ಪಶ್ಚಿಮ ಬಂಗಾಳ ಚಿಟ್​ಫಂಡ್ ಹಗರಣ ತನಿಖೆ ಆರಂಭವಾದದ್ದೇ ಕಾಂಗ್ರೆಸ್ ಕಾಲದಲ್ಲಿ: ಕೇಂದ್ರ ಕಾನೂನು ಸಚಿವ

ನವದೆಹಲಿ: ನಗರ ಪೊಲೀಸ್​ ಆಯುಕ್ತರನ್ನು ಬೆಂಬಲಿಸಿ ಧರಣಿ ಕುಳಿತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜಕಾರಣಿಗಳನ್ನು ಬೆಂಬಲಿಸಿರುವ ಪೊಲೀಸ್​ ಆಯುಕ್ತರ ವಿರುದ್ಧ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಲ್ಕತಾದಲ್ಲಿ ಏನು ನಡೆಯುತ್ತಿದೆ? ಓರ್ವ ಪೊಲೀಸ್​ ಆಯುಕ್ತ ರಾಜಕಾರಣಿಯ ಜತೆ ಧರಣಿ ಕುಳಿತ್ತಿದ್ದಾರೆ? ಇದರರ್ಥ ಏನು ಎಂದು ಪ್ರಶ್ನಿಸುವ ಮೂಲಕ ಧರಣಿ ಕುಳಿತಿರುವ ಮಮತಾ ಬ್ಯಾನರ್ಜಿ ಹಾಗೂ ಅವರಿಗೆ ಸಾಥ್​ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಕಿಡಿಕಾರಿದ್ದಾರೆ.

ಭಾನುವಾರ ನಡೆದ ಘಟನೆಯನ್ನು ವಿರೋಧಿಸಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪರ ಬ್ಯಾಟ್​ ಬೀಸಿ ಒಗ್ಗಟ್ಟು ಪ್ರದರ್ಶಿಸಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ವಿರುದ್ಧವೂ ರವಿಶಂಕರ್​ ಪ್ರಸಾದ್​ ವಾಗ್ದಾಳಿ ನಡೆಸಿದ್ದಾರೆ.

ಮಮತಾ ಅವರು ಮಾಡಿರುವ ಆರೋಪಗಳಿಗೂ ಪ್ರತ್ಯುತ್ತರ ನೀಡಿರುವ ಅವರು ನಾರದ, ಶಾರದಾ ಹಾಗೂ ರೋಸ್​ ವ್ಯಾಲಿ ಹಗರಣ ತನಿಖೆಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುವುದಕ್ಕಿಂತ ಮುಂಚಿನಿಂದಲೂ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆದ ಚಿಟ್​ ಫಂಡ್​ ಹಗರಣದಲ್ಲಿ ಸುಮಾರು 20 ಲಕ್ಷ ಜನರು ಹಣವನ್ನು ಕಳೆದುಕೊಂಡಿದ್ದಾರೆ ಎಂಬ ರಾಹುಲ್​ ಗಾಂಧಿ ಹೇಳಿಕೆಯನ್ನು 2014ರಲ್ಲಿ ಕಾಂಗ್ರೆಸ್​ ಟ್ವೀಟ್​ ಮಾಡಿತ್ತು. ಮೇ 26, 2014 ರಲ್ಲಿ ನಾವು ಪ್ರಮಾಣ ವಚನ ಸ್ವೀಕರಿಸಿದೆವು. ಎಲ್ಲ ತನಿಖೆಗಳು ನಮಗಿಂತಲೂ ಮುಂಚೆಯೇ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಚಿಟ್​ ಫಂಡ್​ ಹಗರಣದಲ್ಲಿ ಕೋಲ್ಕತಾ ಪೊಲೀಸ್​ ಆಯುಕ್ತ ರಾಜೀವ್​ ಕುಮಾರ್​ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಭಾನುವಾರ ತನಿಖೆಗಾಗಿ ಕೋಲ್ಕತಾಗೆ ಆಗಮಿಸಿದ್ದ ಸಿಬಿಐ ಅಧಿಕಾರಿ ತಂಡವನ್ನು ಪಶ್ಚಿಮ ಬಂಗಾಳ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಸೃಷ್ಟಿಯಾದ ರಾಜಕೀಯ ಹೈಡ್ರಾಮಾವನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಕೆ.ಎನ್​. ತ್ರಿಪಾಠಿ ಅವರು ಕೇಂದ್ರ ಗೃಹಸಚಿವ ರಾಜನಾಥ್​ ಸಿಂಗ್​ಗೆ ವರದಿ ರೂಪದಲ್ಲಿ ಸಲ್ಲಿಸಿದ್ದಾರೆ. (ಏಜೆನ್ಸೀಸ್​)