More

    ಸಜನ್​ ಪೂವಯ್ಯ ಅವರ ಅಂಕಣ| ಮುಂದಿನ ಸಾಂಕ್ರಾಮಿಕತೆ ತಡೆಯುವ ಬಗೆ…

    ಸಜನ್​ ಪೂವಯ್ಯ ಅವರ ಅಂಕಣ| ಮುಂದಿನ ಸಾಂಕ್ರಾಮಿಕತೆ ತಡೆಯುವ ಬಗೆ...

    ಮನೆಯಿಡಲು ಸಹ್ಯವಾದ ಗ್ರಹವಿರದಿರೆ ನಿಮಗೆ ಮನೆಯಿದ್ದೇನು ಪ್ರಯೋಜನ?

    | ಹೆನ್ರಿ ಡೇವಿಡ್ ಥೋರೊ ಅಮೆರಿಕನ್ ಕವಿ, ತತ್ತ್ವಶಾಸ್ತ್ರಜ್ಞ

    ಕರೊನಾ ಎರಡನೇ ಅಲೆಯ ಸಂಕಷ್ಟದಲ್ಲಿ ಕಂಠಮಟ್ಟ ಮುಳುಗಿರುವ ನಮ್ಮಲ್ಲಿ ಯಾರಿಗೂ ಮುಂದಿನ ಸಾಂಕ್ರಾಮಿಕತೆ ಬಗ್ಗೆ ಮಾತನಾಡುವ ಆಸಕ್ತಿಯೇ ಉಳಿದಿಲ್ಲ. ಆದರೆ ವಾಸ್ತವಾಂಶ ನಮ್ಮ ಮುಖಕ್ಕೇ ರಾಚುವಂತಿದೆ. ಈ ಬಗ್ಗೆ ಚರ್ಚೆ ಹಾಗೂ ಮುಂದಿನ ಕಾರ್ಯಾಚರಣೆಯನ್ನು ಆದಷ್ಟು ಬೇಗ ಶುರು ಮಾಡಬೇಕಿದೆ. ಕೋವಿಡ್-19 ಒಂದೇ ಪ್ರತ್ಯೇಕವಾದ ವಿದ್ಯಮಾನವಲ್ಲ ಹಾಗೂ ಮನುಕುಲ ಎದುರಿಸುತ್ತಿರುವ ಪ್ರಸಕ್ತ ಸಮರ ಅದರೊಂದಿಗೇ ಮುಗಿಯುವುದಿಲ್ಲ ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ. ಅರ್ಧ ಶತಮಾನದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ಸೋಂಕು ವ್ಯಾಧಿಗಳು ಮನುಕುಲವನ್ನು ಹೆಚ್ಚಿನ ಪ್ರಮಾಣದಲ್ಲಿ ಈಗೀಗ ಕಾಡಿಸುತ್ತಿವೆ. ಕಳೆದ 20 ವರ್ಷಗಳಲ್ಲಿ ಸಾರ್ಸ್ (2003), ಎಚ್1ಎನ್1 (2009), ಎಬೊಲಾ (2014), ಎಂಇಆರ್​ಎಸ್ (2015), ಝಿಕಾ (2015) ಮತ್ತು ಈಗ ಕೋವಿಡ್-19 ವ್ಯಾಧಿ ಜಗತ್ತಿನಾದ್ಯಂತ ಜನಸಮುದಾಯವನ್ನು ಪೀಡಿಸುತ್ತಿದೆ.

    2015ರ ಟೆಡ್ ಟಾಕ್​ನಲ್ಲಿ ಮಾತನಾಡಿದ ಬಿಲಿಯಾಧಿಪತಿ ಉದ್ಯಮಿ ಬಿಲ್ ಗೇಟ್ಸ್, ‘ನಾವು ಮುಂದಿನ ಸಾಂಕ್ರಾಮಿಕತೆಗೆ ಸಿದ್ಧವಾಗಿಲ್ಲ’ ಎಂದು ನುಡಿದಿದ್ದರು. ಕಳೆದ ಎರಡು ವರ್ಷಗಳಲ್ಲಿ ಗೇಟ್ಸ್ ಹೇಳಿದ್ದು ಎಷ್ಟು ಸರಿ ಎನ್ನುವುದು ಸ್ಪಟಿಕದಷ್ಟೇ ಸ್ಪಷ್ಟವಾಗಿದೆ. ಹಿಂದಿನ ಸೋಂಕು ರೋಗಗಳಿಗಿಂತ ಮುಂದಿನದ್ದು ಇನ್ನೂ ಭಯಾನಕವಾಗಿರಲಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದರು. ಎಬೊಲಾವನ್ನು ಹೇಗೆ ನಿಯಂತ್ರಿಸಲಾಯಿತು ಎಂದು ಗೇಟ್ಸ್ ವಿಶ್ಲೇಷಿಸಿದ್ದರು. ‘ಎಬೊಲಾ ಪೀಡಿತರಾದವರು ಸಾಮಾನ್ಯವಾಗಿ ತುಂಬ ಬೇಗನೆ ಹಾಸಿಗೆ ಹಿಡಿದಿದ್ದರು. ಹೀಗಾಗಿ ಅವರಿಗೆ ಓಡಾಡಲು ಸಾಧ್ಯವಾಗಲಿಲ್ಲ; ಹಾಗಾಗಿ ಸೋಂಕು ಇತರರಿಗೆ ಹರಡಲಿಲ್ಲ. ಮುಂದಿನ ವೈರಸ್​ಗಳ ವಿಚಾರದಲ್ಲಿ ಹೀಗೆಯೇ ಆಗುತ್ತದೆ ಎನ್ನಲಾಗುವುದಿಲ್ಲ. ಸೋಂಕಿತರು ಆರಂಭದಲ್ಲಿ ಗುಣಮುಖರಾಗಿ ವಿಮಾನದಲ್ಲೂ ಸಂಚರಿಸಬಲ್ಲರು ಹಾಗೂ ಮಾರುಕಟ್ಟೆಗಳಿಗೂ ಹೋಗಬಲ್ಲರು’ ಎಂದು ಅವರು ಹೇಳಿದ್ದರು. ಆ ಕಾರಣದಿಂದಲೇ ಕೋವಿಡ್-19 ಹೆಚ್ಚು ಸೋಂಕುಕಾರಕವಾಗಿದೆ ಎನ್ನುವುದು ನಮಗೆಲ್ಲ ಈಗ ತಿಳಿದಿರುವ ಸಂಗತಿಯಾಗಿದೆ.

    ಪ್ರಾಣಿಜನ್ಯ ವ್ಯಾಧಿ: ಈ ಮೇಲೆ ನಮೂದಿಸಿದ ಎಲ್ಲ ರೋಗಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದ್ದಾಗಿದೆ. ಇದನ್ನು ಝುೂನಾಟಿಕ್ ವೈರಾಣು (ಪ್ಯಾಥೋಜನ್ಸ್) ಎನ್ನುತ್ತಾರೆ. ಪತ್ತೆಯಾಗದ 1.7 ಮಿಲಿಯ ಝುೂನಾಟಿಕ್ ಪ್ಯಾಥೋಜನ್ಸ್ ಇವೆ ಎನ್ನಲಾಗಿದೆ. ಆ ಪೈಕಿ 0.6 ರಿಂದ 0.8 ಮಿಲಿಯ ಪ್ಯಾಥೋಜನ್​ಗಳು ಮನುಷ್ಯರಿಗೆ ಸೋಂಕು ಹರಡಬಲ್ಲವು. ಕೆಲವು ಝುೂನಾಟಿಕ್ ಪ್ಯಾಥೋಜನ್​ಗಳು ಸೋಂಕಿತ ಪ್ರಾಣಿ ಸಂಕುಲದ ಶೇಕಡ 70ರಷ್ಟನ್ನು ಸಾಯಿಸಬಲ್ಲವು. ಹೀಗಾಗಿ, ಮುಂದಿನ ಸಾಂಕ್ರಾಮಿಕತೆ ಮನುಕುಲಕ್ಕೆ ಶುಭಶಕುನವಾಗದಿರಬಹುದು.

    ಕಳೆದ 20 ವರ್ಷಗಳಲ್ಲಿ ಝುೂನಾಟಿಕ್ ವ್ಯಾಧಿಗಳು ಹೆಚ್ಚಲು ಕಾರಣವಾದರೂ ಏನು? ಮಾನವರ ಹಲವು ಚಟುವಟಿಕೆ-ಆಚರಣೆಗಳು ಮನುಷ್ಯ ಹಾಗೂ ಪ್ರಾಣಿಗಳು ಸಮೀಪಕ್ಕೆ ಬರುವಂತೆ ಮಾಡಿವೆ. ಹೀಗಾಗಿ ರೋಗಕಾರಕ ವೈರಸ್​ಗಳು ಒಂದು ಪ್ರಭೇದದಿಂದ ಇನ್ನೊಂದಕ್ಕೆ ಸುಲಭವಾಗಿ ಜಿಗಿಯಲು ಸಾಧ್ಯವಾಗಿದೆ. ವನ್ಯಪ್ರಾಣಿಗಳು ಅವಾಗಿಯೇ ಸಾಮಾನ್ಯವಾಗಿ ಹೋಗದ ಜಾಗಗಳಿಗೆ ಮನುಷ್ಯರು ಅವನ್ನು ತೆಗೆದುಕೊಂಡು ಹೋಗುವುದು ಅಥವಾ ಅವುಗಳ ವಾಸಸ್ಥಾನಕ್ಕೆ ಮಾನವರ ಅತಿಕ್ರಮಣದಿಂದಾಗಿ ಹೀಗೆ ಆಗಲು ಸಾಧ್ಯವಿದೆ.

    ಮೊದಲಿನ ಪ್ರಕ್ರಿಯೆಗೆ ವನ್ಯಪ್ರಾಣಿಗಳ ವ್ಯಾಪಾರವನ್ನು ಉದಾಹರಣೆಯಾಗಿ ನೀಡಬಹುದು. ಕೋವಿಡ್-19 ಮತ್ತು ಸಾರ್ಸ್ ವೈರಸ್ ಮೊದಲಿಗೆ ಹುಟ್ಟಿಕೊಂಡ ಚೀನಾದ ಮಾಂಸ ಮಾರುಕಟ್ಟೆಯೇ ಇದಕ್ಕೆ ಉದಾಹರಣೆ. ವನ್ಯ ಪ್ರಾಣಿಗಳ ವಹಿವಾಟಿನ ವೇಳೆ ಒಂದು ಜಾತಿಯ ಪ್ರಾಣಿಗಳು ಇನ್ನೊಂದು ಜಾತಿಯ ಪ್ರಾಣಿಗಳೊಂದಿಗೆ ಇಕ್ಕಟ್ಟಾದ ಸ್ಥಳದಲ್ಲಿ ಇರಬೇಕಾಗಿ ಬಂದು ಸೋಂಕು ಸ್ಪೋಟಗೊಳ್ಳುವ ಅಪಾಯ ಹೆಚ್ಚಾಗುತ್ತದೆ. ಆದರೆ, ಅಭಿವೃದ್ಧಿಶೀಲ ದೇಶಗಳಲ್ಲಿ ಮಾಂಸ ಮಾರುಕಟ್ಟೆಗಳು ಮಿಲಿಯಾಂತರ ಜನರಿಗೆ ತಾಜಾ ಆಹಾರ ಉತ್ಪಾದಿಸುವ ಏಕೈಕ ಮೂಲವಾಗಿರುವುದರಿಂದ ಈ ಸಮಸ್ಯೆಯನ್ನು ನಿಭಾಯಿಸುವುದು ತುಂಬ ಸಂಕೀರ್ಣ ಕೆಲಸವಾಗಿದೆ. ಮಾಂಸ ಮಾರುಕಟ್ಟೆಗಳನ್ನು ನಿಷೇಧಿಸಿದರೆ ಕಾಳದಂಧೆ ಶುರುವಾಗಬಹುದು. 2000ರ ಆರಂಭದಲ್ಲಿ ಸಾರ್ಸ್ ಸಾಂಕ್ರಾಮಿಕ ನಿಯಂತ್ರಿಸಲು ಚೀನಾ ಪ್ರಯತ್ನಿಸಿದಾಗ ಆಗಿದ್ದೇ ಅದು.

    ಫ್ಯಾಕ್ಟರಿ ಕೃಷಿಯು ಪ್ರಾಣಿಜನ್ಯ ರೋಗಗಳ ಇನ್ನೊಂದು ಪ್ರಮುಖ ಕಾರಣವಾಗಿದೆ. ಭಾರತ ಮತ್ತು ಜಗತ್ತಿನಾದ್ಯಂತ, ಮಾಂಸಕ್ಕಾಗಿ ಸಾಕುವ ಕೋಳಿ ಪೈಕಿ ಶೇಕಡ 90ಕ್ಕಿಂತ ಹೆಚ್ಚಿನದನ್ನು ಕೈಗಾರಿಕೀಕೃತ ಫ್ಯಾಕ್ಟರಿ ಫಾರ್ವಿುಂಗ್ ಮೂಲಕ ಬೆಳೆಸಲಾಗುತ್ತದೆ. ಸಾಗಾಟದ ವೇಳೆ ದೊಡ್ಡ ಸಂಖ್ಯೆಯ ಕೋಳಿಗಳು ಒಟ್ಟಿಗೆ ಒಂದೇ ಕಡೆ ಇರುವುದರಿಂದ ವೈರಸ್​ಗಳು ಸುಲಭವಾಗಿ ಹರಡಬಲ್ಲದು. ಫ್ಯಾಕ್ಟರಿ ಫಾಮರ್್​ಗಳಲ್ಲಿ ಬೆಳೆಸುವ ಕೋಳಿಗಳು ಅನುವಂಶೀಯವಾಗಿ ಒಂದೇ ಬಗೆಯದ್ದಾಗಿರುತ್ತದೆ. ಅವುಗಳಲ್ಲಿ ಒಮ್ಮೆ ಸೋಂಕು ಸ್ಪೋಟಗೊಂಡಿತೆಂದರೆ ಇಡೀ ಸಮೂಹ ಸೋಂಕಿಗೆ ತುತ್ತಾಗುವ ಸಂಭಾವ್ಯತೆ ಹೆಚ್ಚಿರುತ್ತದೆ.

    ಅರಣ್ಯ ನಾಶದ ಪರಿಣಾಮ: ಪ್ರಾಣಿಜನ್ಯ ರೋಗಗಳು ಮಾನವರಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಲು ವಿಶ್ವದಾದ್ಯಂತ ಭಾರಿ ಪ್ರಮಾಣದ ಅರಣ್ಯ ನಾಶವೇ ಪ್ರಮುಖ ಕಾರಣವಾಗಿದೆ. ಹಿಮದಿಂದ ಆವೃತವಲ್ಲದ ಭೂಪ್ರದೇಶದ ಶೇಕಡ 75 ಭಾಗವನ್ನು ಮಾನವ ಈಗಾಗಲೇ ತನ್ನ ವಾಸ್ತವ್ಯದ ಚಟುವಟಿಕೆಗಳಿಗೆ ಪರಿವರ್ತಿಸಿದ್ದಾನೆ. ಈ ಪ್ರಮಾಣ ತ್ವರಿತವಾಗಿ ಇನ್ನೂ ಹೆಚ್ಚಾಗುತ್ತಿದೆ. 1990ರ ನಂತರ ಜಗತ್ತಿನಲ್ಲಿ 410 ಮಿಲಿಯ ಹೆಕ್ಟೇರ್ ಅರಣ್ಯ ನಾಶವಾಗಿದೆ ಎಂದು ವಿಶ್ವ ಅರಣ್ಯ ವರದಿ ಹೇಳಿದೆ. ಉಳಿದ 4.06 ಮಿಲಿಯ ಹೆಕ್ಟೇರ್​ನಲ್ಲಿ ಪ್ರತಿ ವರ್ಷ 10 ಮಿಲಿಯ ಹೆಕ್ಟೇರ್ ನಾಶವಾಗುತ್ತಿದೆ. ಅಂದರೆ ಪ್ರತಿ ದಿನ 35,000 ಫುಟ್ಬಾಲ್ ಮೈದಾನದಷ್ಟು ವಿಸ್ತಾರದ ಕಾಡು ಬೋಳಾಗುತ್ತಿದೆ.

    ಭಾರತದಲ್ಲಿ ಅರಣ್ಯ: 2019ರ ಭಾರತ ಅರಣ್ಯ ಸಮೀಕ್ಷೆ ಪ್ರಕಾರ, ದೇಶದ ಶೇಕಡ 21.59 ಭೂಭಾಗ ಅರಣ್ಯ ಪ್ರದೇಶವಾಗಿದೆ. ಇದು ನಿಗದಿತ ಶೇಕಡ 33ಕ್ಕಿಂತ ಕಡಿಮೆಯಾಗಿದೆ. ಅರಣ್ಯ ನಾಶದ ಪ್ರಮಾಣ ಜಾಸ್ತಿಯಾದಂತೆಲ್ಲ ಸಹಜವಾಗಿಯೇ ಕಾಡುಪ್ರಾಣಿಗಳು ಹೆಚ್ಚೆಚ್ಚಾಗಿ ಮಾನವ ಸಂಪರ್ಕಕ್ಕೆ ಬರುತ್ತವೆ. ಇದರಿಂದಾಗಿ ರೋಗಕಾರಕ ವೈರಸ್​ಗಳು ಪ್ರಾಣಿಗಳಿಂದ ಮಾನವರಿಗೆ ಜಿಗಿಯುವ ಪ್ರಮಾಣ ಏರಿಕೆಯಾಗುತ್ತದೆ. ಕಳೆದ 20 ವರ್ಷಗಳಲ್ಲಿನ ಸೋಂಕು ಆಸ್ಪೋಟಗಳಲ್ಲಿ ಶೇಕಡ 31ರಷ್ಟಕ್ಕೆ ಅರಣ್ಯ ನಾಶವೇ ಕಾರಣ ಎಂದು ವಿಶ್ವ ಆರ್ಥಿಕ ವೇದಿಕೆಯ ವರದಿಯೊಂದು ವಿಶ್ಲೇಷಿಸಿದೆ. ಜಿನಿಯಾದಲ್ಲಿ ಗಣಿಗಾರಿಕೆ ಮತ್ತು ಮರಮಟ್ಟು ವ್ಯವಹಾರದ ಹೆಚ್ಚಳದಿಂದಾಗಿ ಮನುಷ್ಯರು ಬಾವಲಿಗಳ ನಿಕಟ ಸಂಪರ್ಕಕ್ಕೆ ಬರುವುದು ಹೆಚ್ಚಿತು. ಎಬೊಲಾ ಸೋಂಕು ತಗಲಿದ ಮೊದಲ ವ್ಯಕ್ತಿ ಎಬೊಲಾ-ಸೋಂಕಿತ ಬಾವಲಿಗಳಿದ್ದ ಮರದ ಕೆಳಗೆ ಆಡುತ್ತಿದ್ದಾಗ ಸೋಂಕಿತನಾಗಿದ್ದು ಗಮನಾರ್ಹ.

    ಪ್ರಾಣಿಜನ್ಯ ವೈರಸ್​ಗಳು ವ್ಯಾಪಿಸಲು ಅನುಕೂಲವಾಗುವಂಥ ಇಂಥ ಸನ್ನಿವೇಶವನ್ನು ತಡೆಯಲು, ಇಲ್ಲವೇ ಕನಿಷ್ಠ ಪಕ್ಷ ಕಡಿಮೆ ಮಾಡಲು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕು. ಇದೊಂದು ಬೃಹತ್ ಸವಾಲು. ಸಾಂಕ್ರಾಮಿಕತೆ ನಿವಾರಣೆಗಾಗಿ ಅರಣ್ಯನಾಶ ತಡೆಯುವುದು ಹಾಗೂ ವನ್ಯಪ್ರಾಣಿ ವ್ಯಾಪಾರ ಕಡಿಮೆ ಮಾಡುವುದರಿಂದಲೇ ವರ್ಷಕ್ಕೆ 22ರಿಂದ 31 ಬಿಲಿಯ ಡಾಲರ್ ನಷ್ಟವಾಗುತ್ತದೆ ಎಂದು ಲೆಕ್ಕ ಹಾಕಲಾಗಿದೆ. ಸಾಮಾನ್ಯವಾಗಿ ಒಂದು ಸಾಂಕ್ರಾಮಿಕತೆ ಅಂತ್ಯಗೊಂಡ ಮೇಲೆ ಎಲ್ಲ ಮಾನವ ಚಟುವಟಿಕೆಗಳು ಮೊದಲ ಸ್ಥಿತಿಗೇ ಮರಳುತ್ತವೆ. ಮುಂದಿನ ಸಾಂಕ್ರಾಮಿಕತೆಯ ಸ್ಫೋಟ ತಡೆಯಲು ಅಗತ್ಯವಾದ ಸಾಮಾಜಿಕ ಬದಲಾವಣೆಯೇ ಕಂಡುಬರುವುದಿಲ್ಲ ಎನ್ನುವುದು ಖೇದದ ಸಂಗತಿ.

    ಈ ಧೋರಣೆಯನ್ನು ಆದಷ್ಟು ಬೇಗ ಬದಲಾಯಿಸಿಕೊಳ್ಳಬೇಕು. ಸಾಂಕ್ರಾಮಿಕತೆ ತಡೆಯಲು ಕೈಗೊಳ್ಳುವ ಕ್ರಮಗಳಿಗೆ ತಗಲುವ ಖರ್ಚುವೆಚ್ಚ ವಾಸ್ತವವಾಗಿ ಸಾಂಕ್ರಾಮಿಕತೆಯಿಂದ ಆಗುವ ಅಪಾರ ನಷ್ಟಕ್ಕೆ ಹೋಲಿಸಿದರೆ ತೀರಾ ನಗಣ್ಯವಾಗಿರುತ್ತದೆ ಎಂದು ಬಿಲ್ ಗೇಟ್ಸ್ ಹೇಳಿದ್ದು ಸಾವಿರ ಪಾಲು ಸರಿಯಾಗಿದೆ. ಭವಿಷ್ಯದ ಇನ್ನೊಂದು ಸಾಂಕ್ರಾಮಿಕತೆಯಿಂದ ಜಾಗತಿಕ ಆರ್ಥಿಕತೆಗೆ 3 ಟ್ರಿಲಿಯ ಡಾಲರ್ ನಷ್ಟ ಸಂಭವಿಸಬಹುದೆಂದು ಗೇಟ್ಸ್ ಭವಿಷ್ಯ ಹೇಳಿದ್ದರು. ಕೋವಿಡ್-19ರಿಂದ ಜಗತ್ತಿನ ಉತ್ಪಾದನೆ 10 ಟ್ರಿಲಿಯದಷ್ಟು ಕುಸಿದಿದೆ. ಅದರೊಟ್ಟಿಗೆ ಅಪಾರ ಪ್ರಮಾಣದ ಜೀವಹಾನಿಯೂ ಆಗಿದೆ. ಸಂಕಟವೂ ವರ್ಣಿಸಲಸದಳವಾಗಿದೆ. ಮುಂದಿನ ಸಾಂಕ್ರಾಮಿಕತೆ ಇದಕ್ಕಿಂತ ಇನ್ನೂ ಘೋರವಾಗಿರಬಹುದು.

    (ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

    ರಾಜಧಾನಿಯಲ್ಲಿ ನಡೆಯಿತು ಭೀಕರ ಆತ್ಮಹತ್ಯೆ; 15 ಅಂತಸ್ತುಗಳ ಕಟ್ಟಡದಿಂದ ಕೆಳಕ್ಕೆ ಹಾರಿ ಸಾವು!

    ಬರಲಿದೆ ಮತ್ತೊಂದು ಭೀಕರ ರೋಗ!: ಕರೊನಾ ಪೂರ್ತಿ ಹೋಗಲು ವರ್ಷಗಳೆಷ್ಟು ಬೇಕು ಗೊತ್ತಾ?; ಇಲ್ಲಿದೆ ಭವಿಷ್ಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts