ಹುಬ್ಬಳ್ಳಿ : ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿ ಎಲ್ಲ ಪ್ರಕ್ರಿಯೆಗಳು ಸಕಾರಾತ್ಮಕವಾಗಿ ಮುಂದುವರಿದಿದ್ದು, ಮುಂದಿನ ಎರಡ್ಮೂರು ತಿಂಗಳಲ್ಲಿ ಸ್ಪಷ್ಟ ರೂಪ ಪಡೆದುಕೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಅರಣ್ಯ ಇಲಾಖೆಯಿಂದ ಅನುಮೋದನೆ ಲಭಿಸಿದೆ. ವನ್ಯ ಜೀವಿ ಮಂಡಳಿ ಅನುಮತಿ ಒಂದು ಹಂತಕ್ಕೆ ಬಂದಿದೆ. ಮಾರ್ಗದ ಸರ್ವೆ ಕಾರ್ಯವೂ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಯೋಜನೆ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲ್ಲಿ ಪರ-ವಿರೋಧ ಚರ್ಚೆಗಳು ನಡೆದಿದ್ದು, ಸಂಸದ ಕಾಗೇರಿಯವರು ಅಲ್ಲಿ ಸಂಘಟನೆಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. 8-10 ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ, ಯೋಜನೆ ವಿರೋಧಿಸುವವರ ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಧಾರವಾಡ -ಬೆಳಗಾವಿ (ವಾಯ್ ಕಿತ್ತೂರ) ರೈಲು ಮಾರ್ಗ ಯೋಜನೆಗೆ ಅಡ್ಡಿಯಾಗಿದ್ದ ಭೂ ಸ್ವಾಧೀನ ಅಡಚಣೆಯನ್ನು ರಾಜ್ಯದ ಸಚಿವ ಎಂ.ಬಿ. ಪಾಟೀಲ ನಿವಾರಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಕ್ರಿಯೆ ಸರಾಗವಾಗಿದೆ. ಧಾರವಾಡ ಜಿಲ್ಲೆಯಲ್ಲಿ 45 ಎಕರೆ ಭೂ ಸ್ವಾಧೀನ ಸಮಸ್ಯೆ ಇದ್ದು, ಬಗೆಹರಿಯುವ ಹಂತದಲ್ಲಿದೆ. ನನ್ನ ಅವಧಿಯಲ್ಲಿಯೇ ಯೋಜನೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಿಂದ 150 ಕಿಮೀ ದೂರದಲ್ಲಿ ನಿರ್ವಿುಸುವ ಪ್ರಸ್ತಾವನೆ ಇದೆ. ಆದರೆ, ಇನ್ನೂ ಸ್ಥಳ ಅಂತಿಮಗೊಂಡಿಲ್ಲ. ಅದರಿಂದ ಹುಬ್ಬಳ್ಳಿ ಸೇರಿ ಉತ್ತರ ಕರ್ನಾಟಕದ ಭಾಗದವರಿಗೂ ಅನುಕೂಲವಾಗಲಿದೆ ಎಂದರು.
ಕಳೆದ 11 ವರ್ಷಗಳಲ್ಲಿ ರಾಜ್ಯದಲ್ಲಿ 5ಲಕ್ಷ ಕೋಟಿ ರೂ. ಬಂಡವಾಳ ಹೂಡಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈಲ್ವೆ ಯೋಜನೆಗಳಿಗೆ 41 ಸಾವಿರ ಕೋಟಿ ರೂ.ವೆಚ್ಚ ಮಾಡಲಾಗಿದೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ವಂದೇ ಭಾರತ್ ರೈಲುಗಳ ಸಂಚಾರ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಸಂಜಯ ಕಪಟಕರ, ಡಾ. ಕ್ರಾಂತಿ ಕಿರಣ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.