ತಾಳಿಕೋಟೆ: ಶ್ರೀ ಸಾಯಿ ಕಥಾಮೃತವನ್ನು ಆಲಿಸಿ ಚರಿತ್ರೆ ಪಾರಾಯಣ ಮಾಡುವುದರಿಂದ ವ್ಯಾಪಾರ ಹಾಗೂ ಪ್ರಾಪಂಚಿಕ ಜೀವನದಲ್ಲಿ ಸಂತೃಪ್ತಿ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ ಪರಿಣಿತ ವೇ. ವಸಂತಭಟ್ ಜೋಶಿ ಹೇಳಿದರು.
ಶ್ರೀ ಅಂಬಾ ಭವಾನಿ ಮಂದಿರದಲ್ಲಿ ಧನುರ್ಮಾಸ ಪ್ರಯುಕ್ತ ಭಾವಸಾರ ಕ್ಷತ್ರಿಯ ಸಮಾಜದ ಶ್ರೀ ಹಿಂಗುಲಾಂಬಿಕಾ ದೇವಿ ಮಹಿಳಾ ಮಂಡಳಿ ಹಾಗೂ ಶ್ರೀ ಸಾಯಿ ಅನ್ನಪೂರ್ಣೇಶ್ವರ ಭಜನಾ ಮಂಡಳಿ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸಾಯಿ ಚರಿತ್ರೆ ಪಾರಾಯಣ ಕಾರ್ಯಕ್ರಮದ ಮಂಗಲೋತ್ಸವದಲ್ಲಿ ಅವರು ಮಾತನಾಡಿದರು.
ಗುರುಪೂರ್ಣಿಮಾ, ಮಹಾನವಮಿ, ಧನುರ್ಮಾಸಗಳಲ್ಲಿ ಪೂಜೆ ಏರ್ಪಡಿಸಿ, ಸ್ಮರಣೆ ಮಾಡಿದರೆ ಸದ್ಗುರುನಾಥ ಮೋಕ್ಷ ದಯಪಾಲಿಸುತ್ತಾನೆ. ಭಕ್ತಿಯ ಮೂಲಕ ಅಹಂಕಾರ ತೊಡೆದು ಹಾಕಬೇಕು ಎಂದು ಶ್ರೀ ಸತ್ಯ ಸಾಯಿಬಾಬಾರವರ ಚರಿತ್ರೆಯ ಬಗ್ಗೆ ವಿವರಿಸಿದರು.
ವೇ. ವೆಂಕಟೇಶ ಗ್ರಾಮಪುರೋಹಿತ ಮಾತನಾಡಿ, ಸಾರ್ಥಕ ಜೀವನಕ್ಕೆ ದಾನ ಧರ್ಮ ಮಾಡಬೇಕು. ಧನುರ್ಮಾಸದ ಭ್ರಾಹ್ಮಿ ಮುಹೂರ್ತದಲ್ಲಿ ನದಿಯ ಸ್ನಾನ ಮಾಡಿದರೆ ಭಗವಂತ ಅಶ್ವಮೇಧ ಯಾಗದ ಫಲ ನೀಡುತ್ತಾನೆ. ಇದರಿಂದ ನಮ್ಮೆಲ್ಲ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದರು.
ವೇ. ಗಿರೀಶ ಆಚಾರ್ಯ, ವೇ. ಭೀಮಾಶಂಕರ ಗುರೂಜಿ, ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಮಾತನಾಡಿದರು.
ವೇ. ಗುಂಡಭಟ್ ಜೋಶಿ ಭಕ್ತಿಗೀತೆ ಹಾಡಿದರು. ಆನಂದ ಕುಲಕರ್ಣಿ, ಶ್ರೀ ಸಾಯಿ ಸೇವಾ ಟ್ರಸ್ಟ್ ಸಮಿತಿ ಗೌರವಾಧ್ಯಕ್ಷ ಎನ್.ಎಲ್. ಶೆಟ್ಟಿ, ನಿರ್ದೇಶಕರಾದ ಸಿ.ಬಿ. ತಿಳಗೂಳ, ಸತೀಶ ದೇದಾರ ಮತ್ತಿತರರಿದ್ದರು.
ಆನಂದ ಕುಲಕರ್ಣಿ ಸ್ವಾಗತಿಸಿ, ನಿರೂಪಿಸಿದರು. ರಾಘವೇಂದ್ರ ಕುಲಕರ್ಣಿ ವಂದಿಸಿದರು.