ಹುತಾತ್ಮ ಯೋಧನ ಅಂತ್ಯಕ್ರಿಯೆಗೂ ಮುಂಚೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ; ಮಗಳನ್ನು ಸೇನೆಗೆ ಸೇರಿಸುವ ಇಂಗಿತ

ನವದೆಹಲಿ: ಹುತಾತ್ಮ ಯೋಧನೋರ್ವನ ಅಂತ್ಯಕ್ರಿಯೆಯ ಕೆಲವು ಸಮಯ ಮುಂಚಿತವಾಗಿಯೇ ಯೋಧನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಕರುಣಾಜನಕ ಘಟನೆ ಜಮ್ಮು ಕಾಶ್ಮೀರದ ರಂಬನ್​ನಲ್ಲಿ ನಡೆದಿದೆ.

ಗಡಿಯಲ್ಲಿನ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದ ಲಾನ್ಸ್​ ನಾಯಕ್​ ರಂಜಿತ್​ ಸಿಂಗ್​ ಅವರ ಪಾರ್ಥೀವ ಶರೀರವನ್ನು ಮಂಗಳವಾರ ತವರಿಗೆ ತರಲಾಗಿತ್ತು. ಅಷ್ಟರಲ್ಲಾಗಲೇ ಅಂದರೆ ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಯೋಧನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಮಗುವಿಗೆ ಜನ್ಮ ನೀಡುವ ಕೆಲವೇ ಕ್ಷಣಗಳ ಮುಂಚೆ ಹುತಾತ್ಮ ಪತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಾಗಿ ಖಾತರಿ ಪಡಿಸಿದ್ದಳು. ಹೇಳಿದಂತೆಯೇ ಆಂಬ್ಯುಲೆನ್ಸ್​ ಸಹಾಯದಿಂದ ತನ್ನ ಹಸುಗೂಸಿನೊಂದಿಗೆ ಮಧ್ಯಾಹ್ನ ವೇಳೆ ನಡೆದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ವಿಧಿವಿಧಾನಗಳನ್ನು ಮುಗಿಸಿದಳು.

ಮೂಲಗಳ ಪ್ರಕಾರ ಹುತಾತ್ಮನ ಯೋಧನ ಪತ್ನಿಗೆ ಸೋಮವಾರ ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡು, ತಕ್ಷಣ ಆಕೆಯನ್ನು ರಂಬನ್​ ಆಸ್ಪತ್ರಗೆ ದಾಖಲಿಸಲಾಗಿತ್ತು.

ಸ್ಥಳೀಯರು ಹೇಳುವ ಪ್ರಕಾರ ಹುತಾತ್ಮ ಯೋಧನಿಗೆ ಹತ್ತು ವರ್ಷಗಳ ನಂತರ ಮಗುವಾಗಿತ್ತು. ಆದರೆ, ವಿಧಿಯಾಟವೇ ಬೇರೆ ಇತ್ತು. ಮಗು ಕಣ್ಣು ಬಿಡುವಷ್ಟರಲ್ಲಿ ತಂದೆ ಕಣ್ಣು ಮುಚ್ಚಿದ್ದು, ಇಂತಹ ಕರುಣಾಜನಕ ಕತೆ ಕೇಳಿದ ಎಲ್ಲರು ಕಂಬನಿ ಮಿಡಿದಿದ್ದಾರೆ. ಪತಿಯ ಅಗಲಿಕೆಯ ನಡುವೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಹುತಾತ್ಮ ಯೋಧನ ಪತ್ನಿ ತನ್ನ ಮಗುವನ್ನು ಸೇನೆಗೆ ಸೇರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಹುತಾತ್ಮ ಲಾನ್ಸ್​ ನಾಯಕ್ ರಂಜಿತ್​ ಸಿಂಗ್​ ಅಂತ್ಯಕ್ರಿಯೆಯನ್ನು ಸಕಲ ಮಿಲಿಟರಿ ಗೌರವದೊಂದಿಗೆ ನೆರವೇರಿಸಲಾಯಿತು. ಅಂತ್ಯಕ್ರಿಯೆ ವೇಳೆ ಸೇನಾಧಿಕಾರಿಗಳು, ಜಮ್ಮು ಕಾಶ್ಮೀರ ಪೊಲೀಸ್​ ಪಡೆ, ಜಿಲ್ಲಾಡಳಿತ ಹಾಗೂ ಸ್ಥಳೀಯ ರಾಜಕೀಯ ನಾಯಕರು ಉಪಸ್ಥಿತರಿದ್ದರು.

ಜಮ್ಮು ಮತ್ತು ಕಾಶ್ಮೀರದ ಮೂವರು ಲಘುಪದಾತಿ ದಳದ ಯೋಧರಲ್ಲಿ ಹುತಾತ್ಮ ಲಾನ್ಸ್​ ನಾಯಕ್ ರಂಜಿತ್​ ಸಿಂಗ್​ ಕೂಡ ಒಬ್ಬರಾಗಿದ್ದರು. ಭಾನುವಾರ ರಜೌರಿ ಜಿಲ್ಲೆಯ ಸುಂದರ್​ಬನಿ ಪ್ರದೇಶದಲ್ಲಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ನುಸುಳುಕೋರರ ವಿರುದ್ಧ ನಡೆದ ಗುಂಡಿನ ಚಕಮಕಿ ವೇಳೆ ಹುತಾತ್ಮರಾಗಿದ್ದರು. ಇದೇ ವೇಳೆ ಭಾರಿ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ಪಾಕಿಸ್ತಾನಿ ನುಸುಳುಕೋರರನ್ನು ಸದೆಬಡಿಯಲಾಗಿತ್ತು. ರಂಜಿತ್​ ಸಿಂಗ್​ 2003ರಲ್ಲಿ ಸೇನೆಗೆ ಸೇರಿದ್ದರು. (ಏಜೆನ್ಸೀಸ್​)