ತುರಿಕೆಯ ತೊಂದರೆ ತಪ್ಪಿಸಿಕೊಳ್ಳುವುದು ಹೇಗೆ?

ವೈದ್ಯಕೀಯಭಾಷೆಯಲ್ಲಿ ಪ್ಯುರೈಟಸ್ ಎಂದು ಕರೆಯಲಾಗುವ ತುರಿಕೆಯ ಬಗೆಗೆ ತಿಳಿದುಕೊಳ್ಳೋಣ. ಬ್ಯಾಕ್ಟೀರಿಯಾ, ಫಂಗಸ್​ಗಳ ಸೋಂಕುಗಳು, ಯಾವುದಾದರೂ ಕೀಟಗಳ ಕಡಿತ, ಅಲರ್ಜಿ, ಸೋರಿಯಾಸಿಸ್, ಅಟೋಪಿಕ್ ಡರ್ಮಟೈಟಿಸ್, ಒಣಚರ್ಮ, ಸೂರ್ಯಾಘಾತ ಇನ್ನಿತರ ಚರ್ಮಸಂಬಂಧಿತ ಸಮಸ್ಯೆಗಳಿಂದಾಗಿ ತುರಿಕೆ ಆಗಿರಬಹುದು. ಕ್ಯಾಂಫರ್, ಮೆಂಥಾಲ್, ಫಿನಾಲ್, ಪ್ರಮೊಕ್ಸಿನ್, ಡೈಫಿನ್​ಹೈಡ್ರಮಿನ್ ಅಥವಾ ಬೆಂಝೋಕೈನ್ ಅಂಶವಿರುವ ಕ್ರೀಮ್ಳು ತುರಿಕೆಯನ್ನು ಕಡಿಮೆ ಮಾಡಲು ಹೆಚ್ಚು ಸಹಕರಿಸುತ್ತವೆ. ಕೆಲವು ಬಗೆಯ ತುರಿಕೆಗಳ ನಿವಾರಣೆಗೆ ಕಾರ್ಟಿಕೋಸ್ಟಿರೈಡ್ ಔಷಧಗಳನ್ನು ನೀಡಬೇಕಾಗುತ್ತದೆ.

ತುರಿಕೆ ಇರುವಾಗ ಸಾಧ್ಯವಾದಷ್ಟರ ಮಟ್ಟಿಗೆ ತುರಿಸಿಕೊಳ್ಳುವುದನ್ನು ತಡೆಯುವುದು ಅತಿ ಮುಖ್ಯ. ಜೋರಾಗಿ ತುರಿಸಿಕೊಂಡಾಗ ಅಲ್ಲಿ ಬ್ಯಾಕ್ಟೀರಿಯಾಗಳ ಚಟುವಟಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಜೊತೆಯಲ್ಲಿ ಗಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಮಾನಸಿಕ ಒತ್ತಡ, ಖಿನ್ನತೆಯೂ ತುರಿಕೆಗೆ ಕಾರಣವಾಗಬಹುದೆಂದು ಅನೇಕ ಸಂಶೋಧನೆಗಳು ಸ್ಪಷ್ಟಪಡಿಸುತ್ತವೆ. ಹೀಗಿದ್ದಾಗ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಪ್ರತಿನಿತ್ಯ ಯೋಗ, ಧ್ಯಾನ, ಪ್ರಾಣಾಯಾಮದಂತಹ ಉಪಾಯಗಳು ನಮ್ಮ ಕೈಹಿಡಿಯುತ್ತವೆ. ಸಾಮಾನ್ಯ ತುರಿಕೆಯಾದಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳುವ ಉಪಾಯಗಳನ್ನು ತಿಳಿಯೊಣ.

ತುರಿಕೆ ಆಗುತ್ತಿರುವ ಭಾಗವನ್ನು ಕಹಿಬೇವಿನ ಕಷಾಯದಿಂದ ಪದೇಪದೆ ತೊಳೆದುಕೊಳ್ಳುವುದರಿಂದ ತುರಿಕೆ ಕಡಿಮೆ ಮಾಡಿಕೊಳ್ಳಲು ಸಾಧ್ಯ. ತುರಿಕೆ ಆಗುತ್ತಿರುವ ಭಾಗದಲ್ಲಿ ಅರಿಶಿಣಪುಡಿ ಹಚ್ಚಿಕೊಳ್ಳುವುದರಿಂದ ತುರಿಕೆ ಕಡಿಮೆ ಆಗುತ್ತದೆ. ಐಸ್​ಪೀಸ್​ಗಳನ್ನು ತುರಿಕೆ ಆಗುತ್ತಿರುವ ಭಾಗಗಳಲ್ಲಿಟ್ಟುಕೊಂಡು ಮಸಾಜ್ ಮಾಡಿಕೊಳ್ಳುವುದರಿಂದ ತುರಿಕೆ ಕಡಿಮೆ ಆಗುವುದು. ನಿಂಬೆರಸವನ್ನು ಸೇರಿಸಿದ ನೀರಿನ ಮಿಶ್ರಣವನ್ನು ಹತ್ತಿಬಟ್ಟೆಯಲ್ಲದ್ದಿ ತುರಿಕೆ ಇರುವ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ತುರಿಕೆ ವೇಗವಾಗಿ ಕಡಿಮೆ ಆಗಲು ಸಾಧ್ಯ. ನೀರಿನೊಂದಿಗೆ ಕಲಸಿದ ಕಡಲೆಹಿಟ್ಟಿನ ಪೇಸ್ಟ್​ನ್ನು ತುರಿಕೆ ಇರುವ ಭಾಗಕ್ಕೆ ಹಚ್ಚಿ ಒಣಗಲು ಬಿಡಬೇಕು. ಒಣಗಿದ ನಂತರ ತೊಳೆದುಕೊಳ್ಳುವುದರಿಂದ ತುರಿಕೆ ಕಡಿಮೆ ಆಗುವುದು. ಎಕ್ಸಾ ್ಟ್ರ ವರ್ಜಿನ್ ಕೋಕೋನಟ್ ಆಯಿಲ್ ಹಚ್ಚಿಕೊಳ್ಳುವುದರಿಂದಲೂ ತುರಿಕೆ ಕಡಿಮೆ ಆಗುವುದು. ಸ್ವಲ್ಪ ಬೇಕಿಂಗ್ ಸೋಡಾ ಹಾಕಿದ ನೀರಿನಿಂದ ಸ್ನಾನ ಮಾಡಬಹುದು. ತುಳಸಿ ಎಲೆಗಳು, ಕಹಿಬೇವಿನ ಎಲೆಗಳು, ಮಾವಿನ ಎಲೆಗಳನ್ನು ಹಾಕಿದ ನೀರನ್ನು ಸ್ನಾನ ಮಾಡುವುದೂ ಬಹಳ ಉತ್ತಮ. ಇಲ್ಲವಾದಲ್ಲಿ ಈ ಎಲೆಗಳ ಕಷಾಯವನ್ನು ಸ್ನಾನದ ನೀರಿಗೆ ಸೇರಿಸಿ ಅದರಿಂದ ಸ್ನಾನ ಮಾಡಬಹುದು. ಅಲೋವೆರಾ ಜೆಲ್ ಹಚ್ಚಿಕೊಳ್ಳುವುದರಿಂದ ತುರಿಕೆ ಕಡಿಮೆ ಆಗುವುದು. ಸ್ವಲ್ಪ ಕಹಿಬೇವಿನ ಎಲೆಗಳು, ಕರಿಬೇವಿನ ಎಲೆಗಳು, ತುಳಸಿ ಎಲೆಗಳು ಹಾಗೂ ಕುಟ್ಟಿದ ಅರಿಶಿಣ ಇವನ್ನು ಸೇರಿಸಿ ಜಜ್ಜಿ ಗುಳಿಗೆರೂಪವನ್ನು ಮಾಡಿ ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 45 ದಿನಗಳ ಕಾಲ ಸೇವಿಸುವುದರಿಂದ ಯಾವುದೇ ರೀತಿಯ ತುರಿಕೆ ಇದ್ದರೂ ಕಡಿಮೆಯಾಗುವುದು.

Leave a Reply

Your email address will not be published. Required fields are marked *