ಜಾಕ್ ಬಳಸಿ ಮನೆ 4 ಅಡಿ ಎತ್ತರಕ್ಕೆ!

ವಿಜಯವಾಣಿ ಸುದ್ದಿಜಾಲ ಮಂಗಳೂರು
ವಾಹನಗಳ ಅಡಿಗೆ ಜಾಕ್ ಕೊಟ್ಟು ಮೇಲೆತ್ತಿ ರಿಪೇರಿ ಮಾಡುವುದನ್ನು ನೋಡಿದ್ದೇವೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ನೆರೆ ಸಂತ್ರಸ್ತರೊಬ್ಬರು ನೆರೆ ಹಾವಳಿಗೆ ಬೇಸತ್ತು ತಮ್ಮ ಆರ್‌ಸಿಸಿ ಮನೆಯನ್ನು ಕಟ್ಟಿದ ರೀತಿಯಲ್ಲೇ ಜಾಕ್ ಬಳಸಿ ಮೇಲೇರಿಸಲು ಹೊರಟಿದ್ದಾರೆ. ಇದು ನಂಬಲು ಕಷ್ಟವಾದರೂ, ಸತ್ಯ.
ಬಂಟ್ವಾಳ ಸಜೀಪನಡು ಬೈಲಗುತ್ತುವಿನ ರಿಯಾಜ್ ಕುಟುಂಬ ಪ್ರತಿವರ್ಷ ಮಳೆಗಾಲದಲ್ಲಿ ನೇತ್ರಾವತಿ ನದಿ ಉಕ್ಕಿ ಹರಿಯುವುದರಿಂದ ಬೇರೆ ಕಡೆ ತೆರಳಬೇಕಾದ ಪರಿಸ್ಥಿತಿ ಇತ್ತು. ಈ ಬಾರಿಯೂ ಮೂರು ಬಾರಿ ನದಿಯುಕ್ಕಿ ಹರಿದು ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಇದಕ್ಕೆ ಮುಕ್ತಿ ನೀಡಲು ನಿರ್ಧರಿಸಿದ ರಿಯಾಜ್ ಮನೆಯನ್ನೇ 4 ಅಡಿ ಎತ್ತರಕ್ಕೆ ಲಿಫ್ಟ್ ಮಾಡಲಿದ್ದಾರೆ.
ಹರಿಯಾಣ ಮೂಲದ ಕಂಪನಿ ಮನೆ ಏರಿಸುವ ಗುತ್ತಿಗೆ ಪಡೆದುಕೊಂಡಿದೆ. ಬೃಹತ್ ವಾಹನ ಮೇಲೆತ್ತಲು ಬಳಸುವ 200 ಜಾಕ್‌ಗಳನ್ನು ಇಲ್ಲಿ ಬಳಸಲಾಗುತ್ತಿದೆ. ಮೊದಲು ಮನೆಯೊಳಗಡೆ ನೆಲವನ್ನು ಸಂಪೂರ್ಣ ಅಗೆದು, ಪಂಚಾಂಗದ ಸುತ್ತ ಗುಂಡಿ ತೋಡಿ ಸುತ್ತ ಜಾಕ್ ಅಳವಡಿಸಿ ಒಂದೇ ತೂಕದಲ್ಲಿ ಜಾಕ್ ಏರಿಸಲಾಗುತ್ತದೆ. ನಿರ್ದಿಷ್ಟ ಎತ್ತರಕ್ಕೇರಿಸಿದ ಬಳಿಕ ಪಂಚಾಂಗದ ಅಡಿ ಭಾಗಕ್ಕೆ ಕಲ್ಲು ಕಟ್ಟಿ ಮನೆಯನ್ನು ಪುನಃ ಕೂರಿಸಲಾಗುತ್ತದೆ. ಒಳಗಡೆ ಮಣ್ಣು ತುಂಬಿಸಿ ಮತ್ತೆ ನೆಲದ ಕೆಲಸ ಮುಗಿಸಬೇಕು. 1000 ಚದರ ಅಡಿ ವಿಸ್ತೀರ್ಣದ ಮನೆ ಮೇಲೆತ್ತಲು 2.5ರಿಂದ 3 ಲಕ್ಷ ರೂ. ಖರ್ಚಾಗುತ್ತದೆ.
ವಿದೇಶಗಳಲ್ಲಿ ಮನೆ ಮಲೆತ್ತುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿವೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮನೆ ಮೇಲೆತ್ತುವ ಕೆಲಸ ನಿರ್ವಹಿಸುತ್ತಿದ್ದೇವೆ. ಸುತ್ತ ಜಾಕ್‌ಗಳನ್ನು ಬಳಸಿ ಕ್ರಮಬದ್ಧವಾಗಿ ಮನೆಯ ನಾಲ್ಕು ಕಡೆಗಳಿಂದಲೂ ಮೇಲಕ್ಕೇರಿಸಿ, ಕೆಳಗೆ ಕಲ್ಲು ಕಟ್ಟಿ ಭದ್ರ ಪಡಿಸಲಾಗುತ್ತದೆ. ಕೇರಳದಲ್ಲಿ ನಾವು ಕೆಲ ಮನೆಗಳನ್ನು ಈ ರೀತಿ ಲಿಫ್ಟ್ ಮಾಡಿದ್ದೇವೆ ಎನ್ನುತ್ತಾರೆ ಹರಿ ಓಂ ಶಿವ ಹೌಸ್ ಲಿಫ್ಟಿಂಗ್ ಕಂಪನಿ ಇಂಜಿನಿಯರ್.

ಎತ್ತರಿಸಿದ ಮನೆಗಿದೆ ವಿಮೆ:  ಮನೆ ಏರಿಸುವ ಸಂದರ್ಭ ಹಾನಿಯಾದರೆ ಅದಕ್ಕೆ ಸಂಪೂರ್ಣ ವಿಮೆಯನ್ನು ಕಂಪನಿಯೇ ನೀಡುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಮನೆ ಮಾಲೀಕನ ನಡುವೆ ಗುತ್ತಿಗೆ ಕಂಪನಿ ಒಪ್ಪಂದ ಮಾಡಿಕೊಳ್ಳುತ್ತದೆ. ರಿಯಾಜ್ ಅವರ ಸಾಹಸ ಕಂಡು ತಗ್ಗು ಪ್ರದೇಶದಲ್ಲಿರುವ ಸಜಿಪನಡು ಬೈಲಗುತ್ತುವಿನ ಹಲವು ನಾಗರಿಕರು ಇದೇ ರೀತಿ ಮನೆ ಏರಿಸುವ ಚಿಂತನೆ ನಡೆಸಿದ್ದಾರೆ.

ಪ್ರತಿ ವರ್ಷ ಮಳೆಗಾಲದಲ್ಲಿ ನಮ್ಮ ಮನೆ ಜಲಾವೃತವಾಗುತ್ತದೆ. ಹೀಗಾಗಿ ಮನೆ ಎತ್ತರಕ್ಕೇರಿಸುವ ಬಗ್ಗೆ ಬೇರೆಯವರಿಂದ ತಿಳಿದು ಕೆಲಸಕ್ಕೆ ಇಳಿದಿದ್ದೇನೆ. ಬೇರೆಡೆ ಮನೆ ನಿರ್ಮಿಸಲು ಕನಿಷ್ಠ 12ರಿಂದ 15 ಲಕ್ಷ ರೂ. ಬೇಕಾಗುತ್ತದೆ. ಅದೇ ಮನೆಯನ್ನು ಎತ್ತರಕ್ಕೇರಿಸಲು 5 ಲಕ್ಷ ರೂ.ಸಾಕು.
ರಿಯಾಜ್ ಬೈಲಗುತ್ತು, ಮನೆ ಮಾಲೀಕ