ಹೊಸ್ತೋಟರಿಂದ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ

ಉಡುಪಿ: ಹೊಸ್ತೋಟ ಮಂಜುನಾಥ ಭಾಗವತರು ಉತ್ತಮ ಕೃತಿಕಾರರಾಗಿ, ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಬಣ್ಣಿಸಿದರು.
ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಭಾನುವಾರ ಪ್ರಸಂಗಕರ್ತ ಹೊಸ್ತೋಟ ಮಂಜುನಾಥ ಭಾಗವತ ರಚಿಸಿದ ‘ಲೀಲಾವತಿ ಪರಿಣಯ’ ಯಕ್ಷಗಾನ ಪ್ರಸಂಗ ಕೃತಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ದಲಿತ ಸಾಹಿತಿ ಮಹದೇವಯಂಕ ಹಳ್ಕೇರ್ ಮತ್ತು ಹೊಸ್ತೋಟ ಈ ಕೃತಿಯ ಮೂಲಕ ಯಕ್ಷಗಾನ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಇದು ಅಭಿನಂದನೀಯ ಎಂದರು.

ಪ್ರಸಂಗಕರ್ತ ಹೊಸ್ತೋಟ ಮಂಜುನಾಥ ಭಾಗವತ ಮಾತನಾಡಿ, ಹಳ್ಳಿಯ ಬದುಕಿನ ವ್ಯಕ್ತಿಗೆ ಸಾಮಾಜಿಕ ಚಿಂತನೆ, ರಾಷ್ಟ್ರೀಯ ಪ್ರಜ್ಞೆ ಬರುವುದು ಕಷ್ಟ ಸಾಧ್ಯ. ಆದರೆ ಮಹದೇವಯಂಕ ಹಳ್ಕೇರ್ ಎಲ್ಲ ವಿಚಾರವಂತರಿಗಿಂತ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದಾರೆ ಎಂದರು. ರಂಗಕರ್ಮಿ ಪ್ರೊ.ಉದ್ಯಾವರ ಮಾಧವ ಆಚಾರ್ಯ, ಕಥೆಗಾರ ಮಹದೇವಯಂಕ ಹಳ್ಕೇರ್, ಯಕ್ಷಗಾನ ಕಲಾ ಕೇಂದ್ರ ಆಡಳಿತಾಧಿಕಾರಿ ವರದೇಶ್ ಹಿರೇಗಂಗೆ ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಅಭಿನವ ಪ್ರಕಾಶನದ ರವಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಕಲಾರಂಗ ಉಡುಪಿ ಹಾಗೂ ಬೆಂಗಳೂರಿನ ಅಭಿವನ ಪ್ರಕಾಶನದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆಸ್ಪತ್ರೆಯಿಂದಲೇ ಬಂದರು!
ಹೊಸ್ತೋಟ ಮಂಜುನಾಥ ಭಾಗವತರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಯಂಕಾಲ ಒಂದು ಗಂಟೆ ಬಿಡುವು ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೊಸ್ತೋಟರು ಕಾರ್ಯಕ್ರಮದಲ್ಲಿ ಮಾತನಾಡುವಾಗ ಸಾಕಷ್ಟು ಭಾವುಕರಾದರು.

Leave a Reply

Your email address will not be published. Required fields are marked *