ಹೊರ್ತಿ: ತಾಯಿ ಮಡಿಲು ಹಾಗೂ ಗುರುವಿನ ಸಾನ್ನಿಧ್ಯದಲ್ಲಿ ಅದಮ್ಯ ಶಕ್ತಿ ಇರುತ್ತದೆ. ಸಿದ್ಧೇಶ್ವರ ಶ್ರೀಗಳ ಜತೆಯಲ್ಲಿದ್ದ ಅನೇಕರಿಗೆ ಇದು ಅನುಭವಕ್ಕೆ ಬಂದಿದೆ ಎಂದು ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.
ಗುರುದೇವ ಯೋಗಾಶ್ರಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ಗುರು ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಜಪಯಜ್ಞದಲ್ಲಿ ಮಾತನಾಡಿದ ಅವರು, ಜೀವನದ ಎಲ್ಲ ಏರಿಳಿತಗಳನ್ನೂ ಸಮನಾಗಿ ಸ್ವೀಕರಿಸಿ ನಗುನಗುತ್ತ ಬದುಕುವುದೇ ನಿಜವಾದ ಮುಕ್ತಿ ಎಂದು ಸಾರಿದ ಸಿದ್ಧೇಶ್ವರ ಶ್ರೀಗಳು ಎಲ್ಲ ಸಂದರ್ಭಗಳಲ್ಲೂ ಸಂತುಷ್ಟರಾಗಿ ಬದುಕಿ ನಿಜವಾದ ಸಂತರೆನಿಸಿಕೊಂಡಿದ್ದಾರೆ ಎಂದರು.
ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ಗುರುಮಹಾಂತ ಶ್ರೀಗಳು ಮಾತನಾಡಿ, ಸಿದ್ಧೇಶ್ವರ ಶ್ರೀಗಳು ಮಹಾನ್ ತಪಸ್ವಿಗಳು. ಅವರಂಥ ಶರಣರಿಗೆ ಸಾವಿಲ್ಲ. ಭಕ್ತಿಯಿಂದ ನೆನೆಯುವ ಪ್ರತಿಯೊಬ್ಬರಿಗೂ ಅವರು ಶಕ್ತಿಯಾಗಿದ್ದಾರೆ ಎಂದರು.
ಶಾಸಕ ಗೋಪಿಚಂದ ಪಡಲಕರ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಆಶ್ರಮಕ್ಕೆ ತೆರಳುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಪುಣ್ಯ ಕ್ಷೇತ್ರದಲ್ಲಿ ಸಿದ್ಧೇಶ್ವರ ಸ್ವಾಮಿಗಳ ಹೆಸರಿನಲ್ಲಿ ಭವ್ಯ ಸಭಾಭವನ ನಿರ್ಮಿಸುವ ಕಾರ್ಯವಾಗಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ವಿಜಯ ಮಹಾಂತೇಶ ಶ್ರೀಗಳು, ಬಸವಲಿಂಗ ಶ್ರೀಗಳು, ತ್ಯಾಗನಂದ ಸ್ವಾಮೀಜಿ, ಮಹಾಂತೇಶಾನಂದ ಸ್ವಾಮೀಜಿ, ಮಹಾಂತೇಶ ಗುರುಗಳು, ಬಿ.ಎಂ. ಕೋರೆ, ಎಂ.ಆರ್. ಪಾಟೀಲ, ಬಾಬುಗೌಡ ಪಾಟೀಲ ಮತ್ತಿತರರಿದ್ದರು.