ಹುಣಸಗಿ: ಬೆಂಗಳೂರಿನಲ್ಲಿ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ವೇಳೆ ಸಿಕ್ಕ ೪೨ ಕೋಟಿ ರೂ. ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಚ್.ಸಿ.ಪಾಟೀಲ್ ಆಗ್ರಹಿಸಿದರು.
ತಹಸಿಲ್ ಕಚೇರಿ ಎದುರು ಬಿಜೆಪಿ ತಾಲೂಕು ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಏಳು ತಾಸು ವಿದ್ಯುತ್ ಪೂರೈಕೆ ಬದಲಾಗಿ ಲೋಡ್ ಶೆಡ್ಡಿಂಗ್ ನೆಪ ಹೇಳುವ ಮೂಲಕ ಕೇವಲ ೫ ತಾಸು ವಿದ್ಯುತ್ ಪೂರೈಸುತ್ತಿದೆ. ಹೀಗಾಗಿ ರೈತರು ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ೪೨ ಕೋಟಿ ರೂ. ವಶಪಡಿಸಿಕೊಂಡಿದ್ದು, ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ ಎಂದು ದೂರಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಮೇಲಪ್ಪ ಗುಳಗಿ ಮಾತನಾಡಿ, ಈಗಾಗಲೇ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದು, ಗುತ್ತಿಗೆದಾರರು ಹಾಗೂ ರೀಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಇತರ ಮೂಲಗಳಿಂದ ಹಣ ಸಂಗ್ರಹಿಸಿ ಪೂರೈಕೆಗೆ ಮುಂದಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ ಈ ಹಣ ಎಲ್ಲಿಂದ ಬಂತು, ಇದರ ಹಿಂದೆ ಯಾರು ಇದ್ದಾರೆ ಎಂದು ಜನರಿಗೆ ಗೊತ್ತಾಗಬೇಕು ಎಂದು ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಸಂಗಣ್ಣ ವೈಲಿ, ವೀರೇಶ ಸಾಹುಕಾರ ಚಿಂಚೋಳಿ, ಎಂ.ಎಸ್.ಚಂದಾ, ವಿರುಪಾಕ್ಷಯ್ಯ ಸ್ಥಾವರಮಠ, ಶಿವನಗೌಡ ಪಾಟೀಲ್, ರಾಜಶೇಖರ ದೇಸಾಯಿ, ಭೀಮನಗೌಡ ಪೊಲೀಸ್ ಪಾಟೀಲ್, ಪ್ರಭುಗೌಡ ಪಾಟೀಲ್, ಸುರೇಶ ದೊರೆ, ಗೌಡಪ್ಪ ಬಾಲಗೌಡ್ರು, ಹಣಮಂತ್ರಾಯಗೌಡ ಕುಪ್ಪಿ, ಲೋಹಿತ ದೊಡ್ಡಮನಿ, ಭೀಮರಾಯ ದೊಡ್ಡಮನಿ, ನಂದಪ್ಪ ಪೀರಾಪುರ, ಕೃಷ್ಣಾ ರೆಡ್ಡಿ ಮುದನೂರ, ಸಂಗಪ್ಪ ಹೊಸಮನಿ, ಸಂತೋಷ ದೇವರಮನಿ ಇತರರಿದ್ದರು.
ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಲಾಯಿತು.