ಹುಬ್ಬಳ್ಳಿ: ರೈತರ ಭೂಮಿಯಲ್ಲಿ ವಕ್ಪ್ ಹೆಸರು ಸೇರಿರುವುದು ತಪ್ಪು, ಇದನ್ನು ಕೂಡಲೇ ರದ್ದುಪಡಿಸಬೇಕೆಂಬುದು ಸೇರಿದಂತೆ ಒಂಬತ್ತು ನಿರ್ಣಯಗಳನ್ನು ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಮ್ಮೇಳನ ಕೈಗೊಂಡಿದೆ.
ನಗರದ ಅಕ್ಕನ ಬಳಗದಲ್ಲಿ ಭಾನುವಾರ ಸಮಗ್ರ-ಸಮೃದ್ಧ-ಸೌಹಾರ್ದ ಕರ್ನಾಟಕಕ್ಕಾಗಿ ಧಾರವಾಡ, ಹಾವೇರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಹಮ್ಮಿಕೊಂಡಿದ್ದ ಸಿಪಿಐ (ಎಂ) ನ 13ನೇ ಜಿಲ್ಲಾ ಸಮ್ಮೇಳನದಲ್ಲಿ ಶಿಗ್ಗಾಂವಿ ಉಪಚುನಾವಣೆಯಲ್ಲಿ ಇಂಡಿಯಾ ಒಕ್ಕೂಟಕ್ಕೆ ಬೆಂಬಲಿಸಲು ನಿರ್ಧರಿಸಲಾಯಿತು.
ಹಾವೇರಿ-ಧಾರವಾಡ ಜಿಲ್ಲೆಗಳ ಸೌಹಾರ್ದ ಉಳಿವು, ಕೈಗಾರಿಕೆಗಳ ಸ್ಥಳಾಂತರಕ್ಕೆ ವಿರೋಧ, ಕೃಷಿಯಾಧಾರಿತ ಕೈಗಾರಿಕೆಗಳನ್ನು ಆರಂಭಿಸುವುದು, ಮಹಾದಾಯಿ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಮತ್ತಿತರ ನಿರ್ಣಯ ಮಂಡಿಸಲಾಯಿತು. ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯ ಕೆ. ಮಹಾಂತೇಶ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದೇಶ ಒಂದು ಚುನಾವಣೆ ಜಾರಿಗೆ ತರಲು ತುದಿಗಾಲ ಮೇಲೆ ನಿಂತಿದ್ದಾರೆ. ಇದಕ್ಕಿಂತ ಮೊದಲು ಕಾರ್ವಿುಕರ ವೇತನ ಅಸಮಾನತೆ ಹೋಗಲಾಡಿಸಿ ಕೇಂದ್ರ ಸರ್ಕಾರ ಸಮಾನ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಅಧ್ಯಕ್ಷತೆ ವಹಿಸಿದ್ದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಸರ್ಕಾರಗಳ ಜನ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಶೋಷಿತ ಜನರನ್ನು ಸಂಘಟಿಸಿ ಹೋರಾಟ ರೂಪಿಸಲು ಎಲ್ಲರೂ ಪಣತೊಡಬೇಕಿದೆ ಎಂದರು.
ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ. ನಾಗರಾಜ ಅವರು ಸಮ್ಮೇಳನ ಉದ್ಘಾಟಿಸಿದರು. ಹಿರಿಯ ನಾಯಕ ರುದ್ರಪ್ಪ ಜಾಬಿನ ಧ್ವಜಾರೋಹಣ ನೆರವೇರಿಸಿದರು. ಹುತಾತ್ಮ ಸ್ಥಂಭಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಿಪಿಐ ಜಿಲ್ಲಾ ಮುಖಂಡ ಎ.ಎಸ್. ಪೀರಜಾದೆ, ಬಿ.ಎನ್. ಪೂಜಾರಿ ಮಾತನಾಡಿದರು. ಬಿ.ಎಸ್. ಸೊಪ್ಪಿನ, ಬಿ.ಐ. ಈಳಿಗೇರ ಇದ್ದರು. ಬಸವರಾಜ ಪೂಜಾರ, ಆನಂದ ಅರ್ಚಕ, ಗುರುಸಿದ್ದಪ್ಪ ಅಂಬಿಗೇರ ನಿರ್ವಹಿಸಿದರು.