ಹೋಟೆಲ್‌ಗಳ ನಾಮಫಲಕ ಕನ್ನಡ ಭಾಷೆಯಲ್ಲಿರಲಿ, ಜಯ ಕರ್ನಾಟಕ ರಕ್ಷಣಾ ಸೇನೆ ಒತ್ತಾಯ

ದೇವದುರ್ಗ: ಪಟ್ಟಣದ ಎಲ್ಲ ಅಂಗಡಿ, ಮುಂಗಟ್ಟು, ಹೋಟೆಲ್‌ಗಳ ನಾಮಫಲಕ ಕನ್ನಡದಲ್ಲಿ ಬರೆಸುವಂತೆ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಜಯ ಕರ್ನಾಟಕ ರಕ್ಷಣಾ ಸೇನೆ ಮುಖಂಡರು ಗುರುವಾರ ಮನವಿ ಸಲ್ಲಿಸಿದ್ದಾರೆ.

ಪಟ್ಟಣ ಸೇರಿ ತಾಲೂಕಿನ ವಿವಿಧ ಅಂಗಡಿ, ಮುಂಗಟ್ಟು, ಹೋಟೆಲ್ ಸೇರಿ ವಾಣಿಜ್ಯ ಮಳಿಗೆಗಳ ನಾಮಫಲಕ ಕನ್ನಡದಲ್ಲಿ ಬರೆಸಿಲ್ಲ. ಆಂಗ್ಲ, ಹಿಂದಿ ಭಾಷೆಯಲ್ಲಿ ನಾಮಫಲಕ ಬರೆಸಿದ್ದು, ಗ್ರಾಹಕರಿಗೆ ತೊಂದರೆಯಾಗುತ್ತಿದೆ. ನಾಮಫಲಕದಲ್ಲಿ ಕನ್ನಡ ಕಡ್ಡಾಯವಾಗಿ ಬರೆಸಬೇಕು ಎನ್ನುವ ನಿಯಮವಿದೆ. ಆದರೆ, ವ್ಯಾಪಾರಿಗಳು ಈ ನಿಯಮ ಪಾಲನೆ ಮಾಡದೇ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಎಲ್ಲ ಅಂಗಡಿ ಮುಂಗಟ್ಟು ಸೇರಿ ವ್ಯಾಪಾರಿ ಮಳಿಗೆಗಳ ನಾಮಫಲಕವನ್ನು ಕನ್ನಡದಲ್ಲಿ ಬರೆಸಬೇಕು. ಈ ಬಗ್ಗೆ ತಾಲೂಕು ಆಡಳಿತ ವ್ಯಾಪಾರಿಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಡಿ.ಎಂ.ಪಾಟೀಲ್ ಯಾಟಗಲ್, ಪದಾಧಿಕಾರಿಗಳಾದ ನಾಗರಡ್ಡಿಗೌಡ ಶಾವಂತಗೇರಾ, ಗುರುಪತ್ತಾರ ಕರ್ಕಿಹಳ್ಳಿ, ಸುರೇಶ ಹೂಗಾರ್, ವೆಂಕಟೇಶ ನಾಯಕ, ಹನುಮೇಶ, ಮಂಜುನಾಥ, ರಂಗನಾಥ ಗೌರಂಪೇಟೆ ಇತರರು ಇದ್ದರು.

Leave a Reply

Your email address will not be published. Required fields are marked *