ಹೋಟೆಲ್ ಬಾಡಿಗೆ ವಂಚನೆ ಪ್ರಕರಣಕ್ಕೆ ಇತಿಶ್ರೀ ಹಾಡಿದ ಅನಿಲ್‌ ಮೆಣಸಿನಕಾಯಿ

ಬೆಂಗಳೂರು: ನಟಿ ಪೂಜಾಗಾಂಧಿ ಜತೆ ಹೋಟೆಲ್‌ ಬುಕ್‌ ಮಾಡಿದ್ದ ಬಿಜೆಪಿ ನಾಯಕ ಅನಿಲ್‌ ಮೆಣಸಿನಕಾಯಿ ವಿರುದ್ಧ ಬಾಡಿಗೆ ವಂಚನೆ ದೂರು ದಾಖಲಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಅನಿಲ್‌ ಮೆಣಸಿನಕಾಯಿ ಬಿಲ್ ಪಾವತಿ ಮಾಡಿದ್ದು, ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.

ಬಿಲ್‌ ಪಾವತಿ ಹಿನ್ನೆಲೆಯಲ್ಲಿ ದೂರು ನೀಡಿದ್ದ ಹೋಟೆಲ್‌ ಸಿಬ್ಬಂದಿ ಪ್ರಕರಣವನ್ನು ವಾಪಸ್‌ ಪಡೆದಿದ್ದಾರೆ.
ಈ ಕುರಿತು ದಿಗ್ವಿಜಯ ನ್ಯೂಸ್‌ನೊಂದಿಗೆ ಮಾತನಾಡಿದ ನಟಿ ಪೂಜಾಗಾಂಧಿ, ಇದೆಲ್ಲ ಸುಳ್ಳು ಆರೋಪ. ರೂಮ್ ಪಡೆದಿದ್ದು ನಿಜ, ಆದರೆ ಸಂಪೂರ್ಣ ಹಣವನ್ನು ಈ ಮೊದಲೇ ಪಾವತಿಸಿದ್ದೇವೆ. ಸಣ್ಣ ಮಿಸ್ ಅಂಡರ್ ಸ್ಟ್ಯಾಂಡಿಂಗ್‌ನಲ್ಲಿ ಹೀಗೆಲ್ಲ ಮಾಡುತ್ತಿದ್ದಾರೆ. ಅನಿಲ್ ಮೆಣಸಿನಕಾಯಿ ಹಾಗೂ ನಾನು ಒಂದೇ ಪಕ್ಷದಲ್ಲಿದ್ದೇವೆ. ಅವರು ಕುಟುಂಬಕ್ಕೆ ಆತ್ಮೀಯರು ಅಷ್ಟೆ. ಅನಾವಶ್ಯಕವಾಗಿ ನನ್ನ ಹಾಗೂ ಅನಿಲ್ ಮೆಣಸಿನಕಾಯಿ ಅವರನ್ನು ಎಳೆದು ತರಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ

ಏ. 2016 ರಿಂದ ಮಾ. 2017ರ ವರೆಗೆ ಅಶೋಕ ಹೋಟೆಲ್‌ನ ಸರ್ವೀಸ್‌ ರೂಂ ಬುಕ್‌ ಮಾಡಲಾಗಿತ್ತು. ಇದರಿಂದಾಗಿ 26,22,344 ಲಕ್ಷ ರೂ. ಬಿಲ್ ಆಗಿತ್ತು. ನಂತರ 22,83,129 ಬಿಲ್ ಪಾವತಿ ಮಾಡಿ 3,53,040 ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದರು.

ಹೋಟೆಲ್​ಗೆ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಎರಡು ದಿನದ ಹಿಂದೆ ರಾಮ್ ಪ್ರಸಾದ್ ಎಂಬವರ ಜತೆಯಲ್ಲಿ ಎರಡು ಲಕ್ಷ ಹಣ ನೀಡಲಾಗಿದೆ. ಉಳಿದ ಹಣ ಕಟ್ಟಲು ನಟಿ ಕಾಲಾವಕಾಶ ಕೇಳಿದ್ದರು ಎನ್ನಲಾಗಿತ್ತು.

ಬಾಕಿ ಕೇಳಲು ಫೋನ್ ಮಾಡಿದರೆ ಅನಿಲ್ ಮೆಣಸಿನಕಾಯಿ ಕರೆ ಸ್ವೀಕರಿಸುತ್ತಿಲ್ಲ. ಪೂಜಾ ಗಾಂಧಿ ಕೇಳಿದರೆ ನನಗೂ ಇದಕ್ಕೂ ಸಂಬಂಧ ಇಲ್ಲ. ನೀವು ಅನಿಲ್ ಮೆಣಸಿನಕಾಯಿ ಅವರ ಬಳಿಯೇ ವಿಚಾರಿಸಿ ಎನ್ನುತ್ತಿದ್ದಾರೆ. ಇವರು ಉದ್ದೇಶಪೂರ್ವಕವಾಗಿಯೇ ವಂಚಿಸಿದ್ದಾರೆ ಎಂದು ಆರೋಪಿಸಿ ದಿ ಲಲಿತ್ ಅಶೋಕ್ ಹೋಟೆಲ್​​ನವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎನ್​ಸಿಆರ್ ದಾಖಲಿಸಿಕೊಂಡಿದ್ದರು. (ದಿಗ್ವಿಜಯ ನ್ಯೂಸ್)