ಕಾಂಗ್ರೆಸ್​ ಜತೆ ಮೈತ್ರಿ ಮಾಡಿಕೊಂಡರೆ ಜನರ ಬಳಿಗೆ ಹೋಗುವುದಾದರೂ ಹೇಗೆ? ಆಮ್​ ಆದ್ಮಿ ಸಂಸದ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಸುದ್ದಿಯಾಗುತ್ತಿರುವ ಹೊತ್ತಿನಲ್ಲೇ ಹೊಂದಾಣಿಕೆಯನ್ನು ಅಲ್ಲಗೆಳೆದಿರುವ ಪಂಜಾಬ್​ನ ಆಪ್​ ಸಂಸದ ಭಗ್ವಂತ್​ ಮಾನ್​, ಕಾಂಗ್ರೆಸ್​ನೊಂದಿಗೆ ನಾವು ಒಪ್ಪಂದ ಮಾಡಿಕೊಂಡರೆ ಜನರನ್ನು ಎದುರುಗೊಳ್ಳುವುದು ಕಷ್ಟ. ಹಾಗಾಗಿ ಮೈತ್ರಿ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

ಪಂಜಾಬ್​ನಲ್ಲಿ ನಾವು ವಿರೋಧ ಪಕ್ಷದಲ್ಲಿದ್ದೇವೆ. ಕಾಂಗ್ರೆಸ್​ ಆಡಳಿತ ನಡೆಸುತ್ತಿದೆ. ಒಂದು ವೇಳೆ ನಾವು ಕಾಂಗ್ರೆಸ್​ ಜತೆಗೆ ಮೈತ್ರಿ ಮಾಡಿಕೊಂಡರೆ ಸಾರ್ವಜನಿಕರನ್ನು ಎದುರಾಗುವುದಾದರೂ ಹೇಗೆ. ಹಾಗಾಗಿ ಸದ್ಯಕ್ಕೆ ನಮ್ಮ ಬಳಿ ಅಂಥ ಯೋಜನೆಗಳೇನೂ ಇಲ್ಲ ಎಂದು ಹೇಳಿದ್ದಾರೆ.

ಮೈತ್ರಿ ವಿಚಾರವಾಗಿ ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷದ ಹಿರಿಯ ನಾಯಕರ ನಡುವೆ ಮಾತುಕತೆಗಳು ನಡೆದಿದೆ ಎನ್ನಲಾಗಿದ್ದು, ಎರಡೂ ಕಡೆಯವರೂ ಈ ವಿಚಾರದಲ್ಲಿ ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಮೈತ್ರಿ ಕುರಿತು ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷಗಳರೆಡರ ಎರಡನೇ ಹಂತದ ನಾಯಕರಲ್ಲಿ ಭಿನ್ನ ಅಭಿಪ್ರಾಯಗಳಿವೆ.

‘ಒಂದು ವೇಳೆ ಆಮ್​ ಆದ್ಮಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಕಾಂಗ್ರೆಸ್​ ಹೈಕಮಾಂಡ್​ ನಿರ್ಧಾರ ಕೈಗೊಂಡರೆ ಅದಕ್ಕೆ ದೆಹಲಿಯ ಪಕ್ಷದ ಕಾರ್ಯಕರ್ತರೆಲ್ಲರೂ ಬದ್ಧರಾಗಿರಬೇಕು” ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್​ ಹೇಳಿದ್ದರು. ಆದರೆ, ಆಪ್‌ ಜತೆಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್​ನ ಮತ್ತೊಬ್ಬ ನಾಯಕ ಅಜೆಯ್​ ಮಾಕೆನ್​ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ, ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ, ರಾಜ್ಯಸಭೆ ಸದಸ್ಯ ಸಂಜಯ್​ ಸಿಂಗ್​ ಅವರೂ ಮೈತ್ರಿ ಸಾಧ್ಯತೆಯನ್ನು ಅಲ್ಲಗಳೆದಿದ್ದರು.