ಕಂಪ್ಲಿ: ಇಲ್ಲಿನ ಸ್ಫೂರ್ತಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಸ್ಫೂರ್ತಿ ಹಿರಿಯ ಪ್ರಾಥಮಿಕ ಶಾಲೆಯ ದಾಖಲೆಗಳನ್ನು ಪರಿಶೀಲಿಸಿ, ಟಿಸಿ ಬಂದ ದಿನವೇ ಟಿಸಿಗಳ ದಾಖಲು ಮಾಡಿಲ್ಲ. ಮಕ್ಕಳ ದಾಖಲೆ ಸಮರ್ಪಕವಾಗಿ ನಿರ್ವಹಿಸಿಲ್ಲ. ಮಕ್ಕಳ ಸುರಕ್ಷಿತ ಕ್ರಮ, ರಕ್ಷಣಾ ಕ್ರಮಗಳಿಲ್ಲ.
ಇದನ್ನು ಓದಿ: ವಾರಾಹಿ ಕಾಲುವೆ ದುರಸ್ತಿಗೆ ಅನುಮತಿ ಪರಿಶೀಲನೆ: ಶಾಸಕ ಗಂಟಿಹೊಳೆ ಪ್ರಶ್ನೆಗೆ ಸಚಿವ ಡಿಕೆಶಿ ಉತ್ತರ
ಶಾಲೆಯ ಒಟ್ಟಾರೆ ಸಿಬ್ಬಂದಿ ದಾಖಲೆಗಳನ್ನು ಪೊಲೀಸ್ ವೆರಿಫಿಕೇಷನ್ ಮಾಡಿಸಿಲ್ಲ. ವಸತಿ ಶಾಲೆಯ ಅನುಮತಿ ಇಲ್ಲದಿದ್ದರೂ ವಸತಿ ಶಾಲೆ ನಡೆಸುತ್ತಿದ್ದಾರೆ. ಇದಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸಿಆರ್‌ಪಿಗಳಾದ ಈರೇಶ್, ಹನುಮಂತಪ್ಪ, ಭುವನೇಶ್ವರ, ಇಸಿಒ ಜಿ.ವೀರೇಶ ಇವರನ್ನು ಪ್ರಶ್ನಿಸಿದರು.
ಕಳೆದ ವರ್ಷವೇ ಪರಿಶೀಲಿಸಿ ವಸತಿ ಶಾಲೆಗೆ ಅನುಮತಿ ಪಡೆಯುವಂತೆ ನೊಟೀಸ್ ನೀಡಿದೆ ಎಂದು ಸಿಆರ್‌ಪಿಗಳು ಶಶಿಧರ ಕೋಸಂಬಗೆ ಮಾಹಿತಿ ನೀಡಿದರು. ಇದಕ್ಕೆ, ಶಾಲೆ ಮುಖ್ಯಸ್ಥರಿಗೆ ಶೋಕಾಸ್ ನೊಟೀಸ್ ನೀಡುವಂತೆ ಸಲಹೆ ನೀಡಿದರು.
ಶಾಲೆ ಕಾರ್ಯದರ್ಶಿ ರಮೇಶ ಎನ್.ಶಿವಪುರ್ ಮಾತನಾಡಿ, ವಸತಿ ಶಾಲೆಗೆ ಅನುಮತಿ ನೀಡುವಂತೆ ಶಿಕ್ಷಣ ಇಲಾಖೆ ಆಯುಕ್ತರಿಗೆ, ಸಂಬಂಧಿಸಿದ ಶಿಕ್ಷಣಾಧಿಕಾರಿಗಳಿಗೂ ಪ್ರಸ್ತಾವನೆ ಸಲ್ಲಿಸಿದ್ದೇನೆ. ರಾಜ್ಯದ ಯಾವುದೇ ವಸತಿ ಶಾಲೆಗಳಿಗೆ ಸರ್ಕಾರದಿಂದ ಅನುಮತಿ ದೊರೆತಿಲ್ಲ ಎಂದು ಆಯೋಗದ ಸದಸ್ಯರ ಗಮನಕ್ಕೆ ತಂದರು.