More

    ಬಡ ಕುಟುಂಬಕ್ಕೆ ಸುಸಜ್ಜಿತ ಮನೆ ಭರವಸೆ

    ಪುತ್ತೂರು: ಸ್ವಂತ ಸೂರಿಗಾಗಿ ಮಂದಾರಬೈಲಿನ ಯುವತಿ ಸುರಕ್ಷಾಳ ಸರ್ಕಾರಿ ಕಚೇರಿ ಅಲೆದಾಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಜನಪ್ರತಿನಿಧಿಗಳು, ಹಿಂದು ಮುಖಂಡರ ಸಹಕಾರ ದೊರಕಿದ್ದು, ಮುಂದಿನ 3-4 ತಿಂಗಳೊಳಗೆ ಸುಸಜ್ಜಿತ ಮನೆ ನಿರ್ಮಾಣಗೊಳ್ಳಲಿದೆ.

    ಪುತ್ತೂರಿನ ಜನಸೇವಾ ಸಂಸ್ಥೆ ‘ಟೀಮ್ ನರೇಂದ್ರ’ ಮನೆ ನಿರ್ಮಾಣ ಕಾಮಗಾರಿ ನಡೆಸಲು ತೀರ್ಮಾನಿಸಿದೆ. ಹಿಂದು ಮುಖಂಡ ದಿನೇಶ್ ಜೈನ್ ದಾನಿಗಳ ನೆರವಿನಿಂದ ಮನೆ ನಿರ್ಮಾಣಕ್ಕೆ 2,500 ಕೆಂಪುಕಲ್ಲು ವ್ಯವಸ್ಥೆ ಮಾಡಿದ್ದಾರೆ. ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ 40 ಸಾವಿರ ರೂ.ವನ್ನು ಮನೆ ನಿರ್ವಹಣಾ ವೆಚ್ಚವಾಗಿ ನೀಡುವುದಾಗಿ ತಿಳಿಸಿದ್ದಾರೆ. ಪುತ್ತೂರು ಬಿಜೆಪಿ ನಗರ ಅಧ್ಯಕ್ಷ ಪಿ.ಜಿ ಜಗನ್ನಿವಾಸ್ ರಾವ್ ಮನೆಯ ಸಿವಿಲ್ ನಕ್ಷೆ ಸಹಿತ ಇತರ ವ್ಯವಸ್ಥೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬಜರಂಗದಳ ಮುಖಂಡ ಮುರಳೀಕೃಷ್ಣ ಹಸಂತಡ್ಕ ದಾನಿಗಳ ನೆರವು ಹಾಗೂ ವಿವಿಧ ಸಂಸ್ಥೆಗಳಿಂದ ಮನೆ ನಿರ್ಮಾಣಕ್ಕೆ ಸಹಕಾರ ಪಡೆಯುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮುಂದಿನ 3-4 ತಿಂಗಳೊಳಗೆ ಎಲ್ಲರ ಒಗ್ಗೂಡುವಿಕೆಯಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯಲಿದೆ.

    ವಿಜಯವಾಣಿ ವರದಿ: ಅನಾರೋಗ್ಯ ಪೀಡಿತ ತಂದೆ ಪ್ರಕಾಶ್ ಪೂಜಾರಿ, ತಾಯಿ ಮೀನಾಕ್ಷಿ ಹಾಗೂ ತಮ್ಮನ ಜತೆ ಸುರಕ್ಷಾ ವಾಸವಾಗಿದ್ದು, ಕುಟುಂಬದ ದುಸ್ಥಿತಿ ಬಗ್ಗೆ ‘ವಿಜಯವಾಣಿ’ ಮಂಗಳವಾರ ವಿಶೇಷ ವರದಿ ಪ್ರಕಟಿಸಿತ್ತು. ಸರ್ಕಾರಿ ಜಮೀನಿನಲ್ಲಿ 25 ವರ್ಷಗಳಿಂದ ವಾಸಿಸುತ್ತಿದ್ದ ದಂಪತಿಗೆ 2018ರಲ್ಲಿ 94ಸಿಸಿ ಯೋಜನೆಯಡಿ 2.5 ಸೆಂಟ್ಸ್ ನಿವೇಶನ ಮಂಜೂರಾಗಿತ್ತು. ಆದರೆ ಹಳೇ ಮನೆ ಕಳೆದ ಮಳೆಗಾಲದಲ್ಲಿ ಕುಸಿದಿದ್ದು, ವಾಸಕ್ಕೆ ಯೋಗ್ಯವಾಗಿರಲಿಲ್ಲ. ಇನ್ನೊಂದೆಡೆ, ಸುರಕ್ಷಾಳ ಕುಟುಂಬದ ಹೆಸರಿನಲ್ಲಿ ಕೇರಳ ಮೂಲದ ಸಂಸ್ಥೆಯೊಂದು 5 ಲಕ್ಷ ರೂ. ಸಂಗ್ರಹಿಸಿದ ಬಳಿಕ ಹಸ್ತಾಂತರಿಸಲು ನಿರಾಕರಿಸಿತ್ತು. ವರದಿಯಿಂದ ಎಚ್ಚೆತ್ತ ನಗರಸಭಾ ಅಧಿಕಾರಿಗಳು, ಮನೆ ನಿರ್ಮಾಣಕ್ಕೆ ದಾಖಲೆ ಸಿದ್ಧಪಡಿಸುತ್ತಿದ್ದಾರೆ.

    ನಗರಸಭೆ ವತಿಯಿಂದ ಮಂದಾರಬೈಲು ಕುಟುಂಬವನ್ನು ಸಂಪರ್ಕಿಸಿ, ಸ್ಥಳ ಪರಿಶೀಲನೆ ನಡೆಸಲಾಗಿದೆ. ನಗರಸಭೆ ಮುತುವರ್ಜಿ ವಹಿಸಿ ಸರ್ಕಾರದ ವಿಶೇಷ ಅನುದಾನದಿಂದ ಮನೆ ನಿರ್ಮಿಸಲು ಸಹಕಾರ ನೀಡಲಿದೆ. ಹಿಂದು ಸಂಘಟನೆಗಳು ಹಾಗೂ ದಾನಿಗಳು ಕೂಡ ಮನೆ ನಿರ್ಮಾಣಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದು, ಶೀಘ್ರದಲ್ಲಿ ಮಂದಾರಬೈಲು ಕುಟುಂಬ ಸುಸಜ್ಜಿತ ಮನೆ ಹೊಂದಲಿದೆ.
    – ಜೀವಂಧರ್ ಜೈನ್, ಪುತ್ತೂರು ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts