ಸೋಮನಹಳ್ಳಿ ಗ್ರಾಪಂ ಪಿಡಿಒ ಮೇಲೆ ಹಲ್ಲೆ

ಪಂಚನಹಳ್ಳಿ: ಸೋಮನಹಳ್ಳಿ ಗ್ರಾಪಂ ಪಿಡಿಒ ಎಸ್.ಜಯಪ್ಪ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಇಬ್ಬರು ಗ್ರಾಪಂ ಸದಸ್ಯರು ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಮನಹಳ್ಳಿ ಪಿಡಿಒ ಜಯಪ್ಪ ಸೋಮವಾರ ಮಧ್ಯಾಹ್ನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಗ್ರಾಪಂ ಸದಸ್ಯರಾದ ಲಲಿತಾಬಾಯಿ, ಪತಿ ಅಣ್ಣಪ್ಪ ನಾಯ್ಕ, ನಾಗಮ್ಮ, ಆಕಾಶ್ ನಾಯ್ಕ ಹಾಗೂ ನಾಗಮ್ಮನ ಪತಿ ಪಾಂಡು ಗ್ರಾಪಂ ಕಚೇರಿಗೆ ಬಂದಿದ್ದಾರೆ.

ವಸತಿ ಯೋಜನೆ ಮನೆಗಳ ಹಂಚಿಕೆ ಕುರಿತು ಸದಸ್ಯರು ಮತ್ತು ಪಿಡಿಒ ನಡುವೆ ಚರ್ಚೆ ನಡೆದಿದೆ. ಮನೆಗಳ ಹಂಚಿಕೆಯನ್ನು ಗ್ರಾಮ ಸಭೆಯಲ್ಲಿ ಮಾಡಬೇಕು. ಅದಕ್ಕೆ ನೀತಿ ನಿಯಮಗಳಿವೆ. ಈ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚೆ ಮಾಡೋಣ ಎಂದು ಜಯಪ್ಪ ತಿಳಿಸಿದ್ದಾರೆ.

ಇದಕ್ಕೆ ಒಪ್ಪದ ಸದಸ್ಯರು ತಾವು ಹೇಳಿದಂತೆ ನೀವು ಮಾಡಬೇಕು ಎಂದು ಜಯಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಸ್ಥಳದಲ್ಲಿದ್ದ ಗ್ರಾಮಸ್ಥರು ಸದಸ್ಯರನ್ನು ಹೊರಕಳಿಸಿದ್ದಾರೆ. ಪುನಃ ಒಳಬಂದ ಅಣ್ಣಪ್ಪನಾಯ್ಕ ಮತ್ತು ಪಾಂಡು ಮತ್ತೊಮ್ಮೆ ಜಯಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ಜಯಪ್ಪ ಅವರನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದೆ.

ಗ್ರಾಮಸ್ಥರ ಪ್ರತಿಭಟನೆ: ಪಿಡಿಒ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮನಹಳ್ಳಿ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ಸಿಂಗಟಗೆರೆ ಪೊಲೀಸ್ ಠಾಣೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಕಡೂರು ಇನ್ಸ್​ಪೆಕ್ಟರ್ ಮಂಜುನಾಥ್ ಗ್ರಾಮಸ್ಥರನ್ನು ಸಮಾಧಾನಪಡಿಸಿ ಪಿಡಿಒ ಹೇಳಿಕೆ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಂತರ ಜಯಪ್ಪ ನೀಡಿದ ದೂರಿನ ಅನ್ವಯ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *