ಹಾಸ್ಟೆಲ್ ಬಾಲಕಿಯರಿಗೆ ಕಿಡಿಗೇಡಿಗಳ ಕಾಟ

ಕ್ರಮ ಕೈಗೊಳ್ಳಲು ವಿದ್ಯಾಥಿನಿಯರ ಪ್ರತಿಭಟನೆ

ಲಿಂಗಸುಗೂರು: ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ (ವೃತ್ತಿಪರ) ವಸತಿ ನಿಲಯಕ್ಕೆ ರಾತ್ರಿ ವೇಳೆ ಕಿಡಿಗೇಡಿಗಳು ಆಗಮಿಸಿ ತೊಂದರೆ ನೀಡುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿದ್ಯಾರ್ಥಿನಿಯರು ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವಸಾಗರ ವೃತ್ತದ ಬಳಿಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಶನಿವಾರ ಮಧ್ಯರಾತ್ರಿ ವಿದ್ಯಾರ್ಥಿನಿ ಅಭ್ಯಾಸ ಮಾಡುವ ವೇಳೆ ಒಳಗೆ ನುಗ್ಗಿದ ಅಪರಿಚಿತ ಅನುಚಿತವಾಗಿ ವರ್ತಿಸಿದ್ದಾನೆ. ನಿಲಯಕ್ಕೆ ಅಪರಿಚಿತ ವ್ಯಕ್ತಿಗಳು ರಾತ್ರಿ ವೇಳೆ ಬರುತ್ತಿರುವುದು ನಾಲ್ಕನೇ ಬಾರಿ. ನಿಲಯದ ಸುತ್ತಮುತ್ತ ಕಿಡಿಗೇಡಿಗಳು ಜಮಾಯಿಸಿ ಅಸಭ್ಯವಾಗಿ ಕೂಗುತ್ತಿದ್ದಾರೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಿಲಯದಲ್ಲಿ 160 ವಿದ್ಯಾರ್ಥಿನಿಯರಿದ್ದು, ಮೂಲ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೆ ನಿಲಯಕ್ಕೆ ಮೂಲ ಸೌಕರ್ಯ ಕಲ್ಪಿಸಿ ಬಾಲಕಿಯರಿಗೆ ರಕ್ಷಣೆ ನೀಡಬೇಕೆಂದು ನಿಲಯಕ್ಕೆ ಭೇಟಿ ನೀಡಿದ ವಾರ್ಡನ್ ಸುಮಂಗಲಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಚೇರಿ ಪ್ರಭಾರ ಅಧೀಕ್ಷಕ ರವೀಂದ್ರಗೆ ಒತ್ತಾಯಿಸಿದರು.

ಬಳಿಕ ಅಧಿಕಾರಿ ರವೀಂದ್ರ ಮಾತನಾಡಿ, ನಿಲಯಕ್ಕೆ ಇನ್ನೆರಡು ದಿನದಲ್ಲಿ ಸಿಸಿ ಕ್ಯಾಮರಾ, ವಿದ್ಯುತ್ ಇನ್ವರ್ಟರ್ ಅಳವಡಿಕೆ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.