ಕಾಲೇಜಿನ ಕ್ರಷ್ ಎಷ್ಟು ಶಾಶ್ವತ

|ಬಿ.ಎನ್. ಧನಂಜಯಗೌಡ ಮೈಸೂರು

ಈಗಷ್ಟೇ ಎಸ್ಸೆಸ್ಸೆಲ್ಸಿ ಮುಗಿಸಿ ಕಾಲೇಜು ಮೆಟ್ಟಿಲು ಹತ್ತಿರುವ ಹದಿವಯಸ್ಸಿನ ಮೊಗ್ಗಿನ ಮನಸುಗಳೇ. ಈಗಾಗಲೇ ನಿಮ್ಮ ಸ್ಟೆ ೖಲ್ ಕೊಂಚ ಬದಲಾಗಿರಬೇಕು. ಯಾಕೆಂದರೆ, ನಾವೀಗ ಕಾಲೇಜು ಸ್ಟೂಡೆಂಟ್ ಅನ್ನುವ ಧಿಮಾಕು, ಹೆಮ್ಮೆ.

ಹೌದು. ಕಾಲೇಜು ಅಂದ ಕೂಡಲೇ ಯಾವುದೋ ಒಂದು ಸೆಳೆತ ನಿಮ್ಮಲ್ಲಿ ಸುಳಿದು ಬಿಡುತ್ತದೆ. ಕಾಲೇಜು ದಿನಗಳನ್ನು ಮರುಳಾಗುವ ದಿನಗಳು ಎಂದು ಭಾವಿಸುವವರೇ ಹೆಚ್ಚು.

ಈಗಾಗಲೇ ಕಾಲೇಜು ಆರಂಭವಾಗಿ ವಾರಗಳು ಕಳೆದಿವೆ. ತರಗತಿಯ ಆರಂಭದಲ್ಲಿದ್ದ ಮತ್ತೊಬ್ಬರ ಬಗೆಗಿನ ಕುತೂಹಲ ಅಷ್ಟಿಲ್ಲ. ಎಲ್ಲರೂ ಮೆಲ್ಲಗೆ ಆತ್ಮೀಯರಾಗುತ್ತಿದ್ದಾರೆ. ಬೇರೆ ತರಗತಿಯ ಹುಡುಗ/ಹುಡುಗಿಯರ ಬಗೆಗೆ ಸಣ್ಣಗೆ ಕಳ್ಳನೋಟ.

‘ಬಾ ಮಗಾ ಕ್ಯಾಂಟೀನಲ್ಲಿ ಕಾಫಿ ಕುಡಿಯೋಣ’ ಎಂದು ಹೋಗಿ, ಕ್ಯಾಂಟೀನ್ ಹೊರಗಿನ ಬೆಂಚ್ ಮೇಲೆ ಕುಳಿತಾಗ ಯಾವುದೋ ಹಚ್ಚ ಹಸಿರು ಬಣ್ಣದ ಚೂಡಿದಾರ್ ಧರಿಸಿದ ಹುಡುಗಿ ಎದುರಾಗುತ್ತಾಳೆ, ಮತ್ತೊಬ್ಬಳು ‘ಹೇ.. ಬಾರೆ’ ಅಂತ ಕಾಲೇಜು ಆವರಣದ ಹೊರಗಿರೊ ಫ್ಯಾನ್ಸಿ ಸ್ಟೋರ್​ಗೆ ಹೊಸದಾಗಿ ಸ್ನೇಹಿತೆಯಾದವಳನ್ನ ಎಳೆದುಕೊಂಡು ಹೋಗುತ್ತಾಳೆ. ಈ ವೇಳೆ ನಿಮ್ಮ ಕಣ್ಣು ಮತ್ತೆ ಹೊಸಬರತ್ತ ಹರಿಯುತ್ತದೆ. ಝುಮ್ ಅಂತ ಗಾಡಿ ಓಡಿಸಿಕೊಂಡು ಬರೋನು, ಮುಂಗುರುಳ ಸರಿಸಿ ಕೊಂಚ ಹೆಚ್ಚೇ ಜಂಬ ತೋರಿಸುವ ಹುಡುಗಿಯೆಡೆಗೆ ಏನೋ ಆಸಕ್ತಿ, ಕುತೂಹಲ.

ಮತ್ತೆ ನಾಳೆಗೆ ಸ್ವಲ್ಪ ಮುಂಚಿತವಾಗೇ ಬಂದು ಅದೇ ಜಾಗದಲ್ಲಿ ಹಾಜರಿರುತ್ತೀರಾ. ಅವಳ/ನ ಡ್ರೆಸ್​ಸೆನ್ಸ್, ಸ್ಮೈಲ್, ನಡೆ, ನುಡಿ, ಮಾತು, ಮೌನ ಯಾವುದೋ ಒಂದು ನಿಮಗೆ ಇಷ್ಟವಾಗಿ ಬಿಡಬಹುದು. ಆ ಒಂದು ಕಾರಣಕ್ಕೆ ಅವರೆಡೆಗೆ ನೀವು ಆಕರ್ಷಿತರಾಗಿ ಬಿಡ್ತೀರಾ. ಸ್ವಲ್ಪ ದಿನ ಕಳೆದಂತೆ ಅವರು ಕಾಣದಿದ್ದಾಗ ಏನೋ ಮಿಸ್ ಮಾಡ್ಕೊಂಡೆ ಎಂಬಂತೆ ಚಡಪಡಿಸುತ್ತೀರಾ… ಯಾವುದೋ ಭ್ರಮೆಯಲ್ಲಿ ಮರು ದಿನವೇ ಅದಕ್ಕೊಂದು ಪ್ರೀತಿ ಎಂಬ ಹೆಸರು ಕೊಡ್ತೀರಾ… ಅಲ್ಲವೇ?

ಅಲ್ಲಿಂದ ಶುರುವಾಗುತ್ತೆ ಪ್ರೀತಿಗಾಗಿ ಆಕೆಯ ಹಿಂದೆ ಸುತ್ತಾಟ. ಓದು, ಲೈಬ್ರರಿ, ಲ್ಯಾಬ್ ಮರೆತು ಕ್ಷಣದ ಖುಷಿಗಾಗಿ ಯಾರದೋ ಬಗ್ಗೆ ಯೊಚಿಸುತ್ತೀರಿ. ಒಂದು ದಿನ ಅವರು ಎದುರಾಗಿಲ್ಲ ಅಂದ್ರೆ ಇವತ್ತು ಕಾಲೇಜಿಗೆ ಬಂದಿದ್ದು ವ್ಯರ್ಥ ಎಂಬ ಭಾವನೆ ಮೊಳೆಯುತ್ತದೆ. ಆದರೆ, ಅಸಲಿಗೆ ಅಲ್ಲಿ ಯಾವ ಪ್ರೀತಿಯೂ ಇರುವುದಿಲ್ಲ. ಎಲ್ಲವೂ ಆಕರ್ಷಣೆಯ ಜಗತ್ತು. ಕಣ್ಣಿಗೆ ಕಾಣುವುದೆಲ್ಲವೂ ಕಲರ್​ಫುಲ್ ಎಂಬಂತೆ ಯಾವುದೋ ಸಿನಿಮಾ ನಾಯಕ/ನಾಯಕಿ ಎಂಬಂತೆ ಹಗಲುಗನಸು ಕಾಣುತ್ತೀರಿ.

ಆದರೆ ಅದು ಕೇವಲ ಸೆಳೆತ ಅರ್ಥಾತ್ ಆಕರ್ಷಣೆ ಎಂಬುದನ್ನು ನೆನಪಿಡಿ. ಇದನ್ನು ಸರಿಯಾಗಿ ಅರಿಯದೇ ಸುಮ್ಮನೆ ಕ್ಲಾಸ್ ಬಂಕ್ ಮಾಡಿ, ಅವಳ ಮನಸ್ಸು ಗೆಲ್ಲಬೇಕು ಎಂಬ ಹುಚ್ಚಾಟಕ್ಕೆ ಬಿದ್ದು ಮಾಡಬಾರದ ಶೋಕಿ ಮಾಡಿ, ಅನೇಕರು ತಮ್ಮ ಎಜುಕೇಷನ್ ಅನ್ನೇ ತಲೆಕೆಳಗು ಮಾಡಿಕೊಂಡು ಬಿಡುತ್ತಾರೆ. ಪಾಲಕರು ಕಷ್ಟಪಟ್ಟು ಯಾಕೆ ಕಾಲೇಜಿಗೆ ಕಳಿಸಿದರು ಎಂಬುದನ್ನೇ ಒಟ್ಟಾರೆ ಈ ಗುಂಗಿನಲ್ಲಿ ಮರೆಯುತ್ತಾರೆ.

ವಯಸ್ಸೇ ಹಾಗೇ

ಈ ವಯಸ್ಸೇ ಹಾಗೆ ಅವಳು ಎಷ್ಟು ಚೆನ್ನಾಗಿದ್ದಾಳೆ. ಆಕೆ ಬೇರೆ ಹುಡುಗಿಯರ ಥರ ಅಲ್ಲ, ಆಕೆ ನಕ್ಕಾಗ ಬೀಳುವ ಕೆನ್ನೆಯ ಗುಳಿ ಎಷ್ಟು ಮುದ್ದಾಗಿ ಇರುತ್ತದೆ. ಇತ್ತೀಚೆಗೆ ಬೀಳುವ ಕನಸುಗಳಲ್ಲಿ ಅವಳೇ ಇರುತಾಳೆ ಕಣೋ ಎಂದು ಗೆಳೆಯನೊಂದಿಗೆ ಮಾತು ಶುರುವಿಟ್ಟರೇ ಮುಗಿದೇ ಹೋಯಿತು. ಹೀಗೆ ಮಾತನಾಡುವಾಗ ಅವಳ ಪೂರ್ವಾಪರ ತಿಳಿಯುವ ಗೋಜಿಗೆ ಹೋಗುವುದೇ ಇಲ್ಲ. ಪೂರ್ವಾಪರ ಯಾವನಿಗೆ ಬೇಕು? ಬೇಕಿರೋದು ಅಂದ, ಚಂದ ಅಷ್ಟೆ. ಒಂದಷ್ಟು ದಿನ ಕಾಫಿ ಡೇ, ಕಾಲೇಜು, ಕ್ಲಾಸ್ ರೂಮ್ ಮನೆಗೆ ಬಂದ ಗೆಳೆಯ/ಗೆಳತಿಗೆ ಪೋನ್ ಮಾಡಿದರೂ. ಆಕೆ ಬಗ್ಗೆನೇ ಮಾತು. ಆದರೆ, ಇಂತಹ ಅನುಭವಗಳ ಒಳಗೆ ಮುಳುಗಿರುವ ನಿಮಗೆ, ಆ ಅನುಭವ ಯಾವುದು ಎಂದು ತಿಳಿಯದೆ, ಅರಿಯದೇ ನೀವೆ ಇಡುವ ಹೆಸರು ಲವ್.

ಹೀಗೆ ದಿನವಿಡೀ ಎಲ್ಲೆಂದರಲ್ಲಿ ಅವಳ ಬಗ್ಗೆ ಮಾತನಾಡುತ್ತಿದ್ದವರಿಗೆ, ನೋಡು ನೋಡುತ್ತಲೇ ಮತ್ತೊಬ್ಬಳತ್ತ ಮನಸು ಹರಿದು ಬಿಡುತ್ತದೆ. ಈಗ ಹೇಳಿ ಅದು ಪ್ರೀತಿಯೇ, ನಿಜವಾಗಿಯೂ ಅಲ್ಲ, ಅದು ಸೆಳೆತ. ಇದನ್ನು ಸರಿಯಾಗಿ ಅರಿಯದ ಹದಿಹರೆಯದ ಹುಚ್ಚುಖೋಡಿ ಮನಸ್ಸುಗಳು ಪ್ರತಿ ಸೆಳೆತಕ್ಕೂ ಪ್ರೀತಿ ಎಂದು ಹೆಸರಿಟ್ಟು, ಆ ಪದದ ಅರ್ಥವನ್ನು ಹಾಳು ಮಾಡುತ್ತಾ. ಇದು ಪ್ರೀತಿಯೇ ಎಂದು ಭಾವಿಸಿ ಸುಮ್ಮನೆ ತಲೆ ಕೆಡಿಸಿಕೊಳ್ಳುತ್ತಾರೆ.

ಅನೇಕ ಹುಡುಗ/ಹುಡುಗಿಯರು ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರು, ಮುಂದಿನ ಹಂತದಲ್ಲಿ ಎಡವುತ್ತಾರೆ. ಇಂತಹ ಉದಾಹರಣೆಗಳು ನಿಮ್ಮ ಸುತ್ತಲೂ ಇರಬಹುದು. ಕಾರಣ ಕಾಲೇಜು ಎಂದಾಕ್ಷಣ ಬೇಡದ ಶೋಕಿಗಳನ್ನು ಮೈಗೂಡಿಸಿಕೊಳ್ಳುವುದು. ಒಂದು ಭಾವವನ್ನು ಅಪಾರ್ಥ ಮಾಡಿಕೊಂಡು, ಹೇಗೆಂದರೆ ಹಾಗೆ ಅರ್ಥೈಸಿಕೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವುದು.

ಪ್ರೀತಿ ಆಳವಾದ ಭಾವ

ವಯೋ ಸಹಜವಾಗಿ ಅನುಭವಕ್ಕೆ ಬರುವ ಸೆಳೆತವನ್ನೆ ನಾವು ಪ್ರೀತಿ ಎಂದು ಭಾವಿಸುತ್ತೇವೆ. ಅನೇಕರಲ್ಲಿ ಮೂರು ತಿಂಗಳಲ್ಲಿ ಹುಟ್ಟಿದ ಪ್ರೀತಿ, ಮೂರೇ ತಿಂಗಳಲ್ಲಿ ಮುರಿದು, ಮತ್ತೊಬ್ಬರತ್ತ ಮನಸ್ಸು ಹರಿಯಬಹುದು. ಅದಕ್ಕೂ ಇಡುವ ಹೆಸರು ಪ್ರೀತಿಯೇ. ಆದರೆ, ಅದು ಪ್ರೀತಿಯೇ ಅಲ್ಲ. ಪ್ರೀತಿ ಒಂದು ಆಳವಾದ ಭಾವನೆ, ಮನಸ್ಸಿನಲ್ಲಿ ಅದು ಚಿಗುರಿದರೂ, ಬೆಳೆಯಲಿಕ್ಕೆ ಬಹಳಷ್ಟು ಸಮಯ ಬೇಡುತ್ತದೆ. 3 ದಿನಗಳಲ್ಲಿ ಹುಟ್ಟಿ ಸಾಯುವುದಿಲ್ಲ. ಇಲ್ಲಿ ದೈಹಿಕ ಆಕರ್ಷಣೆಗಿಂತ ನಂಬಿಕೆ, ವಿಶ್ವಾಸವೇ ಪ್ರಮುಖವಾಗಿರುತ್ತದೆ.

ಅರಿಯದಿದ್ದರೆ ಕಷ್ಟ ಮತ್ತು ನಷ್ಟ

ನಾವು ಪ್ರೇಮಿಸುತ್ತಿದ್ದೇವೆ ಎಂದು ಯಾವುದಾದರೂ ಒಂದು ಜೋಡಿ ಹೇಳಿದಾಗ. ನಿಮ್ಮದು ಪ್ರೀತಿಯಲ್ಲ ಆಕರ್ಷಣೆ ಎಂದರೆ ಅವರು ಕೋಪಿಸಿಕೊಳ್ಳುತ್ತಾರೆ. ಇಂತಹ ಪ್ರೇಮ ಬಲವಾಗುವ ಮೊದಲೇ ಆಕರ್ಷಣೆ ಕಡಿಮೆಯಾಗಿ ಲವ್ ಬ್ರೇಕ್ ಆದರೆ, ಸೂಕ್ಷ್ಮ ಮನಸ್ಸಿನವರಾದರೆ ಆತ್ಮಹತ್ಯೆಯ ನಿರ್ಧಾರ ಮಾಡಿ ಬಿಡುತ್ತಾರೆ. ಇನ್ನು ಕೆಲವರು ಮನಸ್ಸನ್ನು ಅನಗತ್ಯವಾಗಿ ಹಾಳು ಮಾಡಿಕೊಂಡು ಬಿಡುತ್ತಾರೆ. ಇಂತಹ ದ್ವಂದ್ವ ಭಾವನೆಗಳ ಸುಳಿಯಲ್ಲಿ ಸಿಕ್ಕ ಅನೇಕ ಟೀನೇಜ್ ಮಂದಿ ತಮ್ಮ ಶೈಕ್ಷಣಿಕ ಭವಿಷ್ಯವನ್ನು ಹಾಳುಗೆಡವಿಕೊಳ್ಳಬಹುದು.