2016ರ ನೋಟು ಯಜ್ಞದ ಫಲಶ್ರುತಿ

ದೇಶದಲ್ಲಿ ಈಗ ಮನೆ ನಿರ್ಮಾಣ ಕ್ರಾಂತಿ ದೇಶದಲ್ಲಿ ಇಂದು ಅತ್ಯಂತ ಚುರುಕಾಗಿ ನಡೆದಿರುವ ಚಟುವಟಿಕೆ ಎಂದರೆ ಮನೆಗಳ ನಿರ್ವಣ. ನಗರದಲ್ಲಿ ಮಾತ್ರವಲ್ಲ, ಎಲ್ಲೆಲ್ಲೂ. ಹಳ್ಳಿ, ಪಟ್ಟಣ, ಉಪನಗರ ಪ್ರದೇಶಗಳಲ್ಲಿ ಇವತ್ತು ಮನೆಗಳ ನಿರ್ಮಾಣ ಅಪಾರ ಸಂಖ್ಯೆಯಲ್ಲಿ ಆಗಿದೆ. ಇದು ಈಚಿನ ಬೆಳವಣಿಗೆ. ಎರಡು ವರ್ಷಗಳ ಹಿಂದೆ ಹೀಗಿರಲಿಲ್ಲ.

ಇದ್ದಕ್ಕಿದ್ದಂತೆ ಮಧ್ಯಮ, ಮೇಲ್ಮಧ್ಯಮ, ಕೆಳ ಮಧ್ಯಮ ವರ್ಗದವರು ಹೀಗೆ ಮನೆಗಳ ನಿರ್ವಣದಲ್ಲಿ ತೊಡಗಲು ಕಾರಣವಾದರೂ ಏನು? ನೀವು ನಂಬುತ್ತೀರೋ ಬಿಡುತ್ತೀರೋ, ಇದಕ್ಕೆ ಕಾರಣ ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಹೀಗೆ ಮನೆಗಳ ನಿರ್ವಣದ ಅಲೆ ಉಂಟಾಗಲು ನಿಜವಾದ ಕಾರಣ ಎಂದರೆ 2016 ಅಂತ್ಯದಲ್ಲಿ ಬಂದ ನೋಟು ಯಜ್ಞ!

ಡಿಮಾನಿಟೈಸೇಷನ್ ಆಗಿದ್ದು ಕಪ್ಪು ಹಣವನ್ನು ಸದೆಬಡಿಯಲು. 500, 1000 ರೂಪಾಯಿ ನೋಟುಗಳ ಬಂಧನ ಕಾರಣದಿಂದಾಗಿ, 50 ದಿನಗಳ ಕಾಲ ನಡೆದ ಈ ನೋಟು ಯಜ್ಞದಲ್ಲಿ 15. 85 ಲಕ್ಷ ಕೋಟಿ ರೂಪಾಯಿ ಹಣವು ಬ್ಯಾಂಕ್ ವ್ಯವಸ್ಥೆಗೆ ಬಂದು ಸೇರಿತು. ಈ ಅಗಾಧವಾದ ಹಣದ ಆಗಮನದ ಪರಿಣಾಮವಾಗಿ ಬ್ಯಾಂಕ್​ನಲ್ಲಿ ಹಣದ ಉತ್ಪಾತ ಆಗಿ, ಹಣದ ನಿಯೋಜನೆಗಾಗಿ ಬ್ಯಾಂಕ್ ಬಡ್ಡಿದರ ಇಳಿಸುವ ಅವಕಾಶವುಂಟಾಯಿತು. ಹೀಗಾಗಿ ಕಡಿಮೆ ಬಡ್ಡಿದರದಲ್ಲಿ, 3 ಪರ್ಸೆಂಟ್ ಸಬ್ಸಿಡಿ ಮನೆ ಸಾಲ ಸಿಗುವ ಸಂದರ್ಭ ಸನ್ನಿವೇಶ ನಿರ್ವಣವಾಗಿದೆ. ಥ್ಯಾಂಕ್ಸ್ ಟು ಡಿಮಾನಿಟೈಸೇಷನ್!

ಹೀಗೆ ನೋಟು ಯಜ್ಞವು ದೇಶ ನಿರ್ಮಾಣ ಕಾರ್ಯದಲ್ಲಿ ದೊಡ್ಡ ಸಾಧನವಾಗಿ ರೂಪುಗೊಂಡು ಮಧ್ಯಮವರ್ಗಕ್ಕೆ ಕೆಳಮಧ್ಯಮ ವರ್ಗಕ್ಕೆ ಮನೆಕಟ್ಟುವ ದೊಡ್ಡ ಅವಕಾಶವನ್ನು ನಿರ್ವಿುಸಿದೆ. ಈಗ ನೋಟು ಯಜ್ಞ ವಿಚಾರದಲ್ಲಿ ಯಾರೂ ಉತ್ಸಾಹದಿಂದ ಮಾತನಾಡುವುದಿಲ್ಲ. ಎಲ್ಲಿ ಬಂತು ಕಪ್ಪುಹಣ? ಏನು ಕಪ್ಪುಹಣದ ವಿರುದ್ಧದ ಯಜ್ಞ ಮಾಡಿದ ಸಾಧನೆ ಎಂದು ಪ್ರಶ್ನೆ ಕೇಳುವವರು ಹೆಚ್ಚು ಪ್ರಚಾರ ಪಡೆಯುವಲ್ಲಿ ಹಿಂದೆ ಯಶಸ್ವಿಯಾಗಿದ್ದರು. ‘ನೋಟು ಯಜ್ಞ ಮುಗಿಯಿತು, ಎಲ್ಲಿ ಸಿಕ್ಕಿತು ಕಪ್ಪುಹಣ? ಎಲ್ಲ ವ್ಯರ್ಥ ಪ್ರಯತ್ನ. ಜನರನ್ನು ಗೋಳು ಹುಟ್ಟಿಸುವ ಕಾರ್ಯ ಇದು’ ಎಂದು ಟೀಕಿಸಿದವರು ಅಬ್ಬರದ ಪ್ರಚಾರ ಪಡೆದು ನೋಟು ಯಜ್ಞದ ಸಾರ್ಥಕತೆಯ ಬಗ್ಗೆ ಮಾತನಾಡುವವರೇ ಇಲ್ಲದಂತಾಗಿದೆ.

ನೋಟು ಯಜ್ಞದ ಉದ್ದೇಶ ಕಪ್ಪು ಹಣವನ್ನು ಬಲಿ ಹಾಕುವುದು ಆಗಿತ್ತು. ಕಪ್ಪು ಹಣ ಕೇವಲ ನೋಟುಗಳಲ್ಲಿ ತುಂಬಿರುವುದಿಲ್ಲ. ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ತುಂಬಿರುವುದೂ ಕಪ್ಪು ಹಣವೇ. ಚಿನ್ನಾಭರಣಗಳಲ್ಲಿ, ಭೂಮಿಯಲ್ಲಿ ಆಸ್ತಿಯಂತೆ ತುಂಬಿರುವುದು ಕಪ್ಪು ಹಣವೇ. ಈ ರೀತಿ ನಾನಾ ಬಗೆಯಲ್ಲಿ ಇರುವ ಕಪ್ಪು ಹಣವನ್ನು ಹಿಡಿಯುವುದರಲ್ಲಿ ನೋಟಿನ ಯಜ್ಞ ಸಂಪೂರ್ಣವಾಗಿ ಯಶಸ್ವಿಯಾಗಿದೆ. ರಿಯಲ್ ಎಸ್ಟೇಟ್​ನಲ್ಲಿ ಕಪ್ಪು ಹಣದ ದರ್ಬಾರು ಹೋಗಿದೆ. ಮನೆ, ಫ್ಲಾಟ್ ಖರೀದಿಸುವವರು, ಮಾರಾಟ ಮಾಡುವವರು ಇಬ್ಬರೂ ಇಂದು ಕಪ್ಪು ಹಣದ ಮಾತೇ ಆಡುವುದಿಲ್ಲ! ಇದು ದೊಡ್ಡ ಸಾಧನೆ.

ಅಷ್ಟು ಮಾತ್ರವಲ್ಲ, ಬ್ಯಾಂಕಿನಲ್ಲಿ ನೋಟು ಯಜ್ಞದ ಕಾಲದಲ್ಲಿ ತುಂಬಿದ 15.50 ಲಕ್ಷ ಕೋಟಿ ರೂಪಾಯಿ ಹಣ ಸಂಪನ್ಮೂಲವು ಇಂದು ದೇಶದಲ್ಲಿ ಮನೆ ನಿರ್ಮಾಣ ಕ್ರಾಂತಿಗೆ ನಾಂದಿ ಹಾಡಿದೆ! ನಿಜ, ನೋಟಿನ ರೂಪದಲ್ಲಿ 500-1000 ರೂಪಾಯಿಗಳಲ್ಲಿ ಅಡಗಿದ್ದ ಕಪ್ಪು ಹಣ ಕೈಗೆ ಸಿಗಲಿಲ್ಲ ಎಂಬ ಭಾವನೆ ಇದೆ. ಇದು ಅರ್ಧಸತ್ಯ. ಮುಂಚೆ ಕೂಡ 1000 ರೂಪಾಯಿ ಆಗಿನ ನೋಟುಗಳು ಬ್ಯಾಂಕಿನ ಆಚೆಗೆ ಬಂದ ಬಳಿಕ ಮೂರನೆಯ ಎರಡರಷ್ಟು ಮತ್ತೆ ಚಲಾವಣೆಗೆ ಬರುತ್ತಿರಲಿಲ್ಲ! 500 ರೂಪಾಯಿ ನೋಟುಗಳು ಶೇ.50ರಷ್ಟು ಹೊರಬರುತ್ತಿರಲಿಲ್ಲ. ಇದು ಆಗಿನ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಅವರು ಸರ್ಕಾರಕ್ಕೆ ಕೊಟ್ಟ ವರದಿಯ ಮಾಹಿತಿ. ಆ ಕಪ್ಪು ಹಣ ಈಗ ಬ್ಯಾಂಕಿಂಗ್ ವ್ಯವಸ್ಥೆಯ ಒಳಗೆ ಬಂದು ಕುಳಿತಿದೆ. ಒಳ್ಳೆಯದೇ. ಕಪ್ಪು ಹಣದ ಕದೀಮರು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಕಳ್ಳ ಕಿಂಡಿಗಳನ್ನು ಯಶಸ್ವಿಯಾಗಿ ಬಳಸಿಕೊಂಡು ತಮ್ಮಲ್ಲಿದ್ದ 500 -1000 ರೂಪಾಯಿ ನೋಟುಗಳನ್ನು ಬ್ಯಾಂಕಿನಲ್ಲಿ ತುಂಬಿಸಿದ್ದಾರೆ.

ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಟಿಎಂಗಳ ಪಾತ್ರ ದೊಡ್ಡದು. ಶೇ. 50ರಷ್ಟು ಎಟಿಎಂಗಳು ಖಾಸಗಿ ಜನರ ಕೈಯಲ್ಲಿ ಇವೆ. ಈ ಜನರು ಖಾಸಗಿ ಜನರಲ್ಲಿದ್ದ ಕಪ್ಪು ಹಣವನ್ನು ಪಡೆದು ಬಂದಂತಹ ಹೊಸ ನೋಟುಗಳು ಇವರ ಕೈಗೆ ತಲುಪಿದ್ದರಿಂದ ಕಪ್ಪು ಹಣ ನೇರವಾಗಿ ಸರ್ಕಾರದ ಜೋಳಿಗೆಗೆ ಬರಲಿಲ್ಲ. ಆದರೇನು? ‘ಅಳಿಯ ಅಲ್ಲ ಮಗಳ ಗಂಡ’ ಎಂಬಂತೆ ಈ ಹಣವು ಬ್ಯಾಂಕ್ ವ್ಯವಸ್ಥೆಯೊಳಗೆ ಬಂದು ಕುಳಿತಿದೆ. ಇದು ದೊಡ್ಡ ಸಾಧನೆ. ಈ ಹಣವು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಈಗ ತೊಡಗಿದೆ, ನಿಜಕ್ಕೂ ಶ್ಲಾಘನೀಯ.

ಬ್ಯಾಂಕುಗಳ ಆಚೆಗೆ ಕಪ್ಪು ಹಣವು ಈಗಲೂ ದೊಡ್ಡ ಪ್ರಮಾಣದಲ್ಲಿ ಇದೆ. ತಮಿಳುನಾಡಿನಲ್ಲಿ ಗೋದಾಮು ಒಂದರಲ್ಲಿ ಈಚೆಗೆ ಬೆಂಕಿ ಬಿತ್ತು. ಅಲ್ಲಿ ಅಗ್ನಿಶಾಮಕ ದಳದವರು ಬೆಂಕಿ ಆರಿಸಿ ಒಳಗೆ ನೋಡಿದಾಗ ಗೋದಾಮಿನ ಅರ್ಧಭಾಗ ಬೆಂಕಿಗೆ ಆಹುತಿ ಆಗಿರಲಿಲ್ಲ. ಅಲ್ಲಿ ಕಂಡ ದೃಶ್ಯ ಅಚ್ಚರಿ ಮೂಡಿಸುವಂತಿತ್ತು. ಏಕೆಂದರೆ, ಅಲ್ಲಿ ಗುಡ್ಡದಂತೆ ಇದ್ದದ್ದು 2000-500 ರೂಪಾಯಿ ಕಂತೆಗಳು! ನಮ್ಮ ಆಮದು ರಫ್ತು ವ್ಯವಹಾರದಿಂದ ಸತತವಾಗಿ, ಅಗಾಧ ಪ್ರಮಾಣದಲ್ಲಿ ಕಪ್ಪು ಹಣದ ಸೃಷ್ಟಿ ನಡೆದಿದೆ. ನಮ್ಮ ದೇಶದ ಬಂದರುಗಳಲ್ಲಿ ಇರುವ ಕಂಟೇನರ್​ಗಳಲ್ಲಿ ವಿದೇಶದಿಂದ ಬಂದ ಅಪಾರ ಪ್ರಮಾಣದ ನಗದು ಇರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ವಿದೇಶಗಳಿಂದ ಬರುವ ಕಪ್ಪು ಹಣದ ಪ್ರವಾಹವನ್ನು ನಿಯಂತ್ರಿಸುವುದು ಅಷ್ಟು ಸುಲಭದ ವಿಚಾರ ಅಲ್ಲ. ಏಕೆಂದರೆ ಕಪ್ಪು ಹಣದ ಕದೀಮರು ನಮ್ಮ ವ್ಯವಸ್ಥೆಯ ದೋಷಗಳನ್ನು, ಕಳ್ಳ ಕಿಂಡಿಗಳನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಈ ಕಳ್ಳಗಿಂಡಿಗಳನ್ನು ಮುಚ್ಚುವುದು ಸುಲಭಸಾಧ್ಯವಲ್ಲ.

ಆದರೂ ಕೆಲವು ಕ್ರಮಗಳು ಮೋದಿ ಸರ್ಕಾರಕ್ಕೆ ಒಳ್ಳೆಯ ಫಲಿತಾಂಶ ನೀಡಿವೆ. ಅದರಲ್ಲಿ ಬಹು ಮುಖ್ಯವಾದದ್ದು ರಿಯಲ್ ಎಸ್ಟೇಟ್ ವ್ಯವಹಾರ. ಹೀಗೇ ದೊಡ್ಡ ಸಾಧನೆ ಎಂದರೆ ಚಿನ್ನದಲ್ಲಿರುವ ಕಪ್ಪು ಹಣದ ವ್ಯವಹಾರವನ್ನು ಕಡಿಮೆ ಮಾಡುವುದು. ಆದರೆ, ಕಪ್ಪು ಹಣದ ನೋಟುಗಳ ಹತೋಟಿಯಲ್ಲಿ ಸರ್ಕಾರದ ಕ್ರಮಗಳು ಸೀಮಿತ ಯಶಸ್ಸನ್ನು ಪಡೆದಿವೆ. ನೋಟುಗಳ ರೂಪದಲ್ಲಿ ಇರುವ ಕಪ್ಪು ಹಣದ ನಿಯಂತ್ರಣ ಇನ್ನೂ ಸಂಪೂರ್ಣ ಹತೋಟಿಗೆ ಸಿಗುತ್ತಿಲ್ಲವಾದ್ದರಿಂದ ಈಗ ಚುನಾವಣೆ ಕಾಲವು ಕಪ್ಪು ಹಣದ ಚುಲಾವಣೆಗೆ ಸುಗ್ಗಿಕಾಲವಾಗಿದೆ. ಹೀಗಾಗಿ, ವರಮಾನ ತೆರಿಗೆ ವಿಭಾಗದ ಸಿಬ್ಬಂದಿ ಹೆಚ್ಚು ಚುರುಕಾಗಿ ಇರುವುದು ಈಗ ಸ್ಪಷ್ಟವಾಗಿದೆ.

(ಪ್ರತಿಕ್ರಿಯಿಸಿ: [email protected])