ತಂಗಡಗಿ: ಗ್ರಾಮದಲ್ಲಿನ ರಾಜ್ಯ ಹೆದ್ದಾರಿಯನ್ನು ವಿಸ್ತರಣೆ ಮಾಡಬೇಕು, ಈಗಾಗಲೇ ಪರಿಹಾರ ಪಡೆದುಕೊಂಡಿರುವ ಹೆದ್ದಾರಿ ಪಕ್ಕದ ಮನೆಗಳನ್ನು ತೆರವುಗೊಳಿಸಿ ಚರಂಡಿ ನಿರ್ಮಿಸಬೇಕು ಎಂದು ಯುವಜನ ಸೇನೆ ಸಂಟನೆ ರಾಜ್ಯಾಧ್ಯ ಶಿವಾನಂದ ವಾಲಿ ಆಗ್ರಹಿಸಿದ್ದಾರೆ.
ರಸ್ತೆ ಪೂರ್ಣಗೊಳ್ಳುವವರೆಗೂ ಸುಂಕ ಪಡೆಯುವುದಿಲ್ಲವೆಂದು ನಿಗಮದವರು ತಿಳಿಸಿದ್ದರು. ಆದರೆ ಸುಂಕ ವಸೂಲಾತಿ ನಿರಂತರ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದದಿಂದ ತಂಗಡಗಿ, ಮುದ್ದೇಬಿಹಾಳ ಮಾರ್ಗವಾಗಿ ತಾಳಿಕೋಟೆವರೆಗೆ ರಾಜ್ಯ ಹೆದ್ದಾರಿ ನಿರ್ಮಿಸಿ ವರ್ಷಗಳೇ ಕಳೆದಿವೆ. ಪೆಟ್ರೋಲ್ ಬಂಕ್ ತಿರುವಿಗೆ ಹೊಂದಿಕೊಂಡು ರಸ್ತೆಯ ಅಕ್ಕಪಕ್ಕದಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ಕಟ್ಟಿಸಿಕೊಂಡು ವಾಸವಾಗಿದ್ದಾರೆ. ಮನೆಗಳು ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುತ್ತವೆ. ಈ ಮನೆಗಳಿಗೆ ಈಗಾಗಲೇ ಸರ್ಕಾರದಿಂದ ಪರಿಹಾರವನ್ನು ಒದಗಿಸಲಾಗಿದೆ. ಹೀಗಿದ್ದರೂ ರಸ್ತೆಯಲ್ಲಿರುವ ಮನೆಗಳನ್ನು ತೆರವುಗೊಳಿಸದೆ ಜನರ ಜೀವನದ ಜೊತೆ ಕೆಲ ಪ್ರಭಾವಿಗಳು ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.