ಹೈದರಾಬಾದ್: ಮಹಾಮಾರಿ ಕರೊನಾ ವೈರಸ್ನಿಂದ ತನ್ನ ಗ್ರಾಮವನ್ನು ರಕ್ಷಿಸಿಕೊಳ್ಳಲು ಕಳೆದ ಒಂದು ತಿಂಗಳಿಂದ ತೆಲಂಗಾಣದ ಯುವ ರೈತಮಹಿಳೆಯೊಬ್ಬಳು ಟೊಂಕಕಟ್ಟಿ ನಿಂತಿದ್ದಾರೆ.
23 ವರ್ಷದ ಅಖಿಲಾ ಯಾದವ್ ತೆಲಂಗಾಣದ ಯುವ ರೈತೆ. ಹೊರಗಿನವರು ಗ್ರಾಮಕ್ಕೆ ಬರುತ್ತಿದ್ದಾರೆ ಎಂಬ ದೂರುಗಳನ್ನು ಸ್ವೀಕರಿಸಿದ ಅಖಿಲಾ ಗ್ರಾಮದ ಪ್ರವೇಶ ದ್ವಾರದಲ್ಲಿ ನಿಂತು ಹೊರಗಿನವರು ಯಾರು ಗ್ರಾಮವನ್ನು ಪ್ರವೇಶಿಸದಂತೆ ತಡೆಯುತ್ತಿದ್ದಾರೆ.
ಇದನ್ನೂ ಓದಿ: ಸುಳ್ಳು ಹೇಳಿ ಬಾಯ್ಫ್ರೆಂಡ್ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?
ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲ ವ್ಯಾಪ್ತಿಯಲ್ಲಿ ಬರುವ ಮದನಪುರಂ ಗ್ರಾಮ ಪಂಚಾಯಿತಿ ಅಖಿಲಾ ಅವರ ಗ್ರಾಮವಾಗಿದೆ. ಈ ಗ್ರಾಮ ನೀರಾ ಇಳಿಸುವ ಕೇಂದ್ರವಾಗಿದೆ. ಹೀಗಾಗಿ ಲಾಕ್ಡೌನ್ನಿಂದ ಮದ್ಯ ಮಾರಾಟ ನಿಲ್ಲಿಸಿರುವುದರಿಂದ ನೀರಾಗಾಗಿ ಸೋಂಕಿನ ಭೀತಿಯಿಲ್ಲದೇ ಗ್ರಾಮಕ್ಕೆ ದಾಂಗುಡಿ ಇಡುತ್ತಿದ್ದರು. ಇದನ್ನು ತಡೆಯಲು ಅಖಿಲಾ ಗ್ರಾಮ ಪ್ರವೇಶ ದ್ವಾರದಲ್ಲಿ ಅಡ್ಡಗೋಡೆಯಾಗಿ ನಿಂತಿದ್ದಾರೆ.
ಅಖಿಲಾ ಅವರ ಕೆಲಸಕ್ಕೆ ತಂದೆ ಅಕ್ರಮ್ ಯಾದವ್ ಸಹ ಸಾಥ್ ನೀಡಿದ್ದು, ನಸುಕಿನಲ್ಲೇ ಸಮಯದಲ್ಲೇ ಗ್ರಾಮದ ಪ್ರವೇಶ ದ್ವಾರದ ಬಳಿ ಹೋಗಿ, ದಿನವಿಡಿ ಗ್ರಾಮವನ್ನು ಕಾಯುತ್ತಾರೆ.
ಈ ಬಗ್ಗೆ ಮಾತನಾಡಿರುವ ಅಖಿಲಾ, ಹೊರಗಿನವರನ್ನು ತಡೆಯುವುದು ನಿಜಕ್ಕೂ ಕಷ್ಟಕರವಾಗಿದೆ. ನೀರಾಗಾಗಿ ಹೈದರಾಬಾದ್ನಿಂದಲೂ ನಲ್ಗೊಂಡ ಬರುತ್ತಿದ್ದಾರೆ. ನೀರಾ ತಯಾರಿಸಬೇಡಿ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದೇವೆ. ಆದರೂ ಬೇರೆ ಗ್ರಾಮದ ಜನರು ನಿರಂತವಾಗಿ ಬರುತ್ತಿದ್ದಾರೆ. ಇದೀಗ ರಕ್ಷಣೆ ಮಾಡುತ್ತಿದ್ದರೂ ಕೆಲವು ಬೇರೆ ದಾರಿಯನ್ನು ಕಂಡುಕೊಂಡಿದ್ದಾರೆ. ಆದರೂ ಕೆಲವು ಮಾಹಿತಿಗಾರರನ್ನು ಇಟ್ಟಿದ್ದು, ಅವರ ಮಾಹಿತಿಯಂತೆ ಗ್ರಾಮ ಪ್ರವೇಶಿಸುವವರನ್ನು ಪತ್ತೆ ಹಚ್ಚಿ ಹೊರಗಡೆ ಹಾಕುತ್ತಿದ್ದೇವೆ. ನಾವು ತುಂಬಾ ಕಠಿಣವಾಗಿ ನಡೆದುಕೊಳ್ಳುತ್ತಿದ್ದೇವೆ ಎಂಬುದು ತಿಳಿದಿದೆ. ಆದರೂ ಇದು ಅವಶ್ಯಕ ಎಂದು ಅಖಿಲಾ ತಿಳಿಸಿದ್ದಾರೆ.
ಗ್ರಾಮದ ಪ್ರವೇಶ ದ್ವಾರದಲ್ಲಿ ತಾತ್ಕಾಲಿಕ ಬ್ಯಾರಿಕೇಡ್ ಅನ್ನು ಸ್ಥಾಪಿಸಲಾಗಿದ್ದು, ಅಖಿಲಾ ಮತ್ತು ಆಕೆಯ ತಂದೆ ನಿರಂತರವಾಗಿ ಗ್ರಾಮವನ್ನು ಕಾಯುತ್ತಿದ್ದಾರೆ. ತಿಂಡಿ ಹಾಗೂ ಊಟದ ಸಮಯದಲ್ಲಿ ಇಬ್ಬರು ಸ್ವಲ್ಪ ವಿರಾಮವನ್ನು ಪಡೆದುಕೊಳ್ಳುತ್ತಾರೆ. ಇವರ ಕಾರ್ಯಕ್ಕೆ ಇಡೀ ಊರಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ ಪಾಪಿ: ತಂದೆ, ತಾಯಿ, ಅಣ್ಣ, ಅತ್ತಿಗೆ, ಮಕ್ಕಳಿಬ್ಬರನ್ನು ಕೊಂದು ಪೊಲೀಸರಿಗೆ ಶರಣು
ವಿಶೇಷವೆಂದರೆ ಅಖಿಲಾ ಕಾರ್ಯಕ್ಕೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಅಖಿಲಾ ಹೆಸರು ಉಲ್ಲೇಖವಾಗಿದೆ. (ಏಜೆನ್ಸೀಸ್)