More

    ಕೋವಿಡ್-19 ಎರಡನೇ ಅಲೆ ಬಂದಿದ್ದು ಹೇಗೆ?

    ಕೋವಿಡ್-19 ಎರಡನೇ ಅಲೆ ಬಂದಿದ್ದು ಹೇಗೆ?ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿ, ಅಂದರೆ ಭಾರತವನ್ನು ಕಾಡುತ್ತಿರುವ ಕೋವಿಡ್-19 ವ್ಯಾಧಿಯ ಭೀಕರ ಅಲೆ, ಸಾರ್ವಜನಿಕ ಆತ್ಮಸಾಕ್ಷಿಯ ಮುಂದೆ ಎರಡು ಪ್ರಶ್ನೆಗಳನ್ನು ಮುನ್ನೆಲೆಗೆ ಬರುವಂತೆ ಮಾಡಿದೆ. 2ನೇ ಅಲೆ ಹೇಗೆ ಅಪ್ಪಳಿಸಿತು ಎನ್ನುವುದು ಮೊದಲ ಪ್ರಶ್ನೆ. 2021 ಫೆಬ್ರವರಿ 15ರಂದು ದೇಶದಲ್ಲಿ 11,200 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಎರಡುವರೆ ತಿಂಗಳ ನಂತರ, ಅಂದರೆ ಏಪ್ರಿಲ್ 30ರಂದು ದೈನಿಕ ಪ್ರಕರಣ 4,01,993ಕ್ಕೆ ಏರಿತು. ಇದು ಶೇಕಡ 3,500 ಹೆಚ್ಚಳವಾಗಿದೆ. ವರದಿಯಾಗದ ಇನ್ನಷ್ಟು ಕೇಸ್​ಗಳು ಇರುವ ಸಾಧ್ಯತೆ ಇರುವುದರಿಂದ ಇದು ಕೂಡ ಕಡಿಮೆಯೇ ಆಗಿರಬಹುದು. ಏಪ್ರಿಲ್​ನಲ್ಲಿ ದೇಶದಲ್ಲಿ 45,862 ಜನರು ಕೋವಿಡ್​ಗೆ ಬಲಿಯಾಗಿದ್ದು ಇದುವರೆಗಿನ ಒಟ್ಟು ಸಾವಿನಲ್ಲಿ ಶೇ.22 ಆಗಿದೆ.

    ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳ ಕಾಟಾಚಾರದ ಧೋರಣೆಯಿಂದ ಹಿಡಿದು ಮಾರ್ಗಸೂಚಿಗಳ ದುರ್ಬಲ ಅನುಷ್ಠಾನ, ಕೆಲವು ಸಂದರ್ಭದಲ್ಲಿ ಸಾರ್ವಜನಿಕರ ಅತೀವ ಅಗೌರವದವರೆಗೆ ಹಲವು ಕಾರಣಗಳಿರಬಹುದು. ‘ಸಾಮಾನ್ಯ ಪರಿಸ್ಥಿತಿಗೆ ಮರಳಿದರೆ ಸಾಕಪ್ಪಾ’ ಎನ್ನುವಂಥ ಹತಾಶ ಮನೋಭಾವ ಕೂಡ ಒಂದು ಕಾರಣವಾಗಿರಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ ಪರಿಸ್ಥಿತಿಯನ್ನು ಅಲಕ್ಷಿಸಿ ಬಿಗಡಾಯಿಸುವಲ್ಲಿ ಪ್ರತಿಯೊಂದು ವಿಭಾಗದ ಕೊಡುಗೆಯಿದೆ ಎಂದರೆ ತಪ್ಪಲ್ಲ.

    ಕರೊನಾ ಸೋಂಕಿನ ಪ್ರಕರಣಗಳು ತೀರಾ ಕಡಿಮೆಯಿದ್ದಾಗ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪ ನೀಡಲು ಯಾವ ಕ್ರಮಗಳನ್ನು ಸರ್ಕಾರ ಕೈಗೊಂಡಿತು ಎನ್ನುವುದು ಎರಡನೇ ಪ್ರಶ್ನೆಯಾಗಿದೆ. ನಿಜ ಹೇಳಬೇಕೆಂದರೆ, ಕೋವಿಡ್-19ನಂಥ ಸಾಂಕ್ರಾಮಿಕತೆಯನ್ನು ನಿಭಾಯಿಸಲು ಲಾಕ್​ಡೌನ್​ಗಳು ಸರಿಯಾದ ಕ್ರಮವಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಾಂಕ್ರಾಮಿಕತೆಯನ್ನು ನಿಯಂತ್ರಿಸಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡುವುದು ಹಾಗೂ ನಾಗರಿಕರಿಗೆ ಲಸಿಕೆ ಹಾಕುವುದು ಲಾಕ್​ಡೌನ್​ನ ಮುಖ್ಯ ಉದ್ದೇಶ.

    ಸಾಂವಿಧಾನಿಕ ಕ್ರಮ: ಭಾರತದ ಸಂವಿಧಾನದ ಪ್ರಕಾರ, ಸಾಂಕ್ರಾಮಿಕತೆ ಹಾಗೂ ಅದಕ್ಕೆ ಸಂಬಂಧಪಟ್ಟ ವಿಚಾರಗಳನ್ನು ನಿಭಾಯಿಸುವುದು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಸಂಬಂಧಪಟ್ಟ ವಿಚಾರ. ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ, ಆಸ್ಪತ್ರೆಗಳು ಹಾಗೂ ಡಿಸ್ಪೆನ್ಸರಿಗಳ ಸ್ಥಾಪನೆಗೆ ಸಂವಿಧಾನದ 7ನೇ ಶೆಡ್ಯೂಲ್ ರಾಜ್ಯ ಶಾಸಕಾಂಗಗಳಿಗೆ ಅಧಿಕಾರ ನೀಡುತ್ತದೆ. ಅಂತಾರಾಜ್ಯ ವಲಸೆ, ಅಂತಾರಾಜ್ಯ ಕ್ವಾರಂಟೈನ್​ಗೆ ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗೆ ಇದೆ. ಮನುಷ್ಯರು, ಪ್ರಾಣಿಗಳು ಅಥವಾ ಸಸ್ಯಗಳಿಗೆ ಸೋಂಕು ರೋಗಗಳು ಅಥವಾ ಜಂತುಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ ಪಸರಿಸುವುದನ್ನು ತಡೆಯುವ ಕಾನೂನು ರೂಪಿಸುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಸಹವರ್ತಿ ಪಟ್ಟಿ (ಕಂಕರೆಂಟ್ ಲಿಸ್ಟ್) ಪ್ರದಾನ ಮಾಡಿದೆ.

    ಆರೋಗ್ಯದ ಹಕ್ಕು ಮೂಲಭೂತ ಹಕ್ಕು: ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಕ್ರಮಕೈಗೊಳ್ಳುವುದು ಪ್ರಭುತ್ವದ (ಸರ್ಕಾರದ) ಹೊಣೆಗಾರಿಕೆ ಎಂದು ಸಂವಿಧಾನದ ರಾಜ್ಯ ನೀತಿಯ ನಿರ್ದೇಶಕ ತತ್ತ್ವ ಸಾರುತ್ತದೆ. ಸಂವಿಧಾನದ 47ನೇ ಆರ್ಟಿಕಲ್ ಈ ವಿಚಾರದಲ್ಲಿ ಮಹತ್ವದ ನಿರ್ದೇಶನ ನೀಡುತ್ತದೆ. ಇದಲ್ಲದೆ, ಆರೋಗ್ಯದ ಹಕ್ಕು ಮೂಲಭೂತ ಹಕ್ಕು. ಅದು ಆರ್ಟಿಕಲ್ 21ರಲ್ಲಿ ಪ್ರದತ್ತವಾಗಿರುವ ಜೀವಿಸುವ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು 1980ರ ದಶಕದಲ್ಲಿ ಹಲವು ಅರ್ಜಿಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿನ್ಸೆಂಟ್ ಪಣಿಕುರ್ಲಂಗರ ವರ್ಸಸ್ ಭಾರತ ಸರ್ಕಾರ (1987), ಪಂಜಾಬ್ ರಾಜ್ಯ ವರ್ಸಸ್ ಮೊಹಿಂದರ್ ಸಿಂಗ್ ಚಾವ್ಲಾ (1997) ಮತ್ತು ಎನ್.ಡಿ. ಜಯಾಲ್ ವರ್ಸಸ್ ಭಾರತ ಸರ್ಕಾರ (2004) ಕೆಲವು ಪ್ರಮುಖ ಪ್ರಕರಣಗಳು.

    ಆರೋಗ್ಯಸೇವಾ ಸೌಕರ್ಯಗಳ ಸುಧಾರಣೆಗೆ ಸರ್ಕಾರ ಈಗ ಕೈಗೊಳ್ಳುತ್ತಿರುವ ಕ್ರಮಗಳು ಏನೇನೂ ಸಾಲದು. ಭಾರತದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ 2019-20ರಲ್ಲಿ ಮಾಡಲಾದ ವೆಚ್ಚ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡ 1.28 ಮಾತ್ರವೇ ಆಗಿದೆ. ಜಾಗತಿಕ ಸರಾಸರಿ ಶೇ.6 ಆಗಿದೆ. ಈ ಶೇ.1.28, ಕೆಲವು ಬಡ ರಾಷ್ಟ್ರಗಳ ಸರಾಸರಿ ಶೇ.1.57 ಆರೋಗ್ಯ ವೆಚ್ಚಕ್ಕಿಂತಲೂ ಕಡಿಮೆಯಾಗಿದೆ ಎನ್ನುವುದು ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ದಯನೀಯ ಸ್ಥಿತಿ ಮೇಲೆ ಬೆಳಕು ಚೆಲ್ಲುತ್ತದೆ. ಈ ಅಂಕಿಸಂಖ್ಯೆಗಳನ್ನು ಕಲೆ ಹಾಕಿರುವುದು ವಿಶ್ವಬ್ಯಾಂಕ್.

    ಸಾವಿರ ಮಂದಿಗೆ 0.5 ಬೆಡ್!: 2017ರ ಸರ್ಕಾರಿ ಅಂಕಿಸಂಖ್ಯೆ ಪ್ರಕಾರ ದೇಶದ ಪ್ರತಿ 1,000 ಜನರಿಗೆ ಕೇವಲ 0.5 ಆಸ್ಪತ್ರೆ ಹಾಸಿಗೆಗಳಿವೆ. ಇದು ಜಗತ್ತಿನಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಒಂದಾಗಿದೆ. ಅದೇ ವರ್ಷ, ಭಾರತದಲ್ಲಿ ತಲಾ ಒಂದು ಲಕ್ಷ ಜನಸಂಖ್ಯೆಗೆ ಕೇವಲ 2.3 ಐಸಿಯು ಬೆಡ್​ಗಳಿದ್ದವು. ಹೀಗಾಗಿ, ಕೋವಿಡ್-19 ಮೊದಲ ಸಲ ಅಪ್ಪಳಿಸಿದಾಗ ದೇಶದ ಕೆಲಸ ಬಹಳಷ್ಟು ಕಡಿಮೆಯಾಗಿತ್ತು ಎನ್ನುವುದು ಸ್ಪಷ್ಟ. ಆರಂಭದಲ್ಲೇ ರಾಷ್ಟ್ರವ್ಯಾಪಿ ಲಾಕ್​ಡೌನ್ ವಿಧಿಸಿದ್ದರಿಂದ ಮೊದಲ ಅಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿತ್ತು. ಅದು ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲು ಸರ್ಕಾರಕ್ಕೆ ಉತ್ತಮ ಅವಕಾಶ ಕಲ್ಪಿಸಿತ್ತು. ಮೊದಲ ಅಲೆ ಉತ್ತುಂಗದಲ್ಲಿದ್ದ ಸಮಯದಲ್ಲಿ, 2020 ಸೆಪ್ಟೆಂಬರ್ 18ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್, ‘ಭಾರತದ ಆಸ್ಪತ್ರೆಗಳಲ್ಲಿ ಒಟ್ಟು 15,54,022 ಬೆಡ್ (ಸಾವಿರಕ್ಕೆ 1.2) ಇವೆ’ ಎಂದು ರಾಜ್ಯಸಭೆಗೆ ತಿಳಿಸಿದ್ದರು. ಆಕ್ಸಿಜನ್ ಸಹಿತ 2,32,505 ಬೆಡ್ ಹಾಗೂ 63,758 ಐಸಿಯು ಬೆಡ್ (ಲಕ್ಷಕ್ಕೆ 4.6) ಇವೆಯೆಂದು ವಿವರಿಸಿದ್ದರು. ಏಪ್ರಿಲ್​ನಿಂದ ಸೆಪ್ಟೆಂಬರ್ ನಡುವೆ ಆರೋಗ್ಯ ಸೌಲಭ್ಯಗಳ ಸುಧಾರಣೆಗೆ ವೇಗ ನೀಡಿದ್ದರಿಂದ ಆಮ್ಲಜನಕ ಪೂರಿತ ಬೆಡ್​ಗಳ ಸಂಖ್ಯೆ ಶೇಕಡ 297, ಐಸಿಯು ಬೆಡ್​ಗಳು ಶೇ.143 ಹಾಗೂ ಶೇ.151 ಏರಿಕೆ ಕಂಡಿವೆ ಎಂದಿದ್ದರು.

    ಆದರೆ 2020 ಸೆಪ್ಟೆಂಬರ್ ಮತ್ತು 2021 ಜನವರಿ ನಡುವೆ ಆಕ್ಸಿಜನ್​ಪೂರಿತ, ಐಸಿಯು ಬೆಡ್ ಹಾಗೂ ವೆಂಟಿಲೇಟರ್​ಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ರಾಜ್ಯ ರಾಜ್ಯಗಳ ನಡುವೆ ಭಾರಿ ಅಂತರವಿತ್ತು. ತೆಲಂಗಾಣ, ತ್ರಿಪುರಾ ಮತ್ತು ಅರುಣಾಚಲ ಪ್ರದೇಶದಂಥ ಕೆಲವೇ ರಾಜ್ಯಗಳು ಸೌಲಭ್ಯ ಹೆಚ್ಚಳಕ್ಕೆ ಕ್ರಮ ಕೈಗೊಂಡವು. ಉಳಿದಂತೆ ಬಹುತೇಕ ರಾಜ್ಯಗಳಲ್ಲಿ ಕಡಿಮೆಯಾದವು. ವಿಶೇಷವಾಗಿ ಕರೊನಾ ಕೇಸ್​ಗಳು ಹೆಚ್ಚಾಗಿರುವ ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳದಂಥ ದೊಡ್ಡ ರಾಜ್ಯಗಳಲ್ಲಿ ಈ ತೀವ್ರ ಇಳಿಕೆ ಕಂಡು ಬಂದಿತು. ಸೆಪ್ಟೆಂಬರ್ 22 ಮತ್ತು ಜನವರಿ 28ರ ನಡುವೆ ಆಕ್ಸಿಜನ್ ಬೆಡ್​ಗಳ ಸಂಖ್ಯೆ ಶೇ.36ರಷ್ಟು ಕುಸಿದಿತ್ತು.

    ಕರ್ನಾಟಕದಲ್ಲಿ ಕುಸಿತ: ಈ ಅವಧಿಯಲ್ಲಿ, ಕರ್ನಾಟಕದಲ್ಲಿ ಆಕ್ಸಿಜನ್ ಬೆಡ್​ಗಳು ಶೇಕಡ 51ರಷ್ಟು, ಐಸಿಯು ಬೆಡ್​ಗಳು ಶೇ.58ರಷ್ಟು ಹಾಗೂ ವೆಂಟಿಲೇಟರ್​ಗಳು ಶೇ.52ರಷ್ಟು ಕಡಿಮೆಯಾಗಿದ್ದವು. ಮಹಾರಾಷ್ಟ್ರ, ದೆಹಲಿ ಮುಂತಾದ ರಾಜ್ಯಗಳ ಸ್ಥಿತಿಯೂ ಭಿನ್ನವಲ್ಲ. ಕೇಂದ್ರ ಸರ್ಕಾರ ಮತ್ತು ಬಹುತೇಕ ರಾಜ್ಯ ಸರ್ಕಾರಗಳ ತೀರಾ ನಿರ್ಲಕ್ಷ್ಯ ಧೋರಣೆಗೆ ಇದು ಕನ್ನಡಿ ಹಿಡಿಯುತ್ತದೆ. ಕೋವಿಡ್​ನಂಥ ಸಾಂಕ್ರಾಮಿಕತೆಯ ಬಹಳಷ್ಟು ಅಲೆಗಳು ದಾಂಗುಡಿಯಿಟ್ಟು ಮಾನವರನ್ನು ಹೈರಾಣಗೊಳಿಸುತ್ತದೆ ಎಂಬ ಸಾಮಾನ್ಯ ಜ್ಞಾನವಿದ್ದರೂ ನಿರ್ಲಕ್ಷ್ಯ ತೋರಿದ್ದು ಅಕ್ಷಮ್ಯವಾಗಿದೆ. ಮೊದಲ ಅಲೆಯಲ್ಲಿ ಕರೊನಾ ಸೋಂಕಿನ ಸಂಖ್ಯೆ ಕಡಿಮೆ ಆದಾಕ್ಷಣವೇ ಒಂದು ರೀತಿಯ ಆತ್ಮತೃಪ್ತಿಯಲ್ಲಿ ಅಧಿಕಾರಸ್ಥರು ತೇಲಿ ಮೈ ಮರೆತರು. ಈಗ ಅವರೆಲ್ಲ ಸಂವಿಧಾನ ಖಾತರಿಪಡಿಸಿರುವ ಸಾರ್ವಜನಿಕ ಆರೋಗ್ಯ ಸೇವೆ ಒದಗಿಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಆರೋಗ್ಯ ಸಚಿವ ಡಾ.ಹರ್ಷವರ್ಧನ್, ‘2020 ಡಿಸೆಂಬರ್ ಮತ್ತು 2021 ಫೆಬ್ರವರಿ ನಡುವೆ ಕರೊನಾದ ಕೆಟ್ಟ ಘಟ್ಟ ಅಂತ್ಯವಾಗಿದೆ’ ಎಂದು ಅಕಾಲಿಕವಾಗಿ ಘೋಷಿಸಿದ್ದರು. ವೈರಸ್ ಸೋಲಿಸುವ ಹೋರಾಟದಲ್ಲಿ ದೇಶದ ಪ್ರಯತ್ನಗಳನ್ನು ಶ್ಲಾಘಿಸಿದ್ದರು. ಆದರೆ ಈಗ ಪರಿಸ್ಥಿತಿ ಪೂರ್ಣ ಭಿನ್ನವಾಗಿದೆ.

    (ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

    ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

    ಅಂಗಡಿ ಮುಚ್ಚಿ ಎಂದ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿದ ಅಪ್ಪ-ಮಕ್ಕಳ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts