Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಎಚ್ಚೆಸ್ವಿ ಹಸಿರ ಕಥೆ

Friday, 13.07.2018, 3:03 AM       No Comments

ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ನಿರ್ದೇಶನದ ಚೊಚ್ಚಲ ಚಿತ್ರ ‘ಹಸಿರು ರಿಬ್ಬನ್’ ಇಂದು (ಜು. 13) ಬಿಡುಗಡೆಯಾಗುತ್ತಿದೆ. ಮೊದಲ ಚಿತ್ರದಲ್ಲಿಯೇ ಸಂಬಂಧ ಮತ್ತು ಅಸ್ತಿತ್ವದ ಉಳಿವಿಗೆ ಹೋರಾಡುವ ಕುಟುಂಬವೊಂದರ ಕಥೆಯನ್ನು ಆಯ್ದುಕೊಂಡಿದ್ದಾರೆ ಎಚ್ಚೆಸ್ವಿ. ‘ಹಸಿರು ರಿಬ್ಬನ್’ನಲ್ಲಿ ಹಸಿರು ತುಂಬಿದ ಗದ್ದೆಗೂ ಪ್ರಮುಖ ಪಾತ್ರ! ಮನುಷ್ಯತ್ವ ಹಾಗೂ ಮುಗ್ಧತೆ ಕುರಿತೂ ಈ ಸಿನಿಮಾ ಮಾತನಾಡುತ್ತದೆಯಂತೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಕುರಿತು ನಮಸ್ತೆ ಬೆಂಗಳೂರು ಜತೆ ಮಾಹಿತಿ ಹಂಚಿಕೊಂಡಿದ್ದಾರೆ ಎಚ್ಚೆಸ್ವಿ.

|ಮಂಜು ಕೊಟಗುಣಸಿ 

ಸಿನಿಮಾಕ್ಷೇತ್ರದ ನಂಟು ನಿಮಗೆ ಹೊಸದೇನಲ್ಲ. ಆದರೆ, ನಿರ್ದೇಶನ ನಿಮಗೆ ಹೊಸದಲ್ಲವೇ?

ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು ನೋಡಿದ್ದೇನೆ. ಅಂತಹ ಸಿನಿಮಾಗಳನ್ನು ನೋಡುತ್ತ ನೋಡುತ್ತ ನನ್ನ ಮನಸ್ಸಿನಲ್ಲಿಯೂ ಆಸೆ, ಕನಸು ಮೂಡಿತು. ಸಿನಿಮಾ ಅಂದರೆ ಕೇವಲ ರಂಜನೆ ಅಲ್ಲ. ಅದು ಅನುಭವದ ಶೋಧನೆ. ಅದೊಂದು ಕಲೆ ಎಂಬುದನ್ನು ತಿಳಿದುಕೊಂಡೆ. ಅದಕ್ಕೆ ಅನ್ಯಾಯವಾಗದ ಹಾಗೆ, ಭಾಷೆ, ಸಂಸ್ಕೃತಿಗೆ ಧಕ್ಕೆ ಬರದಹಾಗೆ ಎಲ್ಲ ಸೂಕ್ಷ್ಮಗಳನ್ನು ಅಚ್ಚೊತ್ತಬೇಕು. ಸಿನಿಮಾ ಹಿನ್ನೆಲೆಯಲ್ಲಿ ಬದುಕಿನ ನೈಜತೆಗಳನ್ನು ಮುಟ್ಟಬೇಕು. ಅದರಲ್ಲಿನ ಮನುಷ್ಯತ್ವದ ಚಿಲುಮೆಯನ್ನು ಚಿಮ್ಮಿಸಬೇಕು. ಅದು ಕೇವಲ ಬರವಣಿಗೆಯಿಂದಷ್ಟೇ ಅಲ್ಲ, ಸಿನಿಮಾ ಮೂಲಕವೂ ನಾವು ಸದಭಿರುಚಿಯ ಕಥೆಯನ್ನು ಪ್ರೇಕ್ಷಕರಿಗೆ ನೀಡ ಬೇಕೆನಿಸಿತು. ಅದರ ಪ್ರತಿಫಲವೇ ‘ಹಸಿರು ರಿಬ್ಬನ್’.

‘ಹಸಿರು ರಿಬ್ಬನ್’ ಅಂದರೇನು? ಶೀರ್ಷಿಕೆ ಹಿನ್ನೆಲೆ ವಿವರಿಸಿ.

ಈ ಹಿಂದೆ ನನ್ನ ಆತ್ಮಕಥನವನ್ನು ಪ್ರಬಂಧ ರೂಪದಲ್ಲಿ ಹೊರತಂದಿದ್ದೆ. ಅದು ಎರಡು ಭಾಗಗಳಲ್ಲಿ ಪ್ರಕಟವಾಗಿತ್ತು. ಇದೀಗ ಅದು ‘ಎಲ್ಲ ನೆನಪಾಗುತಿದೆ’ ಎಂಬ ಶೀರ್ಷಿಕೆಯಲ್ಲಿ ಸಂಯುಕ್ತ ಪ್ರಬಂಧವಾಗಿ ಒಂದೇ ಪುಸ್ತಕದಲ್ಲಿ ಅಡಕವಾಗಿದೆ. ಅದರಲ್ಲಿನ ಒಂದು ಚಾಪ್ಟರನ್ನು ತೆಗೆದುಕೊಂಡು ‘ಹಸಿರು ರಿಬ್ಬನ್’ ಮಾಡಿದ್ದೇನೆ. ನನ್ನ ಬಾಲ್ಯದ ಘಟನಾವಳಿಗಳೇ ಚಿತ್ರದುದ್ದಕ್ಕೂ ಇವೆ. ನಮ್ಮ ಚಿತ್ರದಲ್ಲಿ ಬರುವ ಪುಟ್ಟ ಹುಡುಗಿಗೆ ಹಸಿರು ರಿಬ್ಬನ್ ಅಂದರೆ ಅಚ್ಚುಮೆಚ್ಚು. ತಾಯಿ ಮತ್ತು ಅಜ್ಜಿಗೆ ಹಸಿರು ಗದ್ದೆ ತೆಗೆದುಕೊಳ್ಳಬೇಕೆಂಬ ಆಸೆ. ಕೊನೆಗೂ ಹೇಗೋ ಅದನ್ನು ಕೊಂಡುಕೊಳ್ಳುತ್ತಾರೆ. ಗೊತ್ತಿಲ್ಲದೆ ಮೋಸವೂ ಹೋಗುತ್ತಾರೆ. ಅದು ಅರಿವಾಗುವದಷ್ಟರಲ್ಲೇ ಸಾಲ ತಲೆಯ ಮೇಲೆ ಕುಳಿತಿರುತ್ತದೆ. ಅಲ್ಲಿಂದ ಮತ್ತೊಂದು ಕಥೆ ತೆರೆದುಕೊಳ್ಳುತ್ತದೆ.

ಈ ಸಿನಿಮಾ ಮೂಲಕ ಹೇಳಬೇಕೆಂದಿರುವ ವಿಷಯವೇನು?

ಮನುಷ್ಯ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಮರೆಯುತ್ತಿದ್ದಾನೆ. ಕೂಡು ಕುಟುಂಬದಲ್ಲಿಯೇ ಪರಸ್ಪರ ಸ್ನೇಹ, ಸಂಬಂಧ, ವಿಶ್ವಾಸ ಕಡಿಮೆಯಾಗುತ್ತಿದೆ. ಅದು ಮತ್ತೆ ಜಾಗೃತಗೊಳ್ಳಬೇಕೆಂಬುದು ನನ್ನ ಆಸೆ. ಅದನ್ನೇ ಈ ಕಥೆ ಆಧಾರವಾಗಿಟ್ಟುಕೊಂಡು ಶೋಧನೆ ಮಾಡಲು ಪ್ರಯತ್ನ ಪಟ್ಟಿದ್ದೇನೆ. ಮನಃಪರಿವರ್ತನೆ, ಮನುಷ್ಯತ್ವದಲ್ಲಿ ನಂಬಿಕೆ ಇದ್ದರೆ ಎಂಥವರೂ ಕೆಟ್ಟವರಾಗಲು ಸಾಧ್ಯವಿಲ್ಲ. ಪ್ರೀತಿ ಮತ್ತು ಮುಗ್ಧತೆ ಕೆಟ್ಟತನವನ್ನು ಬದಲಿಸುತ್ತದೆ. ಮನುಷ್ಯತ್ವವನ್ನು ಜಾಗೃತ ಮಾಡಿಸುತ್ತದೆ. ಕಠೋರ ಹೃದಯವಿದ್ದರೂ ಮನುಷ್ಯತ್ವದ ಚಿಲುಮೆ ಚಿಮ್ಮುತ್ತೆ ಎಂಬುದನ್ನು ಹೇಳಿದ್ದೇವೆ.

ಸಂಬಂಧ ಮತ್ತು ಅಸ್ತಿತ್ವದ ಉಳಿವಿಗೆ ಹೋರಾಡುವ ಕುಟುಂಬವೊಂದರ ಕಥೆ ಎಂದು ಹೇಳಿದ್ದೀರಿ. ಕಥೆ ಆಯ್ಕೆಗೆ ಪ್ರಸ್ತುತತೆಯೇ ಕಾರಣ ಎನ್ನಬಹುದಾ?

ಎಲ್ಲಿಯವರೆಗೆ ಕುಟುಂಬ ವ್ಯವಸ್ಥೆ, ಮನುಷ್ಯ ಸಂಬಂಧಗಳು, ಮಕ್ಕಳ ಬಗ್ಗೆ ಪ್ರೀತಿ ಇರುತ್ತದೋ ಅಲ್ಲಿಯವರೆಗೆ ಈ ಸಿನಿಮಾ ಪ್ರಸ್ತುತ. ನಮ್ಮ ಇಡೀ ದುಡಿಮೆ, ಶ್ರಮ ಕೇವಲ ಸಂತಾನ ರಕ್ಷಣೆಗಾಗಿ ಮಾತ್ರ. ನಮ್ಮ ಮಕ್ಕಳು ದೊಡ್ಡವರಾಗಬೇಕು, ಒಳ್ಳೆಯವರಾಗಬೇಕು ಅನ್ನೋದಷ್ಟೇ ಅದರ ಉದ್ದೇಶ. ಹಾಗಾಗಿ ಆ ವಾತ್ಸಲ್ಯಭಾವ ಇರುವವರೆಗೆ ಈ ಕಥೆ ಪ್ರಸ್ತುತ. ಮನುಷ್ಯರಷ್ಟೇ ಅಲ್ಲ. ಪ್ರಾಣಿ ಪಕ್ಷಿಗಳಲ್ಲಿಯೂ ಸಂತಾನ ರಕ್ಷಣೆ ಎಂಬುದು ಆ ಕುಲದ ಮಹತ್ತರ ಘಟ್ಟ. ಅದನ್ನು ಮುಂದುವರಿಸಲೇಬೇಕು. ಅದೇ ನಮ್ಮ ಚಿತ್ರದ ಪ್ರಸ್ತುತತೆ.

ಕೆಲ ವರ್ಗದ ಪ್ರೇಕ್ಷಕರಿಗೆ ಮಾತ್ರ ಈ ಸಿನಿಮಾ ಸೀಮಿತವಾಗುತ್ತೆ ಎಂಬ ಅಳುಕಿಲ್ಲವೇ?

ಇದೊಂದು ಸದಭಿರುಚಿ ಚಿತ್ರ. ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳನ್ನು ಎಲ್ಲರೂ ನೋಡುತ್ತಿದ್ದರು. ಲಕ್ಷ್ಮೀನಾರಾಯಣ, ಸೀತಾರಾಮ ಶಾಸ್ತ್ರಿ, ಬಿ.ಆರ್. ಪಂತುಲು ಅವರ ಸಿನಿಮಾಗಳೆಂದರೆ ಎಲ್ಲರಿಗೂ ಇಷ್ಟ. ಸಿದ್ಧಲಿಂಗಯ್ಯನವರ ‘ಬೂತಯ್ಯನ ಮಗ ಅಯ್ಯು’ ಯಾರಿಗೆ ಇಷ್ಟವಿಲ್ಲ ಹೇಳಿ? ಅವರ ಸಿನಿಮಾಗಳಲ್ಲಿ ಕಲೆ ಮತ್ತು ಜೀವನ ಎರಡೂ ಇತ್ತು. ಅಬ್ಬರ ಇರದೆ, ಗೊಂದಲ ಸೃಷ್ಟಿಸದೆ, ಮೆಲು ಧ್ವನಿಯಲ್ಲಿ, ಕನ್ನಡ ಭಾಷೆಯ ಸೂಕ್ಷ್ಮ, ಕನ್ನಡದ ಜೀವನ ತೋರಿಸಬೇಕೆಂಬುದು ನನ್ನ ಆಸೆ. ಆ ಸಂಸ್ಕೃತಿಯ ಸೂಕ್ಷ್ಮತೆಯನ್ನು ಮುಟ್ಟಬೇಕು. ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಕನ್ನಡ ಅಂದರೆ ಸಂಸ್ಕೃತಿ. ಅದೊಂದು ಬದುಕುವ ಮಾರ್ಗ. ಈ ಎಲ್ಲ ಅಂಶಗಳೇ ಚಿತ್ರದಲ್ಲಿವೆ. ಸದಭಿರುಚಿಯ ಚಿತ್ರಗಳನ್ನು ಜನ ಕೈಬಿಡಲ್ಲ ಎಂಬ ನಂಬಿಕೆಯೂ ಇದೆ.

ಇತ್ತೀಚಿನ ಸಿನಿಮಾ ಕ್ಷೇತ್ರದ ಬದಲಾವಣೆಗಳ ಬಗ್ಗೆ ನಿಮ್ಮಅನಿಸಿಕೆ ಏನು?

ಎಲ್ಲ ರೀತಿಯ ಸಿನಿಮಾಗಳು ಬರಲಿ. ಯಾಕೆಂದರೆ, ಪ್ರೇಕ್ಷಕ ಎಲ್ಲವನ್ನೂ ನೋಡುತ್ತಿದ್ದಾನೆ. ಆದರೆ, ಕನ್ನಡದಲ್ಲಿ ಈ ಹಿಂದೆ ಅತ್ಯುನ್ನತ ಪರಂಪರೆಯೊಂದಿತ್ತು. ಅದನ್ನು ಮುಂದುವರಿಸಿಕೊಂಡು ಹೋಗಬೇಕೆನ್ನುವ ಆಸೆ ನನ್ನದು. ಆ ಪರಂಪರೆಯನ್ನು ಮುಂದುವರಿಸಬೇಕೆಂಬ ತುಡಿತ ನನಗಿದೆ. ಅದಕ್ಕೆ ಲಕ್ಷ್ಮಿನಾರಾಯಣ, ಪುಟ್ಟಣ್ಣ, ಪಂತುಲು, ಕುರಾಸೀ ಅವರೇ ನನಗೆ ಆದರ್ಶ.

Leave a Reply

Your email address will not be published. Required fields are marked *

Back To Top