ಗೊಳಸಂಗಿ: ವರಿಷ್ಠರ ಮಧ್ಯಸ್ಥಿಕೆಯಿಂದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ವಿಜಯೇಂದ್ರ ಬಣಗಳ ನಡುವಿನ ಬಡಿದಾಟ ಅಂತ್ಯ ಕಾಣಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಮುತ್ತಗಿ ಗ್ರಾಮದ ಭೋವಿ ವಡ್ಡರ ಸಮಾಜದ ನೇತೃತ್ವದಲ್ಲಿ ಮಂಗಳವಾರ ಮಾರುತೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಿದ್ಧರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮೀಪದ ವಿಠ್ಠಲ-ರುಕ್ಮಿಣಿ ದೇವಸ್ಥಾನದಲ್ಲಿ ಭೋವಿವಡ್ಡರ ಸಮಾಜದಿಂದ ಅವರನ್ನು ಸನ್ಮಾನಿಸಲಾಯಿತು. ಬಳಿಕ ವಿಜಯವಾಣಿ ಪ್ರತಿನಿಧಿ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ನನ್ನ ಮಾತೃಪಕ್ಷ. ಅದು ನನಗೆ ಬಹುತೇಕ ಸ್ಥಾನಮಾನ ನೀಡಿ ಗೌರವಿಸಿದೆ. ಆ ಪಕ್ಷಕ್ಕೆ ದ್ರೋಹ ಬಗೆದರೆ ನನ್ನ ಹೆತ್ತ ತಾಯಿಗೆ ದ್ರೋಹ ಬಗೆದಂತೆ. ಪಕ್ಷ ಶುದ್ಧವಾದ ಬಳಿಕ ಮತ್ತೆ ನಾನು ಬಿಜೆಪಿಗೆ ಬರುತ್ತೇನೆ ಎಂದರು.
ಸಿದ್ಧರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವೇ.ಅಪ್ಪುಸ್ವಾಮಿ ಹಿರೇಮಠ, ವೇ.ಶಂಕ್ರಯ್ಯಸ್ವಾಮಿ ಕಂಬಿಮಠ ಸಾನ್ನಿಧ್ಯ ವಹಿಸಿದ್ದರು. ಗೌರಿಶಂಕರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಮೇಶ ಸೂಳಿಬಾವಿ ಅಧ್ಯಕ್ಷತೆ ವಹಿಸಿದ್ದರು. ಪಿಕೆಪಿಎಸ್ ನಿರ್ದೇಶಕ ಪ್ರೇಮಕುಮಾರ ಮ್ಯಾಗೇರಿ, ಸುನೀಲ ಜಮಖಂಡಿ ಮಾತನಾಡಿದರು.
ಪಿಕೆಪಿಎಸ್ ಚುನಾವಣೆಯಲ್ಲಿ ವಿಜೇತರಾದ ನೂತನ ನಿರ್ದೇಶಕರನ್ನು ಭೋವಿ ವಡ್ಡರ ಸಮಾಜದಿಂದ ಸನ್ಮಾನಿಸಲಾಯಿತು.
ವೆಂಕಟೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಅರ್ಜುನ ಶಿಲ್ಪಿ, ಶ್ರೀಶೈಲ ಶಿಲ್ಪಿ, ರಜನಿಕಾಂತ ಶಿಲ್ಪಿ, ಅಡಿವೆಪ್ಪ ಶಿಲ್ಪಿ, ಗೋವಿಂದ ದೇವಕರ ಮತ್ತಿತರರು ಇದ್ದರು. ತಾಲೂಕು ಭೋವಿ ವಡ್ಡರ ಸಮಾಜದ ಮಾಜಿ ಅಧ್ಯಕ್ಷ ಮಧುಸೂದನ ಶಿಲ್ಪಿ ಸ್ವಾಗತಿಸಿದರು. ಆರ್.ಬಿ.ಬ್ಯಾಕೋಡ ನಿರೂಪಿಸಿದರು. ಎಸ್.ಎಸ್.ಚಿಮ್ಮಲಗಿ ವಂದಿಸಿದರು.