ಆಲಮೇಲ: ನಮ್ಮ ಮರಣದ ನಂತರ ಕಣ್ಣುಗಳನ್ನು ದಾನ ಮಾಡುವುದರಿಂದ ಅದು ಮತ್ತೊಬ್ಬರ ಬಾಳಿಗೆ ಬೆಳಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಮರಣಾನಂತರ ತಮ್ಮ ನೇತ್ರಗಳನ್ನು ದಾನ ಮಾಡಬೇಕು ಎಂದು ಡಾ. ಶ್ರೀಶೈಲ ಪಾಟೀಲ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯುತ್ಸವ ಅಂಗವಾಗಿ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ, ಅನುಗ್ರಹ ವಿಜನ್ ೌಂಡೇಶನ್ ಟ್ರಸ್ಟ್ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಸಿದ್ಧೇಶ್ವರ ಬ್ಲಡ್ ಬ್ಯಾಂಕ್, ಆಲಮೇಲದ ಸ್ವಾಮಿ ವಿವೇಕಾನಂದ ಯುವಕ ಸಂಘದ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಇಲ್ಲಿಯ ಯುವಕ ಸಂಘದವರು ನೇತ್ರದಾನ, ರಕ್ತದಾನ ಹಾಗೂ ಉಚಿತ ಚಿಕಿತ್ಸೆ ಶಿಬಿರಗಳನ್ನು ಆಯೋಜಿಸಿ ಅರ್ಥಪೂರ್ಣ ಆಚರಣೆ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಅಗತ್ಯ ನೆರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಪಿಎಸ್‌ಐ ಅರವಿಂದ ಅಂಗಡಿ ಮಾತನಾಡಿ, ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಸದೃಢ ಭಾರತ ನಿರ್ಮಾಣ ಮಾಡಬೇಕು ಎಂದರು.
ಶಿಬಿರದಲ್ಲಿ 40 ಜನರು ರಕ್ತದಾನ ಮಾಡಿದರು. 180 ಜನರು ಕಣ್ಣಿನ ತಪಾಸಣೆ ಮಾಡಿಕೊಂಡಿದ್ದು, ಅದರಲ್ಲಿ 46 ಜನರು ಶಸ ಚಿಕಿತ್ಸೆಗೆ ಒಳಪಟ್ಟರು.
ಅಳೋಳಿ ಮಠದ ಶ್ರೀಶೈಲಯ್ಯ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಜಿ.ಎಸ್. ಪತ್ತಾರ, ಡಾ. ಚನ್ನಬಸು ನಿಂಬಾಳ, ಡಾ. ಸುರೇಶ ಮಹೀಂದ್ರಕರ, ಪ್ರಶಾಂತ ನಾಶಿ, ಹರೀಶ ಯಂಟಮಾನ, ಪ.ಪಂ. ಸದಸ್ಯ ಚಂದು ಕಾಂಬಳೆ, ಶಿವು ಗುರುಕಾರ, ಗುರು ಹಡಪದ, ಶಶಿ ನಾಯಕೋಡ, ಹಣಮಂತ ರಜಪೂತ, ಅಜಯ ಬಂಟನೂರ, ಮಾಂತಗೌಡ ಹಳೆಮನಿ ಮತ್ತಿತರರಿದ್ದರು.