ಮುದ್ದೇಬಿಹಾಳ: ತಮ್ಮ ಜೀವಿತಾವಧಿ ಪೂರ್ತಿ ಜನಹಿತಕ್ಕಾಗಿ ಕೆಲಸ ಮಾಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಅವರನ್ನು ದೇವದೂತರೆಂದೇ ಅರ್ಥೈಸಬೇಕು ಎಂದು ಶಾಸಕ, ಕರ್ನಾಟಕ ಸಾಬೂನು, ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕಾಡಳಿತ ಹಾಗೂ ಭೋವಿ ವಡ್ಡರ ಸಮಾಜ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ವಿದ್ಯೆ ಅಪರೂಪವಾಗಿದ್ದ ಕಾಲದಲ್ಲಿಯೇ ಅಗಾಧ ಜ್ಞಾನ ಸಂಪಾದಿಸಿದ್ದ ಸಿದ್ಧರಾಮೇಶ್ವರರನ್ನು ಇಂಜಿನಿಯರಿಂಗ್ ಮಾರ್ವೆಲ್ಸ್ ಎಂದು ಕರೆಯುತ್ತಿದ್ದರು. ಅವರ ಜಯಂತಿಯನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ, ವಿಜಯಪುರದ ಸಿದ್ಧೇಶ್ವರ ಟ್ರಸ್ಟ್‌ಗೆ ಮನವಿ ಮಾಡಿ ಅವರ ಮಹಿಮೆಯನ್ನು ಪ್ರತಿ ಹಳ್ಳಿಗೂ ಪರಿಚಯಿಸುವ ಕಾರ್ಯವಾಗಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ. ಅದರಿಂದ ಮಾತ್ರ ಸಮಾನತೆ ತರಲು ಸಾಧ್ಯವಿದೆ. ಕಪನೂರ, ಬಲದಿನ್ನಿ ಗ್ರಾಮಗಳಲ್ಲಿರುವ ನನ್ನ ಜಮೀನಿನಲ್ಲಿ ಹೆಚ್ಚು ಬೆಳೆ ಬಂದರೆ ಹೆಚ್ಚುವರಿ ಬೆಳೆಯನ್ನು ಆ ಭಾಗದಲ್ಲಿ ಸಿದ್ಧರಾಮೇಶ್ವರರ ದೇವಸ್ಥಾನ ಕಟ್ಟಲು ಕೊಡುತ್ತೇನೆ ಎಂದರು.
ಬಿಇಒ ಬಿ.ಎಸ್.ಸಾವಳಗಿ, ಸಮಾಜದ ಮುಖಂಡ ಸಿದ್ದಣ್ಣ ಆಲಕೊಪ್ಪರ ಮಾತನಾಡಿದರು. ತಾಪಂ ಇಒ ಎನ್.ಎಸ್. ಮಸಳಿ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಭೋವಿ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಹಡಲಗೇರಿ ಮತ್ತಿತರರಿದ್ದರು.