.
80ಕ್ಕೂ ತಳಿಯ ಮಾವು: ಆಪೂಸ್, ಕಲಮಿ, ಸಣ್ಣ ಎಲಿ, ಮಸರಾದ್, ಕರೆ ಇಷಾಡಿ, ಅಪ್ಪೆಮಿಡಿ, ತೋತಾಪುರಿ, ಬಾಗೇನಪಲ್ಲಿ, ಬಾದಾಮಿ ಆಪೂಸ್, ಕೇಸರ್, ರಸಪುರಿ ಕಲಮಿ, ಐಶ್ವರ್ಯ, ಮಲಗೋವ, ನೀಲಂ, ದಶಹರಿ, ಖಾದರ, ಮುಂಡಪ್ಪ, ಬೆನೆಟ್ ಕರಿಪಾಡಿ, ಶುಗರ್ ಬೇಬಿ, ರತ್ನಾ, ಆಪಲ್ ಅಲ್ಲದೆ ಇಸ್ರೇಲ್, ಜಪಾನ್ ಸೇರಿ 80ಕ್ಕೂ ಅಧಿಕ ತಳಿಯ ಮಾವು ಬೆಳೆದಿದ್ದಾರೆ.
40 ಎಕರೆ ಮಾವಿನ ತೋಟದಲ್ಲಿನ ಮಾವಿನಿಂದ ಈ ವರ್ಷ ಎಲ್ಲ ಖರ್ಚು ಕಳೆದು ಅಂದಾಜು 16 ಲಕ್ಷ ರೂ. ಆದಾಯ ಸಿಗುವ ನಿರೀಕ್ಷೆ ಇದೆ. ಹವಾಮಾನ ವೈಪರೀತ್ಯವಾದರೆ ಮಾತ್ರ ನಮಗೆ ಹಾನಿ ಆಗುತ್ತದೆ. ಇಲ್ಲದಿದ್ದರೆ ಒಳ್ಳೆಯ ಲಾಭ ಸಿಗುತ್ತದೆ.
ವಿಆರ್ಎ ಲ್ ಟ್ರಾನ್ಸ್ಪೋರ್ಟ್ ಮೂಲಕ ಬೆಂಗಳೂರು, ಮುಂಬೈ ಮತ್ತಿತರ ನಗರಗಳಿಗೆ ಹಣ್ಣುಗಳನ್ನು ಕಳುಹಿಸುತ್ತೇನೆ. ಇದರಿಂದ ನನಗೆ ತುಂಬಾ ಅನುಕೂಲವಾಗಿದೆ.
| ಪ್ರಮೋದ ತುಕಾರಾಮ ಗಾಂವಕರ
ಮಾವು ಬೆಳೆಗಾರ ಕಲಕೇರಿಎಲ್ಲ ರೈತರು ಇದೇ ರೀತಿ ನೈಸರ್ಗಿಕ ಮತ್ತು ವೈಜ್ಞಾನಿಕವಾಗಿ ಮಾವಿನ ಹಣ್ಣುಗಳನ್ನು ಮಾಗಿಸಬೇಕು. ಬಳಿಕ ನೇರವಾಗಿ ತಾವೇ ಗ್ರಾಹಕರಿಗೆ ಮಾರಾಟ ಮಾಡ ಬೇಕು. ಇದರಿಂದ ಬೆಳೆಗಾರರು ಹೆಚ್ಚಿನ ಆದಾಯ ಗಳಿಸಬಹುದು.
| ಇಮ್ತಿಯಾಜ್ ಚಂಗಾಪುರಿ, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ, ಧಾರವಾಡ