More

    ಮಕರ ರಾಶಿಗೆ ಪ್ರವೇಶಿಸುತ್ತಿರುವ ಶನೈಶ್ಚರ

    ಧನುಸ್ಸು ರಾಶಿಯಲ್ಲಿ ಬೀಡುಬಿಟ್ಟಿದ್ದ ಶನೈಶ್ಚರಸ್ವಾಮಿ ತನ್ನ ಸ್ವಗೃಹ ಮಕರ ರಾಶಿಯನ್ನು ಇಂದು(ಜ.24) ಪ್ರವೇಶಿಸುತ್ತಿದ್ದಾನೆ. 2022ರ ಏಪ್ರಿಲ್ ಕೊನೆಯ ಭಾಗದಲ್ಲಿ ಮಕರದಿಂದ ಕುಂಭರಾಶಿಗೆ ಪ್ರಯಾಣ ಮಾಡುತ್ತಾನೆ. ಇವತ್ತಿನ ರಾಶಿ ಬದಲಾವಣೆಯ ಫಲವಾಗಿ ಮಕರ ರಾಶಿಗೆ ಬಂದಿರುವ ಶನೈಶ್ಚರನು ಕುಂಭ, ಮಿಥುನ ಹಾಗೂ ಕನ್ಯಾ ರಾಶಿಯವರಿಗೆ ಹೊಸದಾಗಿ ಶನಿಕಾಟ ನೀಡುವ ಗ್ರಹವಾಗಿ ಪರಿವರ್ತನೆಗೊಳ್ಳುತ್ತಾನೆ.

    ಕುಂಭ ರಾಶಿಯವರಿಗೆ ಸಾಡೇಸಾತಿ (7 1/2 ವರ್ಷಗಳ) ಕಾಟ ನೀಡುತ್ತಾನಾದರೆ, ಮಿಥುನ ರಾಶಿಯವರಿಗೆ 2 1/2 ವರ್ಷಗಳ ಅಷ್ಟಮ ಶನಿ ಕಾಟ ಪ್ರಾರಂಭಿಸುತ್ತಾನೆ. ಕನ್ಯಾರಾಶಿಯವರಿಗೆ 2 1/2 ವರ್ಷಗಳ ಪಂಚಮ ಶನಿ ಕಾಟ ನೀಡಲು ಸಜ್ಜಾಗುತ್ತಾನೆ. ಈ ಕಾರಣದಿಂದಾಗಿ ವೃಶ್ಚಿಕ ರಾಶಿಯವರ ಸಾಡೇಸಾತಿ ಶನಿ ಕಾಟವೂ, ವೃಷಭ ರಾಶಿಯವರ ಅಷ್ಟಮ ಶನಿಕಾಟವೂ, ಸಿಂಹ ರಾಶಿಯವರ ಪಂಚಮಶನಿ ಕಾಟವೂ ಬಿಡುಗಡೆಗೊಳ್ಳುತ್ತದೆ. ಧನುಸ್ಸು ರಾಶಿಯವರಿಗೆ ಸಾಡೇಸಾತಿ ಶನಿ ಕಾಟದ ಅವಧಿ ಕೊನೆಯ 2 1/2 ವರ್ಷ ಉಳಿದುಕೊಂಡರೆ ಮಕರ ರಾಶಿಯವರಿಗೆ ಮೊದಲ 2 1/2 ವರ್ಷಗಳು ಮುಗಿದು ಕೊನೆಯ 5 ವರ್ಷಗಳು ಉಳಿಯುತ್ತವೆ.

    ಶನಿಕಾಟ ಹಾಗೆಂದರೆ ಏನು?: ಜನರ ಬಾಯಲ್ಲಿ ಒಂದು ಶಬ್ದ ಅಥವಾ ಶಬ್ದ ಸಮೂಹ ಸುಲಭವಾಗಿ ನಿಲ್ಲುವುದಿಲ್ಲ. ನಿರಂತರವಾದ ಕಿರಿಕಿರಿ ಕೊಡುವವನಿಗೆ ನಕ್ಷತ್ರಿಕ ಅಂತ ಕರೆಯುತ್ತಾರೆ. ಪುರಾಣದ ಕತೆಯಲ್ಲಿ ಸತ್ಯ ಹರಿಶ್ಚಂದ್ರನ ಬೆನ್ನು ಹತ್ತಿದ ನಕ್ಷತ್ರಿಕನ ಕಾಟ ನಮಗೆಲ್ಲ ತಿಳಿದಿದೆ. ಮಹರ್ಷಿ ವಿಶ್ವಾಮಿತ್ರರ ಅಣತಿಯಂತೆ ನಕ್ಷತ್ರಿಕ ಹರಿಶ್ಚಂದ್ರನಿಗೆ ಕಾಡುತ್ತಾನೆ. ಹಾಗೇ ತಪ್ಪಿಸಿಕೊಳ್ಳಲಾಗದ ಇಕ್ಕಟ್ಟು ಸೃಷ್ಟಿಸುವವರು ಬಂದಾಗ ಬಂತಪ್ಪ ಶನಿ ಎಂದು ಜನ ಚಡಪಡಿಸುತ್ತಾರೆ. ಕುತಂತ್ರಿಯನ್ನು ಶಕುನಿ ಎಂದು ಕರೆಯುತ್ತಾರೆ. ಹಿಡಿದ ಕೆಲಸವನ್ನು ಚಾಣಕ್ಯತೆಯಿಂದ ಮಾಡಿ ಮುಗಿಸುವವರನ್ನು ಚಾಣಕ್ಯ ಎಂದು ಗುರುತಿಸುತ್ತಾರೆ. ಈ ಶಬ್ದಗಳು ಹಾಗೆ ಸುಲಭವಾಗಿ ಒಬ್ಬರಿಗೆ ಬಿರುದಾಗಿಯೋ ಅಡ್ಡ ಹೆಸರಾಗಿಯೋ ಬರುವುದಿಲ್ಲ.

    ಶನಿರಾಯನೂ ಅಷ್ಟೇ, ಕಾಟದ ಸಮಯ ಬಂದಾಗ ಏಕಾಏಕಿ ಒಂದು ಸಾಮ್ರಾಜ್ಯವೇ ಕುಸಿಯುವಂತೆ ಮಾಡಬಲ್ಲ. ನಮ್ಮ ಅಟ್ಟಹಾಸಗಳನ್ನು ಧ್ವಂಸಗೊಳಿಸಿ ಸಂಪೂರ್ಣ ಅಸಹಾಯಕರನ್ನಾಗಿ ಮಾಡಬಲ್ಲ. ಕರ್ಮ ಜೋರಾಗಿಯೇ ಇದ್ದರೆ ಕೋಟಿಕೋಟಿ ರೂಪಾಯಿಗಳು ಕರ್ಪರದಂತೆ ಉರಿದು ಹೋಗುವ ಸ್ಥಿತಿ ತರಬಲ್ಲ. ಊಹಿಸಿರದ ಅವಘಡ, ನಷ್ಟ, ಅರಿಷ್ಟ, ಅನಾರೋಗ್ಯ, ಮೂಳೆ ಮುರಿತ, ಬಂಧುಗಳ ಸಾವು, ಸ್ವಕೀಯರೇ ವೈರಿಗಳಾಗುವ ವೈಚಿತ್ಯ, ನಡೆಯಬೇಕಾದ ಮದುವೆ, ಮನೆ ಕಟ್ಟುವ, ಬೆಲೆಬಾಳುವ ವಸ್ತುಗಳ ಖರೀದಿಯ ಸುಹಾಸಕರ ಸಂದರ್ಭ, ತೊಂದರೆ ಇಲ್ಲದೆ ಸಾಗುತ್ತಿದ್ದ ಕೆಲಸದಲ್ಲಿ ತೊಂದರೆ, ಸ್ಥಳ ಬದಲಾವಣೆ, ಗೊತ್ತುಗುರಿ ಇರದ ಕಡೆಗೆ ಹೋಗಿ ಎದುರಿಸಬೇಕಾದ ಪಡಿಪಾಟಲು, ಜೈಲು, ವ್ಯಾಜ್ಯ, ಪ್ರಾಪ್ತಿಗೆ ತಡೆ, ಕೆಲವು ಸಲ ಮರಣವನ್ನೂ ತರಬಲ್ಲ. ಆದರೆ ಮರಣ ತೀರಾ ಅಪರೂಪದಲ್ಲಿ ಅಪರೂಪ. ಜನ ಕಂಟಕರಾದವರಿಗೆ ಮರಣಗಳು ಜಾಸ್ತಿ.

    ಇದರ ಅರ್ಥ ಶನೈಶ್ಚರ ಬರೀ ತೊಂದರೆಗಳನ್ನೇ ತರುವುದು ಎಂದಲ್ಲ. ಜೀವನದ ಕಷ್ಟಗಳನ್ನು ಯಾಕೆ ಹೀಗೆ ಎಂಬುದಾಗಿ ವಿಶ್ಲೇಷಿಸಲು ಕಷ್ಟವಾದಾಗ ಅವನ್ನು ದುರದೃಷ್ಟ ಪ್ರಾರಬ್ಧ ಎಂದು ಕರೆದರು. ಕರ್ಮ ಫಲ ಎಂಬುದಾಗಿ ಗುರುತಿಸಿದರು. ನಂಬುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟ ವಿಷಯ. ಯಾಕೆಂದರೆ ಎಲ್ಲವೂ ಒಂದು ಆಕಸ್ಮಿಕ ಎಂದು ಹೇಳಲಾಗದಂತೆ ಘಟನೆಗಳು ಸಂಭವಿಸಿರುತ್ತವೆ. ಗಾಂಧೀಜಿಗೆ ಸಾಡೇಸಾತಿ ಕಾಟ ಬಂದಾಗಲೇ, ನಾಥೂರಾಮ್ ಗೋಡ್ಸೆಗೂ ಸಾಡೇಸಾತಿ ಕಾಟ ಒದಗಿ ಬಂದದ್ದು, ಗಾಂಧೀಜಿಯ ಬಲಿದಾನವಾದದ್ದು ಗೋಡ್ಸೆ ಗಲ್ಲಿಗೇರಿದ್ದು ಆಕಸ್ಮಿಕವೇ? ಒಸಾಮಾ ಬಿನ್ ಲಾಡೆನ್, ಸದ್ದಾಂ ಹುಸೇನ್, ದೇಶದ ಗಡಾಫಿ ಗುಂಡೇಟಿನಿಂದ ಸತ್ತಿದ್ದು ಅಥವಾ ಗಲ್ಲಿಗೇರಿದ್ದು ಶನಿಕಾಟದಲ್ಲಿಯೇ ಎಂಬುದು ಒಂದು ಆಕಸ್ಮಿಕವೇ? ಇಂದಿರಾ ಗಾಂಧಿ ಅವರಿಗೆ ತುರ್ತಸ್ಥಿತಿ ಹೇರಬೇಕಾಗಿ ಬಂದ ಪೂರ್ವದ ತಲ್ಲಣಗಳು ನಿರ್ವಣವಾಗಿ ನಿಂತಿದ್ದು ಶನಿಕಾಟದಿಂದಾಗಿ ಎಂಬುದು ಒಂದು ಆಕಸ್ಮಿಕವೇ? ಅಮಿತಾಬ್ ಬಚ್ಚನ್ ಮಾರಣಾಂತಿಕವಾದ ಅವಘಡಕ್ಕೆ ಸಿಲುಕುವಂತಾದ ಕೂಲಿ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಶನಿ ಕಾಟವಿತ್ತು ಎಂಬುದು ಒಂದು ಆಕಸ್ಮಿಕವೇ? ಬಿಲ್ ಕ್ಲಿಂಟನ್ ಮೊನಿಕಾ ಲೆವೆನ್​ಸ್ಕಿ ಎಂಬ ಮಹಿಳಾ ಮಣಿಯ ಮೋಹ ಪಾಶಕ್ಕೆ ಸಿಕ್ಕಿ ಹಗರಣವಾಗಿ ತತ್ತರಿಸಿದ್ದು ಶನಿಕಾಟದಲ್ಲಿ ಎಂಬುದು ಒಂದು ಆಕಸ್ಮಿಕವೇ? ದೇವೇಗೌಡರ ಕುಟುಂಬದ ಸದಸ್ಯರಿಗೆ ಅಧಿಕಾರ ಸಿಕ್ಕಾಗ ವಿಸ್ತಾರವಾದ ಅವಧಿಯನ್ನು ಅದು ಪಡೆಯಲಾರದು ಎಂಬ ವಿಚಾರ ಶನಿಕಾಟ ಬಂದಾಗಲೇ ಸಂಭವಿಸುವುದು ಒಂದು ಆಕಸ್ಮಿಕವೇ? ಕನಕಪುರದ ಬಂಡೆ ಎಂದು ಹೆಸರಾದ ಡಿ.ಕೆ.ಶಿವಕುಮಾರ್​ಗೆ ಸುತ್ತಿಕೊಂಡ ತಿಹಾರ್ ಜೈಲುವಾಸ ಶನಿಕಾಟ ಸಂದರ್ಭದಲ್ಲಿ ಎನ್ನುವುದು ಒಂದು ಆಕಸ್ಮಿಕವೇ? … ಇಂಥ ಸಾವಿರಾರು ಶನಿಕಾಟದ ಉದಾಹರಣೆ ನೀಡಬಹುದು.

    ಶನಿಕಾಟಕ್ಕೆ ಚಂದ್ರನೂ ಪಾಲುದಾರನೇ?: ಮನಸ್ಸಿಗೆ ಕಾರಕನಾದ ಚಂದ್ರನಿಗೂ, ಶ್ರಮ, ಕರ್ಮಫಲಕ್ಕೆ ಕಾರಣನಾಗುವ ಶನೈಶ್ಚರನಿಗೂ ಪರಸ್ಪರ ಹಗ್ಗಜಗ್ಗಾಟ ಶುರುವಾದಾಗ ಮನಸ್ಸು ಮತ್ತು ದೇಹ ಒಂದು, ಇನ್ನೊಂದರ ಸಹಜ ಕೊಂಡಿಗಳನ್ನು ಕಳಚಿಕೊಳ್ಳುತ್ತವೆ. ಚಂದ್ರನಿಂದ ಶನೈಶ್ಚರ ನಷ್ಟದ ಮನೆ, ರಾಶಿಯ ಮನೆ ಮತ್ತು ಧನ (ವಾಕ್ ಸ್ಥಾನ, ಮಾರಕ ಸ್ಥಾನ ಇದೇ ಆಗಿದೆ) ಸ್ಥಾನಕ್ಕೆ ಬಂದಾಗ ಸಾಡೇಸಾತಿ ಕಾಟ ಗಂಟು ಬೀಳುತ್ತದೆ. ಚಂದ್ರ ಮತ್ತು ಶನಿ ಷಷ್ಠಾ್ಯಷ್ಟಕಕ್ಕೆ ಬಂದಾಗ ಅಷ್ಟಮ ಶನಿಕಾಟ ಇರುತ್ತದೆ. ಪೂರ್ವ ಪುಣ್ಯಸ್ಥಾನಕ್ಕೆ (ಚಂದ್ರನಿಂದ) ಶನೈಶ್ಚರ ಬಂದಾಗ ಪಂಚಮ ಶನಿ ಕಾಟ ಇರುತ್ತದೆ.

    (ಲೇಖಕರು: ಜ್ಯೋತಿಷ ವಿಜ್ಞಾನ ಸಂಶೋಧಕರು, ಸಾಹಿತಿ)

    ಬರುವ ತೊಂದರೆಗಳೇನು?

    ಒಬ್ಬ ವ್ಯಕ್ತಿಯ ಕುಂಡಲಿ ಮೇಲಿಂದಲೇ ಏನು ತೊಂದರೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದು. ಮೋದಿ ಶನಿಕಾಟವಿದ್ದಾಗಲೂ ಪ್ರಧಾನಿಯಾದರು. ರಾಹುಲ್ ಶನಿಕಾಟ ಇದ್ದಿದ್ದರಿಂದ ಪ್ರಧಾನಿಯಾಗಲಿಲ್ಲ. ಆರ್ಥಿಕ ನೀತಿ, ನಿರುದ್ಯೋಗ, ಅಂತಾರಾಷ್ಟ್ರೀಯ ವಿದ್ಯಮಾನಗಳಿಂದಾಗಿ ಭಾರತದ ಹಣದುಬ್ಬರವನ್ನು ಪ್ರಧಾನಿ ಮೋದಿ ನಿರ್ವಹಿಸಲು ಪರದಾಡುವಂತಾಗುವುದು, ಗೆದ್ದ ರಾಜ್ಯಗಳಲ್ಲಿ ಪೂರ್ತಿ ಬಹುಮತ ಸಂಪಾದಿಸಲು ವಿಫಲವಾಗುವುದು, ಕೇಸರಿ ಬಣ್ಣದಿಂದ ತುಂಬಿಕೊಳ್ಳತೊಡಗಿದ್ದ ಭಾರತದಲ್ಲಿನ ರಾಜ್ಯಗಳ ಸರ್ಕಾರ ಬಿಜೆಪಿಯಿಂದ ದೂರವಾಗುತ್ತ ಹೋದದ್ದು ಶನಿಕಾಟದಿಂದಲೇ? ಉತ್ತರ ‘ಹೌದು’ ಎಂಬುದು ಸತ್ಯ. ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಇಬ್ಬರೂ ಸಾಡೇಸಾತಿ ಕಾಟದಿಂದ ಈಗ ಹೊರಬಂದಿದ್ದಾರೆ. ಮುಂದೇನು? ಜಾತಕಗಳ ವಿಶ್ಲೇಷಣೆ ಮುಖ್ಯ. ರಾಹುಲ್​ಗೆ ಶನೈಶ್ಚರ ಮೃದುವಾದರೂ ಮೋದಿಗೆ ಶನೈಶ್ಚರ ಕಾಠಿಣ್ಯವನ್ನೇ ಹೊಂದಿರುತ್ತಾನೆ. ಮೋದಿ ಚಂದ್ರ ಮಂಗಳರಿಂದಲೇ ಬಲ ಪಡೆಯಬೇಕು.

    ಯಾರಿಗೆ ಪ್ರಾರಂಭ?

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಇರಾನ್ ಅಧ್ಯಕ್ಷ ಹಸನ್ ರುಹಾನಿ ಮುಂತಾದವರಿಗೆ ಶನಿಕಾಟ ಪ್ರಾರಂಭವಾಗುತ್ತದೆ.

    ಯಾರಿಗೆ ವಿಮುಕ್ತಿ?

    ಶನಿಕಾಟದಿಂದ ಪ್ರಧಾನಿ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್, ಪುಟಿನ್, ಬಿ.ಎಸ್. ಯಡಿಯೂರಪ್ಪ,

    ಎಚ್.ಡಿ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಮುಂತಾದವರು ಮುಕ್ತಿ ಪಡೆಯಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts