More

    ಯೋಗ್ಯತೆಯಿಂದಲೇ ಸುಯೋಗ

    ಸ್ವಾತಿ ಮಳೆಹನಿ ಬೀಳ್ವ, ಶುಕ್ತಿ ಬಾಯ್ದೆರೆದೇಳ್ವ |

    ಕೌತುಕದ ಸಮಯಯೋಗದೆ ಮೌಕ್ತಿಕ ಫಲ ||

    ಪ್ರೀತಿ ಸುಖ ಸತ್ಯದರ್ಶನ ಶಾಂತಿಗಳ ಹುಟ್ಟುಮ್ |

    ಈ ತೆರದ ಯೋಗದಿನೆ – ಮಂಕುತಿಮ್ಮ ||

    ‘ಸ್ವಾತಿನಕ್ಷತ್ರದಲ್ಲಿ ಮಳೆಹನಿಗಳು ಸುರಿಯುವ ಹೊತ್ತು ಮತ್ತು ಮುತ್ತಿನ ಚಿಪ್ಪು (ಶುಕ್ತಿ) ಬಾಯ್ತೆರೆದಿರುವ ಹೊತ್ತು ಒಂದೇ ಸಮಯಕ್ಕೆ ಸಂಭವಿಸಿದರಷ್ಟೇ ಹೊಳೆವ ಮುತ್ತು ರೂಪುಗೊಳ್ಳುತ್ತದೆ. ಪ್ರೀತಿ, ಸುಖ, ಸತ್ಯದರ್ಶನ, ಶಾಂತಿ ಮುಂತಾದ ಭಾವಾನುಭವವೂ ಇದೇ ರೀತಿಯಾದ ಯೋಗದಿಂದಲೇ ಸಂಭವಿಸುತ್ತದೆ’ ಎನ್ನುತ್ತದೆ ಈ ಕಗ್ಗ.

    ಯೋಗ್ಯತೆಯಿಂದಲೇ ಸುಯೋಗಮನುಷ್ಯನಲ್ಲಿ ಅನೇಕ ಆಸೆಗಳು ಚಿಮ್ಮುತ್ತಿರುತ್ತದೆ. ಕ್ಷಣಿಕ ಆಕರ್ಷಣೆಗಳಿಗೆ ಒಳಗಾಗುತ್ತಾನೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಹವಣಿಸುತ್ತಾನೆ. ಸಾಧನೆಯ ಹಾದಿಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾನೆ. ಆದರೂ ಆಸೆಗಳು ಈಡೇರುತ್ತವೆ ಎನ್ನುವಂತಿಲ್ಲ. ಮನುಷ್ಯಪ್ರಯತ್ನಕ್ಕೆ ಭಗವಂತನ ಬೆಂಬಲ ಇದ್ದರಷ್ಟೇ ಯೋಚಿಸಿದ, ಕಾರ್ಯ ಸಾಂಗವಾಗಿ ನೆರವೇರಲು ಸಾಧ್ಯ. ನರಚಿತ್ತ ಮತ್ತು ದೈವಚಿತ್ತಗಳು ಹೀಗೆ ಏಕೀಭವಿಸುವುದು ಸುಲಭವಲ್ಲ.

    ಸ್ವಾತಿನಕ್ಷತ್ರದಲ್ಲಿ ಸುರಿಯುವ ಔಷಧೀಯ ಗುಣವುಳ್ಳ ಮಳೆ ಪ್ರಕೃತಿಯ ಅದ್ಭುತಗಳಲ್ಲಿ ಒಂದು. ಇಂತಹ ಅಮೂಲ್ಯ ಮಳೆಹನಿಯು ಸುರಿಯುವಾಗ, ಕಡಲಿನಾಳದಲ್ಲಿರುವ ಮುತ್ತಿನ ಚಿಪ್ಪು ಮೇಲಕ್ಕೆದ್ದು ಬಾಯ್ದೆರೆಯುತ್ತದೆಯಂತೆ. ಆಗ ಅದರೊಳಗೆ ಬಿದ್ದ ಸ್ವಾತಿ ಮಳೆಹನಿಯು ಮುಂದೆ ಹೊಳೆವ ಮುತ್ತಾಗುತ್ತದೆ. ಹಾಗಾಗಿ ಸ್ವಾತಿ ಮಳೆಯ ಮುತ್ತು ನಿಸರ್ಗದೊಳಗಿರುವ ಕೌತುಕ. ಜತೆಗೆ ಮಾನವನ ಬದುಕಿಗೆ ದೊಡ್ಡ ಪಾಠ. ಮಳೆ ಹನಿಯುವ ಮತ್ತು ಚಿಪ್ಪು ಬಾಯ್ದೆರೆಯುವ ಕ್ರಿಯೆಗಳು ಏಕಕಾಲದಲ್ಲಿ ನಡೆಯುವುದರ ಜತೆಗೆ ಹನಿಯು ಚಿಪ್ಪಿನ ಬಸಿರನ್ನು ಸೇರಿದರಷ್ಟೇ ಈ ಅದ್ಭುತವನ್ನು ಕಾಣಬಲ್ಲೆವು. ಮನುಜನ ಬಾಳಿನಲ್ಲೂ ಇಂಥ ಯೋಗವು ಕೂಡಿಬಂದರಷ್ಟೇ ಧನ್ಯಕ್ಷಣ ಹೃದಯಕ್ಕಿಳಿಯಬಹುದು.

    ಮಾನವನು ಸಾಮಾನ್ಯವಾಗಿ ಆಸ್ತಿ-ಅಂತಸ್ತು, ಸುಖ-ಸೌಲಭ್ಯಗಳನ್ನು ಬಯಸುತ್ತಾನೆ. ಅದನ್ನು ಹೊಂದುವುದೇ ಜೀವನದ ದೊಡ್ಡ ಸಾಧನೆ ಎಂದೂ ಭಾವಿಸುತ್ತಾನೆ. ಆದರೆ ಇದಕ್ಕಿಂತ ಹೊರತಾಗಿ, ಎಲ್ಲರೊಳಗಿರುವ ಆತ್ಮನು ಸಾರ್ಥಕ ಕ್ಷಣಗಳಿಗಾಗಿ ಹಂಬಲಿಸುತ್ತಿರುತ್ತಾನೆ. ಆತ್ಮಸಂಸ್ಕಾರಕ್ಕೆ ಅನಿವಾರ್ಯವಾಗಿರುವ ಲೋಕಜೀವನದಲ್ಲಿ ಸೇರಿಕೊಂಡರೂ, ಉನ್ನತಿಗೇರುವ ಜೀವನ ಯತ್ನವು ನಡೆದೇ ಇರುತ್ತದೆ.

    ಹಾಗಾಗಿಯೇ ಜೀವಜೀವಗಳ ನಡುವಿನ ಬಾಂಧವ್ಯಕ್ಕೆ ಪ್ರೀತಿ ಆಧಾರವಾಗಿರಲೆಂದು ಮನುಷ್ಯ ಬಯಸುತ್ತಾನೆ. ನಿರೀಕ್ಷೆಗಳಿರದ ನಿಷ್ಕಲ್ಮಶ ಪ್ರೀತಿಯು ಸುಯೋಗದಿಂದಷ್ಟೇ ಲಭಿಸುತ್ತದೆ. ಕಷ್ಟನಷ್ಟಗಳೇ ಇಲ್ಲದ, ನೆನೆದದ್ದೆಲ್ಲ ನೆರವೇರುವ ಸುಖಕ್ಕಾಗಿ ಮನುಷ್ಯನ ಹುಡುಕಾಟ ಸಹಜ. ಇಂದ್ರಿಯಸುಖಗಳಿಗೆ ಹೊರತಾದ ಸಂತೃಪ್ತಭಾವ, ಜೀವವನ್ನು ತಣಿಸುವ ಸೌಖ್ಯವನ್ನು ಪಡೆಯಬೇಕಾದರೆ ಯೋಗ ಇರಬೇಕು. ಜಗನ್ನಿಯಾಮಕ ಶಕ್ತಿಯ ಸತ್ಯದರ್ಶನ ಪಡೆಯಲು ಜೀವನು ಸದಾ ತುಡಿಯುತ್ತಿರುತ್ತಾನೆ. ಪರಿಸರದಲ್ಲಿ ಮಿಳಿತವಾದ ಅನಂತಶಕ್ತಿಯ ಅರಿವಾಗಬೇಕಾದರೂ ಸಂಯೋಗ ಕೂಡಿಬರಬೇಕು. ಜೀವನದಲ್ಲಿ ಶಾಂತಿ-ನೆಮ್ಮದಿ ಇರಲೆಂದು ಎಲ್ಲರೂ ಬಯಸುತ್ತಾರೆ. ಅದಕ್ಕೆ ಅರ್ಹರಾಗದೆ ಪ್ರಶಾಂತ ಜೀವನ ಲಭಿಸದು.

    ಈ ಯೋಗ ಒದಗಬೇಕಾದರೆ ವ್ಯಕ್ತಿ ಯೋಗ್ಯನಾಗಬೇಕು. ಮನಸ್ಸನ್ನು ಪರಿಶೋಧಿಸುತ್ತ, ಸಂಯಮದಿಂದ ಸಾಧನೆಯಲ್ಲಿ ತೊಡಗಿಕೊಂಡಾಗ ಅಹಂಕಾರವು ಕಳಚಿಕೊಳ್ಳುತ್ತದೆ. ವಿಶಾಲ ಚಿಂತನೆ, ನಿರ್ವ್ಯಾಜ ಪ್ರೀತಿಯೊಂದಿಗೆ ಭಗವದನುಗ್ರಹದ ಅನುಭವ ಜೀವನನ್ನು ಉದ್ಧರಿಸುತ್ತದೆ. ಹೀಗೆ ನರಚಿತ್ತ ಮತ್ತು ದೈವಚಿತ್ತವು ಏಕವಾಗಬೇಕಾದರೆ ವ್ಯಕ್ತಿ ಯೋಗ್ಯನಾಗಬೇಕು. ಅದರಿಂದಲೇ ಸುಯೋಗ, ಧನ್ಯತೆಯ ಸಂಯೋಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts