ಊಟಕ್ಕೆ ಬಂದವರಿಂದ ದರೋಡೆ

ಕೊಪ್ಪ: ತಾಲೂಕಿನ ಜಯಪುರದ ಅಲಗೇಶ್ವರ ರಸ್ತೆಯಲ್ಲಿ ಊಟ ಮಾಡುವ ನೆಪದಲ್ಲಿ ಬಂದ ಇಬ್ಬರು ಅಪರಿಚಿತರು ಹೋಟೆಲ್ ಮಾಲಕಿಯನ್ನು ಕೋಣೆಯೊಳಗೆ ಕಟ್ಟಿಹಾಕಿ ಲಕ್ಷಾಂತರ ರೂ. ಮೌಲ್ಯದ ನಗ, ನಗದು ದರೋಡೆ ಮಾಡಿದ್ದಾರೆ.

ಮನೆಯಲ್ಲೇ ಹೋಟೆಲ್ ನಡೆಸುತ್ತಿರುವ ಶಕುಂತಲಾ ಹಣ, ಬಂಗಾರ ಕಳೆದುಕೊಂಡವರು. ಮಂಗಳವಾರ ರಾತ್ರಿ 8.30ರ ಹೊತ್ತಿಗೆ ಜಯಪುರದ ಅಲಗೇಶ್ವರ ರಸ್ತೆಯಲ್ಲಿರುವ ಶಕುಂತಲಾ ಅವರ ಹೋಟೆಲ್​ಗೆ ಬಂದ ಓರ್ವ ಮಹಿಳೆ ಮತ್ತು ಪುರುಷ ಊಟ ಕೊಡುವಂತೆ ಕೇಳಿದ್ದಾರೆ. ಊಟವಾದ ನಂತರ ಶೌಚಗೃಹಕ್ಕೆ ಹೋಗಬೇಕೆಂದು ಮಹಿಳೆ ತಿಳಿಸಿದ್ದರಿಂದ ಶಕುಂತಲಾ ಮಹಿಳೆಯನ್ನು ಮನೆಯ ಶೌಚಗೃಹಕ್ಕೆ ಕರೆದುಕೊಂಡು ಹೋದರು. ಇದೇ ಸಂದರ್ಭದಲ್ಲಿ ಹಿಂದಿನಿಂದ ಬಂದ ಅಪರಿಚಿತ ಶಕುಂತಲಾ ಅವರನ್ನು ಪಕ್ಕದ ಕೋಣೆಗೆ ತಳ್ಳಿದ್ದಾನೆ. ಮಹಿಳೆಯು ಮುಂದಿನ ಬಾಗಿಲನ್ನು ಮುಟ್ಟಿ ಚೀಲಕ ಹಾಕಿದಳು. ನಂತರ ಇಬ್ಬರೂ ಸೇರಿ ಕೈಕಾಲುಗಳನ್ನು ಸೀರೆಯಿಂದ ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿ ಚಾಕು ತೋರಿಸಿ ಬೆದರಿಸಿ ಹಣ, ಬಂಗಾರ ದೋಚಿದ್ದಾರೆ. ರಾತ್ರಿ 8.30ರಿಂದ ಬುಧವಾರ ಬೆಳಗಿನ ಜಾವ 4 ಗಂಟೆಯವರೆಗೆ ಮನೆಯೊಳಗೇ ಇದ್ದು ಹಿಂಸೆ ನೀಡಿದ್ದಾರೆ. ಜೀವಭಯದಿಂದ ಶಕುಂತಲಾ ಸತ್ತಂತೆ ನಟಿಸಿದ್ದರಿಂದ ಬಿಟ್ಟು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಶಕುಂತಲಾ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು ಮಗ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾರೆ. ಮಗಳಿಗೆ ಮದುವೆಯಾಗಿದೆ. ಈಕೆಯ ಗಂಡ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಜೀವನ ನಿರ್ವಹಣೆಗಾಗಿ ಮನೆಯಲ್ಲೇ ಸಣ್ಣ ಹೋಟೆಲ್ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಬಂದಿದ್ದ ಇಬ್ಬರು 15 ದಿನಗಳ ಹಿಂದೆಯೂ ಬಂದು ಊಟ ಮಾಡಿ 4 ಊಟ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದರು. ಅವರು ಯಾರೆಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.

ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದರು. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ವಸೀಂ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.