ಕಾಂಡಂ ಕರ್ಮ’ಕಾಂಡಂ!’

| ಕರಿಯಪ್ಪ ಅರಳಿಕಟ್ಟಿ

ಹುಬ್ಬಳ್ಳಿ: ಹುಬ್ಬಳ್ಳಿ ವೇಶ್ಯಾವಾಟಿಕೆ ದಂಧೆಯ ಇನ್ನೊಂದು ಕರಾಳಮುಖ ಇದೀಗ ಬಯಲಾಗಿದೆ. ಅಸಹ್ಯ ಹುಟ್ಟಿಸುವಂಥ ಈ ದುಷ್ಕೃತ್ಯ ಬೇರೆಲ್ಲಾದರೂ ನಡೆಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಬಳಸಿದ ಕಾಂಡಂಗಳನ್ನು ತೊಳೆದು ಮತ್ತೆ ಬಳಕೆಗೆ ನೀಡುವ ಜಾಲವೊಂದು ಹುಬ್ಬಳ್ಳಿಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೊಲೀಸ್ ಹಾಗೂ ಟಂಟಂ ವಾಹನ ಚಾಲಕನ ಸಂಭಾಷಣೆ ಕಾಂಡಂ ಮರುಬಳಕೆಯ ಕರಾಳ ಮುಖ ಬಯಲು ಮಾಡಿದೆ.

ಹುಬ್ಬಳ್ಳಿ ಜನತಾ ಬಜಾರ್ ಬಳಿ ಪೊಲೀಸರೊಬ್ಬರು ಟಂಟಂ ವಾಹನ ನಿಲ್ಲಿಸಿ ಗಾಡಿಯಲ್ಲೇನಿದೆ ಎಂದಾಗ, ಚಾಲಕನು ಗಾಬರಿಯಿಂದ ಕಸದ ಚೀಲ ಎಂದು ತೊದಲುತ್ತ ಹೇಳುತ್ತಾನೆ. ಸಂಶಯಗೊಂಡ ಪೊಲೀಸ್ ಗದರಿಸಿ 2 ಬಾರಿಸಿದಾಗ ‘ವೇಸ್ಟ್ ಕಾಂಡಂ ಇದೆ ಸರ್’ ಎಂದಿದ್ದಾನೆ. ಇದನ್ನು ಎಲ್ಲಿಗೆ ಒಯ್ಯುತ್ತೀಯಾ ಎಂದು ಕೇಳಿದಾಗ ‘ತೊಳೆದು ವಾಪಸ್ ಕೊಡ್ತೇವೆ ಸರ್’ ಎಂದು ದಂಧೆಯ ಕರಾಳತೆ ಬಿಚ್ಚಿಟ್ಟಿದ್ದಾನೆ.

ವಿಪರ್ಯಾಸವೆಂದರೆ ಪೊಲೀಸರು ಕೂಡಲೇ ಆತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳುವ ಬದಲು 50 ಸಾವಿರ ರೂ. ಕೊಡುವಂತೆ ಬೇಡಿಕೆ ಇಡುತ್ತಾರೆ. ಆಗ ಚಾಲಕ ಸಂಘಟನೆಯೊಂದರ ಮುಖಂಡನಿಗೆ ಕರೆ ಮಾಡಿ, ವಾಹನ ಬಿಡಿಸಿಕೊಡುವಂತೆ ಹೇಳುತ್ತಾನೆ. ಸಂಘಟನೆ ಮುಖಂಡ ಪೊಲೀಸರೊಂದಿಗೆ ಫೋನ್​ನಲ್ಲಿ ಮಾತನಾಡಲು ಮುಂದಾದಾಗ, ‘ಈತ ಮಾಡಿದ ಕೆಲಸಕ್ಕೆ ನೀವೆಲ್ಲ ಒಳಗೆ ಹೋಗುತ್ತೀರಿ ನೋಡಿ’ ಎಂದು ಹೇಳಿದ ಕೂಡಲೇ ಕರೆ ಕಟ್ ಮಾಡುತ್ತಾನೆ.

ಫೋನ್ ಸಂಭಾಷಣೆ ರೆಕಾರ್ಡ್ ಆಗಿದ್ದು, ಹೇಗೋ ವೈರಲ್ ಆಗಿದೆ. ಆದರೆ, ಇದಕ್ಕೆ ತೇಪೆ ಹಚ್ಚಲು ಮುಂದಾಗಿರುವ ದಂಧೆಕೋರರು ‘ಇದು ತಮಾಷೆಗಾಗಿ ಎಂದು ನಂಬಿಸಲು ಹುಬ್ಬಳ್ಳಿ ಕಾ ಬಕರಾ’ ಎನ್ನುವ ಮತ್ತೊಂದು ಸಂಭಾಷಣೆಯನ್ನು ಹದಿನೈದು ದಿನಗಳ ನಂತರ ಹರಿಬಿಟ್ಟಿದ್ದಾರೆ. ಇದೆಲ್ಲ ಒಂದು ತಿಂಗಳ ಹಿಂದೆಯೇ ನಡೆದು ಹೋಗಿದೆ. ಈವರೆಗೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹುಬ್ಬಳ್ಳಿಯಲ್ಲಿ ಕಾಂಡಂ ಮರುಬಳಕೆ ಜಾಲವಿದೆ ಎಂಬುದನ್ನು ಬಹುತೇಕರು ಖಚಿತಪಡಿಸುತ್ತಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಹಲವು ದಶಕಗಳಿಂದಲೂ ಬೇರೂರಿದೆ. ಅನೇಕ ಬಾರಿ ಪೊಲೀಸರು ದಾಳಿ ಮಾಡಿ, ಲಾಡ್ಜ್​ಗಳ ಪರವಾನಗಿ ರದ್ದುಪಡಿಸಿದ್ದೂ ಇದೆ. ಲಾಡ್ಜ್​ನವರು ನ್ಯಾಯಾಲಯದ ಮೊರೆ ಹೋಗಿ ಪುನಃ ಪರವಾನಗಿ ಪಡೆದು ದಂಧೆ ಆರಂಭಿಸುತ್ತಾರೆ. ಹೀಗಾಗಿ, ವೇಶ್ಯಾವಾಟಿಕೆಗೆ ಯಾವತ್ತೂ ಬ್ರೇಕ್ ಬಿದ್ದಿಲ್ಲ. ಆದರೀಗ ಕಾಂಡಂ ಕೂಡ ಮರುಬಳಕೆ ಮಾಡುವ ಹೇಯ ಕೃತ್ಯಕ್ಕೆ ದಂಧೆಕೋರರು ಕೈ ಹಾಕಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕವನ್ನು ಸೃಷ್ಟಿ ಮಾಡಿದೆ.

20 ರೂ. ಉಳಿಸಲು ದುಷ್ಕೃತ್ಯ?

ಒಂದು ಸಾಮಾನ್ಯ ಕಾಂಡಂ ಬೆಲೆ 20 ರೂ. ಇದೆ. ಬಹುತೇಕ ವೇಶ್ಯಾವಾಟಿಕೆಯವರು 50 ರೂ. ಒಳಗಿನ ಕಾಂಡಂ ಬಳಸುತ್ತಾರೆ. ಇದನ್ನೂ ಖರೀದಿಸಲು ಹಿಂಜರಿಯುವ ದಂಧೆಕೋರರು ಕಾಂಡಂ ಮರುಬಳಕೆ ಮಾಡುತ್ತಾರೆ. ಒಂದು ಬಾರಿ ಖರೀದಿಸಿ ತಂದ ಕಾಂಡಂ ಹರಿಯುವವರೆಗೂ ಬಳಸಬಹುದಾದ್ದರಿಂದ ದಂಧೆಕೋರರು ಎಷ್ಟು ಬಾರಿ ಮರುಬಳಕೆ ಮಾಡುತ್ತಾರೆ ಎನ್ನುವುದು ಕಷ್ಟ.

ಎರಡು ರೂಪಾಯಿಗೆ ಸಿಕ್ಕರೂ ಹೀಗೇಕೆ?

ಮಾರುಕಟ್ಟೆಯಲ್ಲಿ 2ರಿಂದ 2 ಸಾವಿರ ರೂ.ವರೆಗಿನ ಬೆಲೆಯ ಕಾಂಡಂ ಗಳು ಸಿಗುತ್ತದೆ. ಅಲ್ಲದೆ, ಸರ್ಕಾರದಿಂದ ಬಸ್ ನಿಲ್ದಾಣ, ಆಸ್ಪತ್ರೆಗಳಲ್ಲಿ ಉಚಿತವಾಗಿ ಪಡೆಯುವ ಸೌಲಭ್ಯವಿದೆ. ಆದರೂ ದಂಧೆಕೋರರು ಮರು ಬಳಕೆ ಏಕೆ ಮಾಡುತ್ತಿದ್ದಾರೆ ಎಂಬುದು ಯಕ್ಷ ಪ್ರಶ್ನೆ. ಇದಕ್ಕೆ ಕಾರಣ ಹುಡುಕಿದಾಗ, ದುಬಾರಿ ಕಾಂಡಂ ಕೊಳ್ಳುವುದು ದಂಧೆಕೋರರಿಗೆ ಇಷ್ಟ ಇಲ್ಲದಿರುವುದು. ನಿರಂತರವಾಗಿ ಅಂಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗದಿರುವುದು. ಒಂದೇ ಮಳಿಗೆಯಲ್ಲಿ ನಿರಂತರ ಖರೀದಿಸಿ ಗುರುತಿಸಿಕೊಂಡರೆ ಅಪರಾಧ ಪ್ರಕರಣ ನಡೆದಾಗ ಪೊಲೀಸರ ಬಲೆಗೆ ಬೀಳುವ ಸಾಧ್ಯತೆ. ಅಲ್ಲದೆ, ವೇಶ್ಯಾವಾಟಿಕೆ ಕುರಿತು ಅಂಗಡಿಯವರ ಮೂಲಕ ಪೊಲೀಸರಿಗೆ ಮಾಹಿತಿ ಹೋಗಬಹುದು ಎಂಬ ಭಯ. ಹೀಗೆ ಹಲವಾರು ಆಯಾಮಗಳಲ್ಲಿ ಯೋಚಿಸುವ ದಂಧೆಕೋರರು ಹೊಸದಾಗಿ ಖರೀದಿಸುವ ಬದಲು ಕಡಿಮೆ ಪ್ರಮಾಣದಲ್ಲಿ ತಂದು ಅವುಗಳನ್ನೇ ಮರು ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಹೀನ ದುಷ್ಕೃತ್ಯ ಏಕೆ, ಹೇಗೆ?

ಹುಬ್ಬಳ್ಳಿಯ ಜನತಾ ಬಜಾರ್, ದುರ್ಗದಬೈಲ್, ಕೊಯಿನ್ ರಸ್ತೆ ಸೇರಿ ವಿವಿಧೆಡೆ ನಿರ್ದಿಷ್ಟ ಲಾಡ್ಜ್​ಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ಲಾಡ್ಜ್​ನವರು ಬಿಹಾರ್, ಅಸ್ಸಾಂ, ಕೋಲ್ಕತ ಸೇರಿ ಬೇರೆ ಬೇರೆ ಕಡೆಯ 8ರಿಂದ 10 ಯುವತಿಯರನ್ನು ಕರೆತಂದು ದಂಧೆಗೆ ಬಳಸಿಕೊಳ್ಳುತ್ತಾರೆ. ಈ ಯುವತಿಯರು ಗುಣಮಟ್ಟದ ಕಾಂಡಂ ಕೇಳುತ್ತಾರಂತೆ. ಇಲ್ಲವಾದರೆ ದಂಧೆಗೆ ಒಪ್ಪುವುದಿಲ್ಲ. ಆದರೆ, ದಂಧೆಕೋರರಿಗೆ ನಿತ್ಯವೂ ದುಬಾರಿ ಬೆಲೆಯ ಕಾಂಡಂ ಖರೀದಿಸಿ ನೀಡುವುದು ಕಷ್ಟ ಹಾಗೂ ನಷ್ಟ. ಗಿರಾಕಿಗಳು ಸ್ವತಃ ಕಾಂಡಂ ತಂದುಕೊಳ್ಳಲು ಲಾಡ್ಜ್ ನವರು ಅವಕಾಶ ನೀಡುವುದಿಲ್ಲ. ತಾವೇ ನೀಡುವ ಕಾಂಡಂ ಬಳಸಬೇಕು ಎಂಬ ನಿಯಮ ಕಡ್ಡಾಯವಂತೆ. ಆದ್ದರಿಂದ ಒಂದು ಬಾರಿ ಕೊಂಡು ತಂದ ದುಬಾರಿ ಕಾಂಡಂ ಗಳನ್ನು ಬಳಕೆ ನಂತರ ಸಂಗ್ರಹಿಸಿಡುತ್ತಾರೆ. ಅದನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಿ ಪುನಃ ಪ್ಯಾಕೇಟ್​ಗಳಲ್ಲಿ ಹಾಕಿ ತಂದು ಕೊಡುವ ಹೀನ ಕೆಲಸವನ್ನೂ ಕೆಲವರು ಮಾಡುತ್ತಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ವೇಶ್ಯಾವಾಟಿಕೆ ಲಾಡ್ಜ್​ಗಳಿಗೆ ಹೋಗುವುದೇ ಕಾನೂನುಬಾಹಿರ. ಅಂಥದ್ದರಲ್ಲಿ ಅಲ್ಲಿ ಕೊಡುವ ಕಾಂಡಂ ಗಳ ಬಗ್ಗೆ ಎಚ್ಚರ ವಹಿಸದಿದ್ದರೆ ಎಚ್​ಐವಿ, ಹೆಪಟೈಟಿಸ್ ‘ಬಿ’ ಮುಂತಾದ ಮಾರಕ ರೋಗಕ್ಕೆ ತುತ್ತಾಗಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಂಭಾಷಣೆಯ ಅಸಲಿಯತ್ತಿನ ಕುರಿತು ತನಿಖೆ ನಡೆದರೆ, ಹೀನ ವೃತ್ತಿಯ ಇನ್ನೊಂದು ಮುಖ ತಿಳಿಯಬಹುದು.

ಕಾಂಡಂ ಮರು ಬಳಕೆ ತಪ್ಪು. ಇದರಿಂದ ಎಚ್​ಐವಿ ಸೋಂಕು ತಗಲುವ ಸಾಧ್ಯತೆ ಕಡಿಮೆ ಇದ್ದರೂ ಇದಕ್ಕಿಂತ ಮಾರಕ ಕಾಯಿಲೆ ಹೆಪಟೈಟಿಸ್-ಬಿ ಹರಡುವ ಸಾಧ್ಯತೆ ಅಧಿಕ. ಸರ್ಕಾರ ಕಾಂಡಂ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಹೂಂಡಿಂಗ್ ಮಷಿನ್ ಮೂಲಕ ದೊರೆಯುವಂತೆ ಮಾಡಿದರೆ ಅನುಕೂಲ.

| ಡಾ. ಭರತರಾಜ್ ಯಾಳಗಿ, ಎಚ್​ಐವಿ ರೋಗ ತಜ್ಞ, ಹುಬ್ಬಳ್ಳಿ

ಔಷಧ ಮಳಿಗೆ ಅಭಿಮತ

ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿರುವವರಿಗೆ ದಿನಕ್ಕೆ ನೂರಾರು ಕಾಂಡಂಗಳು ಬೇಕಾಗಬಹುದು. ಆದರೆ, ಯಾವ ಲಾಡ್ಜ್ ನವರೂ ಸುತ್ತಲಿನ ಔಷಧ ಮಳಿಗೆಯಲ್ಲಿ ಕಾಂಡಂ ಖರೀದಿಸುವುದಿಲ್ಲ. ಹೀಗಾಗಿ ಅವರು ಎಲ್ಲಿಂದ ತರುತ್ತಾರೆ, ಅಷ್ಟು ಪ್ರಮಾಣದಲ್ಲಿ ಯಾರು ಪೂರೈಸುತ್ತಾರೆ ಎಂಬ ಮಾಹಿತಿಯೂ ನಮಗಿಲ್ಲ ಎಂದು ವೇಶ್ಯಾವಾಟಿಕೆ ನಡೆಸುವ ಲಾಡ್ಜ್​ಗಳ ಅಕ್ಕಪಕ್ಕದ ಔಷಧ ಮಳಿಗೆ ವ್ಯಾಪಾರಿಗಳು ‘ವಿಜಯವಾಣಿ’ಗೆ ತಿಳಿಸಿದರು.