ಇಂಡಿ: ಸರ್ಕಾರ ಮಾಡಬೇಕಿದ್ದ ಸಮಾಜಮುಖಿ ಕಾರ್ಯಗಳನ್ನು ನಾಡಿನ ಮಠ ಮಾನ್ಯಗಳು ಮಾಡುತ್ತಿವೆ. ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳು ಲಿಂಗೈಕ್ಯರಾಗಿ 30 ವರ್ಷ ಕಳೆದರೂ ಭಕ್ತರ ಮನೆ ಮನದಲ್ಲಿ ಇಂದಿಗೂ ಬೆಳಕಾಗಿದ್ದಾರೆ ಎಂದು ಕಲಬುರಗಿಯ ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ ಮಲ್ಲಿಕಾರ್ಜುನ ಶಾಸಿ ಹೇಳಿದರು.
ತಾಲೂಕಿನ ಗೋಳಸಾರದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಸದ್ಗುರು ತ್ರೀಧರೇಶ್ವರ ಮಹಾಶಿವಯೋಗಿಗಳ 31ನೇ ಪುಣ್ಯಾರಾಧನೆ ಮಹೋತ್ಸವದ ಎರಡನೆಯ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರನ್ನು ಪ್ರೀತಿಸಿ ಎಲ್ಲರನ್ನು ಜತೆಯಾಗಿ ಕರೆದುಕೊಂಡು ಹೋಗುವ ಮಠ ಗೋಳಸಾರದ ಮಠವಾಗಿದೆ. ಮೌನ ಕ್ರಾಂತಿಯ ಮೂಲಕ ಧಾರ್ಮಿಕ ಇತಿಹಾಸ ಮೂಡಿಸುತ್ತಿರುವ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳ ಕಾರ್ಯ ಶ್ಲಾಘನೀಯ. ಗೋಳಸಾರ ಮಠದಲ್ಲಿ ಬಡವರಿಗೆ ಆಶ್ರಯ ನೀಡುವುದರ ಜತೆಗೆ ಮಕ್ಕಳಿಗೆ ಶಿಕ್ಷಣ ಹಾಗೂ ಅನ್ನದಾಸೋಹ ನೀಡುತ್ತಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ ಮಾತನಾಡಿ, ಜಾತ್ರೆ ಮತ್ತು ದೇವತಾ ಕಾರ್ಯಗಳಲ್ಲಿ ಸಾರ್ವಜನಿಕರು ಪ್ರತಿನಿತ್ಯ ಭಾಗವಹಿಸುವುದರಿಂದ ಸಂತೋಷ, ನೆಮ್ಮದಿ ಸಿಗಲು ಸಾಧ್ಯ ಎಂದರು.
ಆಲಮೇಲದ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಕುಮಾರ ಗುಂದಗಿ ಮಾತನಾಡಿ, ದೇಗುಲಗಳು ಭಕ್ತರಿಗೆ ನೆಮ್ಮದಿ ನೀಡುವ ಕೇಂದ್ರಗಳಾಗಿವೆ. ಆದರೆ, ಕೆಲಸದ ಒತ್ತಡದಿಂದ ಅನೇಕರಿಗೆ ದೇವಸ್ಥಾನಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.
ಶಿಕ್ಷಕ ರವಿ ಆಳೂರ, ಶಿಕ್ಷಕ ಎ.ಎಸ್. ಪಾಸೋಡಿ ಮಾತನಾಡಿದರು. ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ರೋಡಗಿಯ ಅಭಿನವ ಶಿವಲಿಂಗ ಶ್ರೀಗಳು, ಜೈನಾಪುರದ ರೇಣುಕಾ ಶಿವಾಚಾರ್ಯರು, ರಾಂಪುರ ಆರೂಢ ಮಠದ ನಿತ್ಯಾನಂದ ಶ್ರೀಗಳು ಮತ್ತಿತರರಿದ್ದರು.