ಮೈಸೂರು: ಕರೊನಾ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿ ತತ್ತರಿಸಿದ್ದು, ನಗರದ 4 ಸ್ಟಾರ್ ಹೋಟೆಲ್ ‘ಸದರ್ನ್ ಸ್ಟಾರ್’ ಮಂಗಳವಾರ ಅಧಿಕೃತವಾಗಿ ಬಾಗಿಲೆಳೆದಿದೆ.
ಮೂರೂವರೆ ದಶಕದಷ್ಟು ಹಳೆಯ ಹಾಗೂ ಪ್ರತಿಷ್ಠಿತ ಹೋಟೆಲ್ ಇದಾಗಿದ್ದು, ಕೇವಲ ಸದರ್ನ್ ಸ್ಟಾರ್ ಮಾತ್ರವಲ್ಲ ಹಲವು ಹೋಟೆಲ್‌ಗಳು ಈ ರೀತಿ ಆರ್ಥಿಕ ಹೊಡೆತಕ್ಕೆ ನಲುಗಿ ಹೋಗಿವೆ.
ಕರೊನಾ ಬಂದ ನಂತರ ಕೇವಲ ಪಾರ್ಸಲ್ ಸೇವೆಗಳಿಗೆ ಮಾತ್ರ ಹೋಟೆಲ್‌ಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಸ್ಟಾರ್ ಹೋಟೆಲ್ ಆಗಿರುವ ಸದರ್ನ್ ಸ್ಟಾರ್ ದೇಶ, ವಿದೇಶಿ ಪ್ರವಾಸಿಗರು, ದೊಡ್ಡ ಸಭೆ, ಸಮಾರಂಭಗಳಿಂದ ಬರುವ ಆದಾಯದಿಂದ ಮಾತ್ರ ಮುನ್ನಡೆಯಲು ಸಾಧ್ಯ. ಆದರೆ, ಸದ್ಯಕ್ಕೆ ಇಂಥ ಯಾವುದೇ ಚಟುವಟಿಕೆಗಳು ಇಲ್ಲದ ಹಿನ್ನೆಲೆಯಲ್ಲಿ ಹಾಗೂ ಮುಂದೆ ಎಷ್ಟು ದಿನ ಲಾಕ್‌ಡೌನ್ ಮುಂದುವರಿಯುವುದೋ ಎಂಬ ಸ್ಪಷ್ಟ ಚಿತ್ರಣ ಇಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹೋಟೆಲ್ ಅನ್ನು ಮುಚ್ಚಲಾಗಿದೆ.
ಹೋಟೆಲ್‌ನಲ್ಲಿ 200ಕ್ಕೂ ಹೆಚ್ಚು ನೌಕರರು ಇದ್ದು, ಅವರ ವೇತನ ಹಾಗೂ ನಿರ್ವಹಣೆಗೆ ಮಾಸಿಕ 40 ರಿಂದ 50 ಲಕ್ಷ ರೂ. ಅಂದಾಜು ವೆಚ್ಚವಾಗುತ್ತದೆ. ಆದರೆ, ಲಾಕ್‌ಡೌನ್ ಅವಧಿಯಲ್ಲಿ ನಯಾಪೈಸೆ ವರಮಾನ ಸ್ಟಾರ್ ಹೋಟೆಲ್‌ಗಳಿಗೆ ಬರುತ್ತಿಲ್ಲ. ಸಿಬ್ಬಂದಿ ವೇತನ ಹಾಗೂ ನಿರ್ವಹಣೆಗೆ ಪ್ರತಿ ತಿಂಗಳು ಲಕ್ಷಾಂತರ ರೂ.ವಿನಿಯೋಗಿಸುವ ಅನಿವಾರ್ಯತೆ ಇದೆ. ಸದರ್ನ್ ಸ್ಟಾರ್ ಹೋಟೆಲ್ ಕೇವಲ ಮೈಸೂರು ಮಾತ್ರವಲ್ಲದೆ ಬೆಂಗಳೂರು, ಹಾಸನ, ದಾವಣಗೆರೆ, ಬೆಳಗಾವಿಯಲ್ಲೂ ಇದರ ಘಟಕ ಹೊಂದಿದ್ದು, ಇದೀಗ ಅಲ್ಲಿನ ನೌಕರರು ಸಹ ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಹೋಟೆಲ್ ಅನ್ನು ಅನಿವಾರ್ಯವಾಗಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಸೇವೆಯಿಂದ ಬಿಡುಗಡೆಗೊಳಿಸಿದ ಭತ್ಯೆ, ಬಾಕಿ ವೇತನ ಹಾಗೂ ಇತರ ಭತ್ಯೆಗಳನ್ನು ನಿಯಮ ಪ್ರಕಾರ ಪಾವತಿ ಮಾಡಲಾಗುವುದು ಎಂದು ಹೋಟೆಲ್ ಆಡಳಿತ ಮಂಡಳಿ ಭರವಸೆ ನೀಡಿದೆ. ಈ ಕುರಿತು ಪ್ರತಿಯೊಂದು ನೌಕರರಿಗೆ ರಿಜಿಸ್ಟ್ರರ್ ಪೋಸ್ಟ್ ಮೂಲಕ ಮಾಹಿತಿ ನೀಡಲಾಗಿದೆ.
ಚಟುವಟಿಕೆಗೆ ಅವಕಾಶ ನೀಡಿ
ಸರ್ಕಾರಕ್ಕೆ ಅಧಿಕೃತವಾಗಿ ತೆರಿಗೆ ಪಾವತಿ ಮಾಡಲಾಗುತ್ತಿದೆಯಾದರೂ ಹೋಟೆಲ್‌ಗಳನ್ನು ತೆರೆಯಲು ಸರ್ಕಾರ ಅವಕಾಶ ಮಾಡಿಕೊಡುತ್ತಿಲ್ಲ. ಆದರೆ, ತೆರಿಗೆ ವ್ಯಾಪ್ತಿಗೆ ಬರದ ಪುಟ್‌ಪಾತ್ ವ್ಯಾಪಾರಕ್ಕೆ ಅವಕಾಶಕ್ಕೆ ಮಾಡಿಕೊಡಲಾಗಿದೆ. ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ? ನಮಗೂ ವಹಿವಾಟಿಗೆ ಅವಕಾಶ ನೀಡಿ. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸುತ್ತೇವೆ ಎಂಬುದು ಹೋಟೆಲ್ ಉದ್ಯಮಿಗಳ ಒತ್ತಾಯ.
ರೈತರಿಗೂ ಸಂಕಷ್ಟ
ರೈತರ ಸಂಕಷ್ಟ ಪರಿಹಾರವಾಗಲು ಪೂರ್ಣ ಪ್ರಮಾಣದಲ್ಲಿ ಹೋಟೆಲ್ ತೆರೆಯಲು ಅವಕಾಶ ನೀಡಬೇಕಾಗಿದೆ. ಹೋಟೆಲ್ ಉದ್ಯಮ ಬಂದ್ ಆಗಿರುವ ಹಿನ್ನೆಲೆಯಲ್ಲಿ ತರಕಾರಿ ಹಾಗೂ ಹಾಲಿನ ಬೇಡಿಕೆ ಕಡಿಮೆ ಆಗಿದ್ದು, ಇದು ರೈತರ ಆರ್ಥಿಕತೆಯ ಮೇಲೂ ಪರಿಣಾಮ ಬೀರಲು ಪ್ರಾರಂಭವಾಗಿದೆ. ಹೋಟೆಲ್ ಉದ್ಯಮ ಪ್ರಾರಂಭವಾದರೆ ರೈತರ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುವ ಸಾಧ್ಯತೆ ಇದೆ.
ಕೇವಲ ಪಾರ್ಸಲ್ ಸರ್ವೀಸ್‌ನಿಂದ ಹೋಟೆಲ್ ಉದ್ಯಮವನ್ನು ಮುನ್ನಡೆಸಲು ಸಾಧ್ಯವಿಲ್ಲ. ಇದರಿಂದ ನಷ್ಟವೇ ಹೊರತು ಲಾಭ ಇಲ್ಲ. ಹೋಟೆಲ್‌ಗೆ ಬಂದು ಜನರಿಗೆ ಆಹಾರ ಸೇವಿಸುವ ಅವಕಾಶ ನೀಡದಿದ್ದರೆ ಜಿಲ್ಲೆಯಲ್ಲಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಶೇ.30ರಷ್ಟು ಹೋಟೆಲ್‌ಗಳು ಮುಚ್ಚುವ ಮತ್ತು ಇದರಿಂದ ಹಲವು ನೌಕರರು ಬೀದಿಗೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ವ್ಯಾಪಾರಕ್ಕೆ ಅವಕಾಶ ನೀಡುವ ಮೂಲಕ ಹೋಟೆಲ್ ಉದ್ಯಮ ಉಳಿಸಬೇಕು.
ನಾರಾಯಣಗೌಡ, ಅಧ್ಯಕ್ಷ, ಹೋಟೆಲ್ ಮಾಲೀಕರ ಸಂಘ