More

    ಸಂದರ್ಶನಕ್ಕೆ ಹೊರಟಿದ್ದೀರಾ…?; ಅದಕ್ಕಿಂತಲೂ ಪೂರ್ವದಲ್ಲಿ ಕೆಲವೊಂದು ತಯಾರಿ ಮಾಡಿಕೊಳ್ಳಿ

    ಯಾವುದೇ ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹೊರಡುವ ಮುನ್ನ ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳುವುದು ಅತಿ ಮುಖ್ಯ. ಅಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ನಂತರದ ಮಾತು. ಅದಕ್ಕಿಂತಲೂ ಪೂರ್ವದಲ್ಲಿ ಕೆಲವೊಂದು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಅವು ಏನೇನು? ಇಲ್ಲಿದೆ ಮಾಹಿತಿ.

    ಕಂಪನಿಯ/ಸಂಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಿ: ಸಂದರ್ಶನದ ಸಮಯದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ನೀವು ಮುಂಚಿತವಾಗಿ ಸಿದ್ಧರಾಗಿರಬೇಕು. ನೀವು ಹೋಗುತ್ತಿರುವ ಹುದ್ದೆಗೆ ತಕ್ಕಂತೆ ನಿಮ್ಮಲ್ಲಿ ಇರುವ ಎಲ್ಲಾ ದಾಖಲೆಗಳನ್ನು ನೀವು ಕೊಂಡೊಯ್ಯಬೇಕು. ಆ ಸಂಸ್ಥೆಯ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿರಬೇಕು. ಏಕೆಂದರೆ ನೀವು ಅವರ ವ್ಯವಹಾರಗಳನ್ನು ನಿರ್ವಹಿಸಲು ಶಕ್ಯರಿದ್ದೀರಿ ಎಂದು ಸಂದರ್ಶಕರಿಗೆ ಅನ್ನಿಸುವಂತಿರಬೇಕು. ಎಲ್ಲಾ ಸಂದರ್ಭಗಳಲ್ಲಿಯೂ ಆ ಸಂಸ್ಥೆ/ ಕಂಪನಿ ಬಗ್ಗೆ ನಿಮಗೆ ತಿಳಿದೇ ಇರಬೇಕೆಂದೇನೂ ಇಲ್ಲ. ಆದ್ದರಿಂದ ನೀವು ಮೊದಲು ಮಾಡಬೇಕಿರುವ ಕೆಲಸ ಕಂಪನಿಯ ವೆಬ್​ಸೈಟ್ ಇದ್ದಲ್ಲಿ ಅದನ್ನು ಪರಿಶೀಲಿಸಿ. ಜತೆಗೆ, ಕಂಪನಿಯ ಪತ್ರಿಕಾ ಪ್ರಕಟಣೆ, ಕಂಪನಿಯ ಲಿಂಕ್ಡ್​ಇನ್ ಪುಟ ಹಾಗೂ ಪ್ರತಿಸ್ಪರ್ಧಿಗಳ ಬಗ್ಗೆ ಮಾಹಿತಿಯನ್ನೂ ಚೆನ್ನಾಗಿ ಸ್ಟಡಿ ಮಾಡಿಕೊಳ್ಳಿ.

    ಕೇಳಬಹುದಾದ ಪ್ರಶ್ನೆಗಳ ಬಗ್ಗೆ ಯೋಚಿಸಿ: ಸಂದರ್ಶಕರು ಕೇಳಬಹುದಾದ ಪ್ರಶ್ನೆಗಳ ಬಗ್ಗೆ ಮೊದಲೇ ಯೋಚಿಸುವುದು ಬಹಳ ಮುಖ್ಯ. ಸಾಮಾನ್ಯವಾಗಿ ಯಾವ ಪ್ರಶ್ನೆಗಳನ್ನು ಕೇಳಬಹುದು ಎಂಬ ಅರಿವು ನಿಮಗಿರಬೇಕು. ಒಂದು ವೇಳೆ ಅದೇ ಸಂಸ್ಥೆ/ಕಂಪನಿಯಲ್ಲಿ ನಿಮ್ಮ ಪರಿಚಯಸ್ಥರು ಇದ್ದಲ್ಲಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿ. ಇದರಿಂದಾಗಿ ನೀವು ಸ್ಪಷ್ಟವಾಗಿ ಉತ್ತರಿಸಲು ಶಕ್ಯರಾಗುತ್ತೀರಿ.

    ಉದಾಹರಣೆಗೆ:- ನಿಮ್ಮ ಬಗ್ಗೆ ಹೇಳಬಲ್ಲಿರಾ?, ನಮ್ಮ ಕಂಪನಿಯ ಬಗ್ಗೆ ನಿಮಗೆ ಏನು ಗೊತ್ತು?, ನಿಮ್ಮ ಪ್ರಸ್ತುತ ಕೆಲಸವನ್ನು ಬಿಡುವ ಬಗ್ಗೆ ಏಕೆ ಯೋಚಿಸುತ್ತಿದ್ದೀರಿ?, ಈ ಕೆಲಸದ ಬಗ್ಗೆ ನಿಮಗೆ ಏನು ಆಸಕ್ತಿ ಇದೆ?, ನಿಮ್ಮ ಕೆಲಸದ ಶೈಲಿಯನ್ನು ವಿವರಿಸಬಹುದೇ?, ನಿಮ್ಮ ದೊಡ್ಡ ಶಕ್ತಿ ಎಂದು ನೀವು ಏನು ಪರಿಗಣಿಸುತ್ತೀರಿ?, ನಿಮ್ಮ ದೌರ್ಬಲ್ಯ ಏನು ಎಂದು ನೀವು ಪರಿಗಣಿಸುತ್ತೀರಿ?, ನಿಮ್ಮ ಸಂಬಳದ ಅವಶ್ಯಕತೆಗಳು ಯಾವುವು? ಇತ್ಯಾದಿ.

    ಜಾಲತಾಣಗಳ ಮೇಲೆ ನಿಗಾ ಇರಲಿ: ನಿರೀಕ್ಷಿತ ಉದ್ಯೋಗಿಗಳ ಮಾಹಿತಿ ಮತ್ತು ಹಿನ್ನೆಲೆ ಪಡೆಯಲು ಸಂಸ್ಥೆ/ ಕಂಪನಿಯ ಮುಖ್ಯಸ್ಥರು ಸಾಮಾನ್ಯವಾಗಿ ಫೇಸ್​ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಸೈಟ್​ಗಳನ್ನು ಪರಿಶೀಲಿಸುತ್ತಾರೆ. ಆದ್ದರಿಂದ ನಿಮ್ಮ ಆನ್​ಲೈನ್ ಪೋಸ್ಟಿಂಗ್​ಗಳ ಮೇಲೆ ನಿಗಾ ವಹಿಸಿ. ನೀವು ಹಾಕಿರುವ ಚಿತ್ರಗಳ ಬಗ್ಗೆಯೂ ಜಾಗ್ರತೆ ಇರಲಿ. ಯಾವುದೋ ಸಂದರ್ಭದಲ್ಲಿ ಜೋಕ್​ಗಾಗಿ ಹಾಕಿರುವ ಅಥವಾ ಇನ್ನಾವುದೋ ಸಿಟ್ಟಿನ ಸಂದರ್ಭದಲ್ಲಿ ಹಾಕಿರುವ ಪೋಸ್ಟ್, ಚಿತ್ರಗಳು ಮುಜುಗರ ತರುವಂತಿದ್ದರೆ ಅವುಗಳನ್ನು ಕೂಡಲೇ ಡಿಲೀಟ್ ಮಾಡಿ. ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುವ ಪೋಸ್ಟ್​ಗಳಷ್ಟೇ ಇರಲಿ.

    ಸೂಕ್ತ ಉಡುಗೆ: ಸಂದರ್ಶನಕ್ಕಾಗಿ ನೀವು ಸೂಕ್ತವಾದ ಹಾಗೂ ವೃತ್ತಿಪರವಾದಂಥ ಉಡುಗೆಗಳನ್ನು ತೊಟ್ಟುಕೊಳ್ಳಿ. ಅ ಕಚೇರಿಯಲ್ಲಿ ಏನಾದರೂ ಡ್ರೆಸ್​ಕೋಡ್ ಇದ್ದರೆ ಅವುಗಳ ಬಗ್ಗೆ ಮೊದಲೇ ತಿಳಿದುಕೊಂಡು ಅದಕ್ಕೆ ತಕ್ಕಂತ, ಒಳ್ಳೆಯ ಅಭಿಪ್ರಾಯ ಮೂಡಿಸುವಂಥ ಡ್ರೆಸ್​ಗಳನ್ನು ಹಾಕಿ ಸಂದರ್ಶನಕ್ಕೆ ಹಾಜರಾಗಿ. ಇಲ್ಲದೇ ಹೋದರೆ ಸಂದರ್ಶಕರಿಗೆ ನಿಮ್ಮ ಮೇಲೆ ಕೆಟ್ಟ ಅಭಿಪ್ರಾಯ ಮೂಡಬಹುದು.

    ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ: ನೀವು ಯಾವ ಹುದ್ದೆಗೆಂದು ಸಂದರ್ಶನಕ್ಕೆ ಹೋಗುತ್ತೀರೋ ಅವುಗಳ ಬಗ್ಗೆ ನಿಮ್ಮಲ್ಲಿ ಇರುವ ಎಲ್ಲಾ ಅಗತ್ಯ ದಾಖಲೆಗಳನ್ನು ಒಯ್ಯಿರಿ. ಇವುಗಳನ್ನು ಹೊರತುಪಡಿಸಿ, ಉದ್ಯೋಗಕ್ಕೆ ಬೇಕಾದ ದಾಖಲೆಗಳ ಹೊರತಾಗಿಯೂ ನೀವು ಏನಾದರೂ ಸಾಧನೆ ಮಾಡಿದ್ದರೆ ಅಥವಾ ಇತರ ಉತ್ತಮ ಚಟುವಟಿಕೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದಿದ್ದರೆ ಅವುಗಳ ದಾಖಲೆಗಳನ್ನೂ ಕೊಂಡೊಯ್ಯಿರಿ. ಯಾವ ಸಮಯದಲ್ಲಿ ಯಾವ ದಾಖಲೆಗಳು ಅಗತ್ಯ ಬೀಳುತ್ತವೆಯೋ ಹೇಳಲು ಬಾರದು. ಇಷ್ಟು ಪೂರ್ವ ತಯಾರಿ ಮಾಡಿಕೊಂಡರೆ ಸಂದರ್ಶನದ ಅತಿದೊಡ್ಡ ಘಟ್ಟ ಮುಗಿದಂತೆ. ಸಂದರ್ಶಕರು ಕೇಳುವ ಪ್ರಶ್ನೆಗಳಿಗೆ ನೀವು ನೀಡುವ ಉತ್ತರದ ಮೇಲೆ ಮುಂದಿನದ್ದು ನಿರ್ಧರಿತವಾಗುತ್ತದೆ.

    ಬೇಗನೆ ಆಗಮಿಸಿ ಮತ್ತು ಸಂದರ್ಶನಕ್ಕೆ ಸಿದ್ಧವಾಗಿರಿ

    ಸಮಯಕ್ಕೆ ಸರಿಯಾಗಿ ಸಂದರ್ಶನಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಿ. ಸಂದರ್ಶನಕ್ಕೆ ಕರೆಯುವ ಮುನ್ನ ನೀಡಿರುವ ಸೂಚನೆಗಳನ್ನು ಸರಿಯಾಗಿ ಓದಿಕೊಳ್ಳಿ. ಮಹಾನಗರಗಳಲ್ಲಾದರೆ ಟ್ರಾಫಿಕ್ ಕಿರಿಕಿರಿ ಯಾವುದೇ ಸಂದರ್ಭಗಳಲ್ಲಿ ಉದ್ಭವಿಸಬಹುದು. ಆದ್ದರಿಂದ ಸಾಕಷ್ಟು ವೇಳೆ ಇಟ್ಟು ಮನೆಯನ್ನು ಬಿಡಿ. ಸ್ವಲ್ಪ ಮುಂಚೆ ಹೋದರೆ ಯಾವುದೇ ತೊಂದರೆ ಇಲ್ಲ, ಆದರೆ ಟ್ರಾಫಿಕ್ ಟೆನ್ಷನ್ ಅಥವಾ ವಿಳಂಬದಿಂದ ನೀವು ಒತ್ತಡಕ್ಕೆ ಒಳಗಾಗಿ ಸಂದರ್ಶನವನ್ನು ಚೆನ್ನಾಗಿ ಮಾಡದೇ ಇರುವ ಸಾಧ್ಯತೆ ಇರುತ್ತದೆ. ನಿಮ್ಮ ಸೆಲ್​ಫೋನ್ ಸ್ವಿಚ್ ಆಫ್ ಮಾಡುವಂತೆ ಸಂದರ್ಶಕರು ಹೇಳುವ ಮುನ್ನವೇ ನೀವೇ ಮಾಡಿ.

    ಅಣಕು ಸಂದರ್ಶನ ನಡೆಸಿ

    ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಕುಳಿತು ಅಣಕು ಸಂದರ್ಶನ ಮಾಡಿ. ಇದು ನಿಮಗೆ ತುಂಬಾ ಸಹಾಯಕವಾಗುತ್ತದೆ ಜತೆಗೆ, ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಹಲವು ಸಂದರ್ಭಗಳಲ್ಲಿ ಸಂದರ್ಶಕರು ಕೇಳುವ ಪ್ರಶ್ನೆಗಳು ನಿಮಗೆ ಗೊತ್ತಿದ್ದರೂ ಆ ಕ್ಷಣದಲ್ಲಿ ಗಲಿಬಿಲಿಗೊಳಗಾಗಿ ಅಸ್ಪಷ್ಟ ಉತ್ತರ ನೀಡುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಅಣುಕು ಸಂದರ್ಶನ ಇದಕ್ಕೆ ತಕ್ಕಮಟ್ಟಿಗೆ ಪರಿಹಾರವಾದೀತು. ನಿಮ್ಮ ಉತ್ತರಗಳು, ನಿಮ್ಮ ದೈಹಿಕ ಭಾಷೆ ಮತ್ತು ನಿಮ್ಮ ಸನ್ನದ್ಧತೆಯ ಬಗ್ಗೆ ಪ್ರತಿಕ್ರಿಯೆ ಕೇಳಿ.

    | ವಿಜಯಕುಮಾರ್ ಎಸ್.ಅಂಟೀನ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts