More

    ಹಿಂಜರಿಯದೆ ಎಲ್ಲರೂ ಲಸಿಕೆ ಪಡೆಯಿರಿ

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಆಶ್ವಾಸನೆಯಂತೆ ದೇಶಾದ್ಯಂತ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ, ಲಸಿಕೆ ಪಡೆಯಲು ಯಾವುದೇ ಹಿಂಜರಿಕೆ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮನವಿ ಮಾಡಿದರು.
    ಇಲ್ಲಿಯ ಕಾರವಾರ ರಸ್ತೆ ಹಳೆಯ ಸಿಎಆರ್ ಮೈದಾನದಲ್ಲಿ ಪೊಲೀಸ್ ಕುಟುಂಬ ವರ್ಗದವರಿಗಾಗಿ ಸೋಮ ವಾರ ಆಯೋಜಿಸಿದ್ದ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಕೋವಿಡ್ ಲಸಿಕೆ ಬಂದಾಗ ಆರಂಭ ದಲ್ಲಿ ಅಪಪ್ರಚಾರ ಮಾಡಲಾಯಿತು. ಇದರಿಂದಾಗಿ ಹಲವು ಜನರು ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಕೋವಿಡ್ ಎರಡನೇ ಅಲೆ ತೀವ್ರವಾಗಿ ಹಾನಿ ಮಾಡಿದ ಬಳಿಕ ಜನರಲ್ಲಿ ಜಾಗೃತಿ ಮೂಡಿದೆ. ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ ಎಂದರು.
    ಕೇಂದ್ರ ಸರ್ಕಾರವೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ. ಧಾರವಾಡ ಜಿಲ್ಲೆಯಲ್ಲಿ 201 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಭಿಯಾನದ ಮೊದಲ ದಿನ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ನಾನು ಕೂಡ ಲಸಿಕೆ ಪಡೆದಿದ್ದೇನೆ. ಯಾವುದೇ ಅಡ್ಡಪರಿಣಾಮ ಉಂಟಾಗಿಲ್ಲ. ಲಸಿಕೆ ನಿಮ್ಮಮ್ನ ಕೋವಿಡ್​ನಿಂದ ರಕ್ಷಿಸುತ್ತದೆ ಎಂದರು.
    ಪೊಲೀಸ್ ಆಯುಕ್ತರ ಬೇಡಿಕೆ ಯಂತೆ ಪೊಲೀಸ್ ಸಿಬ್ಬಂದಿ ಕುಟುಂಬದವರಿಗೂ ಲಸಿಕೆ ಹಾಕಲಾಗು ತ್ತಿದೆ ಎಂದು ಸಚಿವ ಶೆಟ್ಟರ್ ಹೇಳಿದರು.
    ಶಾಸಕ ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಭುರಾಮ್ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಆರ್​ಸಿಎಚ್​ಒ ಡಾ. ಎಸ್.ಎಂ. ಹೊನಕೇರಿ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
    ಅಂಗವಿಕಲರಿಗೆ ಕೋವಿಡ್ ಚುಚ್ಚುಮದ್ದು: ಸಿದ್ಧಾರೂಢ ಮಠದ ಹತ್ತಿರ ಇರುವ ಅಂಧ ಮಕ್ಕಳ ಶಾಲೆಯಲ್ಲಿ ಅಂಗವಿಕಲರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಜರುಗಿತು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ ಅವರು, ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. 18 ವರ್ಷ ಮೇಲ್ಪಟ್ಟ ಅಂಗವಿಕಲರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಯಿತು.ಅಂಧ ಮಕ್ಕಳ ಶಾಲೆ ಅಧೀಕ್ಷಕ ಅಣ್ಣಪ್ಪ ಕೋಳಿ, ಸಮನ್ವಯ ಅಧಿಕಾರಿ ಆಸಿಫ್ ಅಡಿನಾ, ಎಂಆರ್​ಡಬ್ಲ್ಯುಮಹಾಂತೇಶ ಕುರ್ತಕೋಟಿ ಉಪಸ್ಥಿತಿರಿದ್ದರು.
    ಅಳ್ನಾವರ ವರದಿ: ಸೋಮವಾರ ಆರಂಭಗೊಂಡಿ ರುವ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಪಟ್ಟಣ ಪಂಚಾಯಿತಿ ಆವರಣದಲ್ಲಿ ತಹಸೀಲ್ದಾರ್ ಅಮರೇಶ ಪಮ್ಮಾರ ಚಾಲನೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕಡಬಗಟ್ಟಿ, ಹೊನ್ನಾಪುರ ಹಾಗೂ ಡೋರಿ ಗ್ರಾಮಗಳಲ್ಲಿ ತೆರೆಯಲಾದ ಲಸಿಕೆ ಕೇಂದ್ರಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಒಟ್ಟು 654 ಜನರು ಲಸಿಕೆ ಪಡೆದಿದ್ದಾರೆ.
    ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ. ನಾಗರಾಜ ಗುರ್ಲಹೊಸುರ, ವಿನೋದ ಹೊಂಡದಕಟ್ಟೆ, ಕೆ. ಮಧುಸೂದನ ಇದ್ದರು.
    ಕುಂದಗೋಳ ವರದಿ: ಕೋವಿಡ್ ಮಾಹಾಮಾರಿ ನಿಯಂತ್ರಿಸಬೇಕಾದರೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳ ಬೇಕು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
    ಪಟ್ಟಣದ ಪುರಶಾಲೆ, ಮರಾಠಾ ಭವನ ಸೇರಿ ತಾಲೂಕಿನಲ್ಲಿ 18 ಕೇಂದ್ರಗಳಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಕ್ಕೆ ಮಾರಕವಾಗಿರುವ ಈ ಕೋವಿಡ್ ನಿಯಂತ್ರಿಸಲು ಎಲ್ಲರೂ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಬೇಕು ಎಂದು ವಿನಂತಿಸಿದರು.ತಾಲೂಕು ವೈದ್ಯಾಧಿಕಾರಿ ಭಾಗೀರತಿ ಮಡ್ಲಿಗೇರಿ, ತಾಪಂ ಇಒ ಮಹೇಶ ಕುರಿಯವರ, ಸಿಪಿಐ ದೇಶನೂರು, ಮಲ್ಲಿಕಾರ್ಜುನ ಕಿರೇಸೂರ ಇದ್ದರು. ಪಟ್ಟಣದ ಪಪಂ ಕಚೇರಿಯಲ್ಲಿ ಅಧ್ಯಕ್ಷ ವಾಸುಗಂಗಾಯಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಮರಾಠಾ ಭವನದಲ್ಲಿ ಪೊಲೀಸ ಇಲಾಖೆ ಹಾಗೂ ಅವರ ಕುಟುಂಬದವರಿಗೆ ಲಸಿಕೆಯನ್ನು ಹಾಕಲಾಯಿತು.
    ಕಲಘಟಗಿ ವರದಿ: ಪಟ್ಟಣ ಪಂಚಾಯಿತಿಯಲ್ಲಿ ಉಚಿತ ಲಸಿಕಾ ಅಭಿಯಾನಕ್ಕೆ ಸೋಮವಾರ ಶಾಸಕ ಸಿ.ಎಂ. ನಿಂಬಣ್ಣವರ ಚಾಲನೆ ನೀಡಿದರು. ಪ.ಪಂ. ಅಧ್ಯಕ್ಷೆ ಅನುಸೂಯಾ ಹೆಬ್ಬಳ್ಳಿಮಠ, ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ್, ಆಡಳಿತ ಮಂಡಳಿ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts