ಹುಬ್ಬಳ್ಳಿ: ಕಳೆದ 4-5 ದಿನಗಳಿಂದ ಸತತವಾಗಿ ಸುರಿದ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಅ. 21ರಂದು ಧಾರವಾಡ ಡಿಸಿ ಕಚೇರಿ ಎದುರು ಬೆಳಗ್ಗೆ 11ಕ್ಕೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಜಿಲ್ಲಾಧ್ಯಕ್ಷ ಮಂಜುನಾಥ ಗೌರಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸತತ ಮಳೆಯಿಂದಾಗಿ ಮುಂಗಾರು ಬೆಳೆ ಸಂಪೂರ್ಣ ಹಾಳಾಗಿದೆ. ಗೋವಿನ ಜೋಳ, ಹೆಸರು, ಶೇಂಗಾ, ಉದ್ದು, ಸೋಯಾಬೀನ್, ಇತ್ಯಾದಿ ಬೆಳೆಗಳು ಕಟಾವು ಮಾಡಲಾಗದೇ ನೆಲಕ್ಕೆ ಬಿದ್ದು ಮೊಳಕೆ ಬಂದಿವೆ. ತೋಟಗಾರಿಕಾ ಬೆಳೆಗಳು ಸಹ ಹಾಳಾಗಿವೆ. ಹೀಗಾಗಿ, ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಬೇಕು. ಕಳೆದ 2-3 ವರ್ಷಗಳಿಂದ ಬೆಳೆ ವಿಮೆ ಕೂಡ ಸಮರ್ಪಕವಾಗಿ ಎಲ್ಲರಿಗೂ ತಲುಪುತ್ತಿಲ್ಲ. ಬೆಳೆ ವಿಮೆ ಸರಿಯಾಗಿ ಪಾವತಿಸಬೇಕು. ‘ಬೆಣ್ಣಿ ಹಳ್ಳದ’ ವಿಪರೀತ ಹರಿವಿನಿಂದಾಗಿ ಹೊಲಗಳು ಜಲಾವೃತಗೊಂಡು ಬೆಳೆಗಳು ಹಾಳಾಗಿವೆ. ಈ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಲಾಗುವುದು ಎಂದರು. ಬಿ. ಗುರುನಾಥಗೌಡ, ರಮೇಶ ಕೊರವಿ, ವಿವೇಕ ಮೋರೆ, ಗುರುನಾಥ ಬೀರನವರ, ಪುಟ್ಟಸ್ವಾಮಿ, ಮಾಧವ ಹೆಗಡೆ, ಇತರರಿದ್ದರು.